ಪೆಟ್ರೋಲ್ ಮೇಲಿನ ತೆರಿಗೆ ಇಳಿಕೆ : ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ಕ್ರಮ : ಸಿಎಂ

ಹುಬ್ಬಳ್ಳಿ 17:  ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಇಳಿಕೆ ಆರ್ಥಿಕತೆಯನ್ನು ಅವಲಂಬಿಸಿದ್ದು,  ಉಪ ಚುನಾವಣೆ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ  ಆರ್ಥಿಕ ಪರಿಸ್ಥಿತಿ  ಸುಧಾರಣೆ ಆಗಿದ್ದರೆ, ಪೆಟ್ರೋಲ್ ಮೇಲಿನ ತೆರಿಗೆ ಇಳಿಕೆಗೆ ಅವಕಾಶಗಳಿವೆ ಎಂದರು. ಆರ್ಥಿಕ ಪರಿಸ್ಥಿತಿ ಸುಧಾರಿಸದಿದ್ದಲ್ಲಿ ತೆರಿಗೆ ಇಳಿಕೆ ಕಷ್ಟಸಾಧ್ಯ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ

ಹಾನಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಇಂದು ಪ್ರಚಾರ ಕೈಗೊಳ್ಳುತ್ತಿದ್ದೇನೆ. ಸಿಂದಗಿ ಕ್ಷೇತ್ರದಲ್ಲಿಯೂ ಪ್ರಚಾರ ಮಾಡುತ್ತೇನೆ. ಈ ಎರಡೂ ಕ್ಷೇತ್ರಗಳಲ್ಲಿ ಹೆಚ್ವಿನ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಂಪೂರ್ಣ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು.

ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಸಂಗೂರು ಸಕ್ಕರೆ ಕಾರ್ಖಾನೆಗೆ ತನ್ನದೇ ಆದ ಇತಿಹಾಸವಿದೆ. ಆ ಕಾರ್ಖಾನೆ ಮುಚ್ಚುವಲ್ಲಿ ಕಾಂಗ್ರೆಸ್ ಪಕ್ಷದವರ ಕೊಡುಗೆ ಇದೆ. ಪರಿಸ್ಥಿತಿಯ ಪರಿಶೀಲನೆ ಮಾಡಿ ರೈತರ ಕಬ್ಬು ಅರೆಯುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದರು.

2400 ಕೋಟಿ ರೂಪಾಯಿ ಹಣವನ್ನು ಹಾನಗಲ್ ಗೆ ನೀಡಿದ್ದೇನೆ. ಹಾನಗಲ್ ಅಳಿಯ ಸಿಎಂ ಬಸವರಾಜ ಡೋಣೂರ ಬೊಮ್ಮಾಯಿ ಏನು ಕೊಟ್ಟಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಸಿಎಂ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.  2400 ಕೋಟಿ ಎಲ್ಲಿದೆ ? ಎಲ್ಲಿಂದ ಕೊಟ್ಟಿದ್ದಾರೆ ಎಂದು ತೋರಿಸಲಿ. ಇದಕ್ಕೆಲ್ಲಾ ಸೂಕ್ತ ಉತ್ತರ ನೀಡಲಾಗುವುದು ಎಂದರು.

More News

You cannot copy content of this page