ಹಾನಗಲ್: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ನಡೆಸಿದವರು. ಆದರೆ ಹಾನಗಲ್ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾಗಿರುವ ಯೋಜನೆಗಳನ್ನು ಒಮ್ಮೆ ಬಂದು ನೋಡಿ ಎಂದು ಸವಾಲು ಹಾಕಿದರು.
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಇಂದು ಅಧಿಕೃತವಾಗಿ ತಮ್ಮನ್ನು ತೊಡಗಿಸಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರ ಶಾಶ್ವತ ಅಲ್ಲ. ಜನರ ವಿಶ್ವಾಸ ಗಳಿಸುವುದು ಮುಖ್ಯ
ಹಾನಗಲ್ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಬಂದು ನೋಡಿ. ಕಾಂಗ್ರೆಸ್ ತರಹ ಆಶ್ವಾಸನೆಗಳು ಕಾಗದದಲ್ಲಿ ಉಳಿದಿಲ್ಲ. ಕಾರ್ಯರೂಪಕ್ಕೆ ಬಂದಿವೆ. ಇಲ್ಲಿನ ಅಭಿವೃದ್ದಿ ತೋರಿಸಲು ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡುತ್ತೇನೆ ಎಂದು ಪ್ರಚಾರದ ಸಂದರ್ಭದಲ್ಲಿ ಬೊಮ್ಮಾಯಿ ಹೇಳಿದರು.
ಸಿದ್ದರಾಮಯ್ಯನವರೇ ಪ್ರಚಾರಕ್ಕೆ ಹೋದಾಗ ನೋಡಿ ೬೦ ಗ್ರಾಮಗಳ ೨೮೨ ಕೆರೆಗಳನ್ನ ತುಂಬಿಸುವ ಕಾರ್ಯ ಹೇಗೆ ನಡೆಯುತ್ತಿದೆ ಎಂಬುದನ್ನು ಒಮ್ಮೆ ನೋಡಿ ಎಂದರಲ್ಲದೆ, ನಾವು ರಾಜಕಾರಣದಲ್ಲಿ ೩೦ ವರ್ಷ ಜನರ ವಿಶ್ವಾಸಗಳಿಸಿ ಅವರ ಕಷ್ಟ ಸುಖದಲ್ಲಿ ಭಾಗಿಯಾಗಲು ಬಂದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಅಧಿಕಾರ ಶಾಶ್ವತವಲ್ಲ ವಿಶ್ವಾಸ ಬಹಳ ಮುಖ್ಯ ನಿಮ್ಮೊಂದಿಗೆ ಬೆರೆತು ನಿಮ್ಮೊಂದಿಗೆ ಬಾಳಿ ನಿಮ್ಮೊಂದಿಗೆ ಮಣ್ಣಲ್ಲಿ ಮಣ್ಣಾಗುತ್ತೇವೆ ಎಂದು ಭಾವನಾತ್ಮಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ ಪ್ರಚಾರದ ವೇಳೆ ಮಾತನಾಡಿದರು.

ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ, ಈ ಪಕ್ಷದಲ್ಲಿರೋ ಬಹುತೇಕರು ಆರೋಪಿಗಳೇ, ಯಾರ ಹೆಸರನ್ನು ಹೇಳುವುದು ಯಾರ ಹೆಸರನ್ನು ಬಿಡುವುದು ಎಲ್ಲರ ಮೇಲೆ ಆರೋಪಗಳಿವೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಅವರು ನುಡಿದರು.
ಹುಡುಗಾಟಿಕೆಯಿಂದ, ಸುಳ್ಳು ಪ್ರಚಾರದಿಂದ ಹಾನಗಲ್ ನಲ್ಲಿ ಮತ ಗಳಿಸಲು ಸಾಧ್ಯವಿಲ್ಲ. ಮೈಸೂರನಲ್ಲೇ ಜನರು ನಿಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ, ನಿಮ್ಮ ಆಟವನ್ನು ನಡೆಯಲು ಬಿಟ್ಟಿಲ್ಲ, ಹಾನಗಲ್ ಕ್ಷೇತ್ರದ ಜನ ಇಲ್ಲಿ ನಿಮ್ಮ ಆಟ ನಡೆಸಲು ಬಿಡುವುದಿಲ್ಲ ಎಂದು ಬೊಮ್ಮಾಯಿ ಅಬ್ಬರಿಸಿದರು.
ನಾಲ್ಕು ದಶಕಗಳ ಕಾಲ ಹಾನಗಲ್ ಮತಕ್ಷೇತ್ರದ ಸೇವೆಯನ್ನು ಸಿ ಎಂ ಉದಾಸಿ ಮಾಡಿದ್ದರು. ಅವರ ಅಕಾಲಿಕ ನಿಧನದಿಂದ ಹಾನಗಲ್ ಉಪಚುನಾವಣೆ ಎದುರಿಸುವಂತಾಗಿದೆ. ಸಿಎಂ ಉದಾಸಿಯವರಿಗೆ ಸಿಎಂ ಉದಾಸಿಯವರೇ ಸಾಟಿ. ಕಾಂಗ್ರೆಸ್ ಪಕ್ಷದವರು ಸಿಎಂ ಉದಾಸಿಯವರಿಗೆ ಬಿಜೆಪಿ ಏನು ಮಾಡಿದೆ ಅಂತ ಕೇಳುತ್ತಾರೆ ಎಂದರು.

ಸುಳ್ಳು ಮಾತುಗಳಿಗೆ ಮರುಳಾಗುವ ಅವಶ್ಯಕೆತೆ ಇಲ್ಲ. ಬಿಜೆಪಿ ನಿಮ್ಮೊಂದಿಗೆ ನಿಮ್ಮ ಅಭಿವೃದ್ಧಿಯೊಂದಿಗೆ ಶಾಶ್ವತವಾಗಿ ನಿಂತಿದೆ ಎಂದು ಬೊಮ್ಮಾಯಿ ಹೇಳಿದರು. ಇಲ್ಲಿನ ಕ್ಷೇತ್ರದ ಜನರ ಬೇಡಿಕೆ ಇತ್ತು ಎಲ್ಲ ಕೆರೆಗಳನ್ನು ತುಂಬಿಸಬೇಕು ರೈತರ ಬಾಳು ಹಸನಾಗಬೇಕು ಅಂತ ಉದಾಸಿಯವರಿಗೆ ಈ ಕ್ಷೇತ್ರದ ಜನ ಹೇಳಿದ್ದರು. ಸಿಎಂ ಉದಾಸಿಯವರ ಜನಪರ ಕಾಳಜಿಯಿಂದ ಯಡಿಯೂರಪ್ಪ ಅವರ ಕಾಳಜಿಯಿಂದ ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡಿದೆ ಎಂದರು.
ಕೊವಿಡ್ ಸಂದರ್ಭದಲ್ಲಿ ಬಿಜೆಪಿಯಿಂದ ಸಮರ್ಥ ಆಡಳಿತ
ನಿನ್ನೆ ಮೊನ್ನೆ ಕ್ಷೇತ್ರದಲ್ಲಿ ಒಡಾಡಿ ಈಗ ಮತ ಕೇಳಲು ಬರುತ್ತಿದ್ದಾರೆ ಕಾಂಗ್ರೆಸ್ ನವರು ಇಂತಹ ಅದೆಷ್ಟೋ ಜನರನ್ನ ಇಲ್ಲಿನ, ಮತದಾರರು ನೋಡಿದ್ದಾರೆ. ಹಾನಗಲ್ ಜನ ಮಾತಿಗೆ ಮರುಳಾಗುವವರಲ್ಲ. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಕೋವಿಡ್ ವಿರುದ್ದ ಸಮರ ಸಾರಿದ್ದರು. ಕೊವಿಡ್ ಸಂದರ್ಭದಲ್ಲಿ ರಾಜ್ಯವನ್ನು ಸಮರ್ಥವಾಗಿ ಯಡಿಯೂರಪ್ಪನವರ ನಾಯಕತ್ವದಲ್ಲಿ ನಡೆದಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ವ್ಯಾಕ್ಸಿನ್ ನೀಡಿದ ಹೆಗ್ಗಳಿಕೆ ಬಿಜೆಪಿ ಸರ್ಕಾರಕ್ಕಿದೆ ಎಂದು ವಿವರಿಸಿದರು.
ಕೊವಿಡ್ ಸಂಕಷ್ಟದಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಟ್ಟು, ಆಕ್ಸಿಜನ್ ಪ್ಲಾಂಟ್ ವ್ಯವಸ್ಥೆ ಮಾಡಿ ರಾಜ್ಯದ ಜನರ ಜೀವ ಉಳಿಸಿದ್ದು ಬಿಜೆಪಿ ಸರ್ಕಾರ. ಹಾನಗಲ್ ನಲ್ಲಿ ೨೦ ಸಾವಿರಕ್ಕೂ ಹೆಚ್ಚು ಆಹಾರದ ಕಿಟ್ ಕೊವಿಡ್ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ ನೀಡಲಾಗಿದೆ ಎಂದರು.