ಬೀದರ್ : ನಮ್ಮ ಭಾಗದಲ್ಲಿ ನವರಾತ್ರಿ, ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಮನೆ ಮನೆಯಲ್ಲೂ ದಸರಾ ನಡೆಯುತ್ತದೆ. ಶ್ರದ್ಧಾ, ಭಕ್ತಿಯಿಂದ ದಸರಾ ಹಬ್ಬವನ್ನು ಈ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಅಭಿಪ್ರಾಯಪಟ್ಟರು.
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಕರಕನಳ್ಳಿ ಗ್ರಾಮದಲ್ಲಿ ನಡೆದ ‘ಶ್ರೀಶ್ರೀಶ್ರೀ ಅಮ್ಮೂರು ತಾಯಿಯ 17 ನೇಯ ಜಾತ್ರಾ ಮಹೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಮಾತ್ರವಲ್ಲ ನಮ್ಮ ಭಾಗದಲ್ಲಿ ಕೂಡ ನವರಾತ್ರಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಣೆ ಮಾಡಲಾಗುತ್ತದೆ. ಮನೆಮನೆಗಳಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಹಬ್ಬವನ್ನು ವಿಶೇಷವಾಗಿ ನೀತಿ ನಿಯಮ, ಕಟ್ಟುಪಾಡುಗಳೊಂದಿಗೆ ಆಚರಿಸಲಾಗುತ್ತದೆ ಎಂದರು.
ಈ ಭಾಗದ ಜನರು ಹೆಚ್ಚಾಗಿ ತುಳಜಾಪುರದ ತುಳಜಾ ಭವಾನಿ ಮಾತೆಯ ದೇವಸ್ಥಾನಕ್ಕೆ ಹೋಗುತ್ತಾರೆ. ನಾನು ಕೂಡ ಆ ತಾಯಿಯ ಭಕ್ತನಾಗಿದ್ದೇನೆ. ಈ ಹಿಂದೆ ಮೂರು ಭಾರಿ ಬೀದರ್ ನಿಂದ ತುಳಜಾಪುರಕ್ಕೆ ಸೈಕಲ್ ನಲ್ಲಿ ತೆರಳಿ ತಾಯಿಯ ದರ್ಶನ ಪಡೆದಿದ್ದೇನೆ. ಸಚಿವನಾಗಿದ್ದಾಗಲೂ ಸೈಕಲ್ ನಲ್ಲೇ ತಾಯಿಯ ದರ್ಶನಕ್ಕೆ ತೆರಳಿದ್ದೆ. ಅಂತಹ ಶಕ್ತಿ ಆ ತಾಯಿಗೆ ಇದೆ. ತಾಯಿಯನ್ನು ಜಗಜನನಿ ಎಂದು ಕೂಡ ಕರೆಯುತ್ತಾರೆ ಎಂದು ತಿಳಿಸಿದರು.

ವಿಶೇಷವಾಗಿ ಕರಕನಳ್ಳಿಯಲ್ಲಿ ತಾಯಿಯ ಮೂರ್ತಿ ಸ್ಥಾಪಿಸಿ 17ನೇ ವರ್ಷದ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ತಾಯಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಂಗೀತ ದರ್ಬಾರ್ ಕಾರ್ಯಕ್ರಮವನ್ನು ಪುಟ್ಟರಾಜ ಗವಾಯಿಗಳ ಶಿಷ್ಯರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಪುಟ್ಟರಾಜ ಗವಾಯಿಗಳನ್ನು ನಾವು ಎಷ್ಟು ಸ್ಮರಿಸಿದರು ಕೂಡ ಕಡಿಮೆ. ಅಂಥವರ ಶಿಷ್ಯರು ಇಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವುದು ವಿಶೇಷವಾಗಿದೆ. ಈ ವಿಶೇಷ ಸಂದರ್ಭದಲ್ಲಿ ನಾನು ಕೂಡ, ತಾಯಿ ಭವಾನಿ ಮಾತೆಯಲ್ಲಿ ಈ ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಅಭಿವೃದ್ಧಿ ಎಲ್ಲವನ್ನೂ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಪೂಜ್ಯರಾದ ಹಿರೇಮಠ ಸಂಸ್ಥಾನ ಬೇಮಳಖೇಡಾದ ಚಂದ್ರಶೇಖರ ಶಿವಚಾರ್ಯರು, ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಹಿರೇಮಠ ಧೋತ್ತರಗಾಂವನ ಶಿವಕುಮಾರ ಶಾಸ್ತ್ರಿಗಳು, ಉಡುಮನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಜಕುಮಾರ ನೆಲವಾಳ, ತಬಲಾವಾದಕರಾದ ವಿಶ್ವನಾಥ ಐನೋಳ್ಳಿ, ಮುಖಂಡರಾದ ಸಂತೋಷ ರಾಸೂರ, ಬಸವರಾಜರಡ್ಡಿ, ಶಿವಶರಣಪ್ಪ, ಗಂಗಾಧರ ಪಾಟೀಲ್, ಅಶೋಕರಡ್ಡಿ, ಪಾಂಡಪ್ಪ ನಿಡವಂಚ, ಮಲ್ಲಪ್ಪ ಮನ್ನಾಎಖೇಳ್ಳಿ, ಶರಣಪ್ಪ ಖಾಶೆಂಪುರ್, ಶಂಕರ ಜೋತಗೊಂಡ, ಸಂತೋಷ, ಗೋಪಾಲರೆಡ್ಡಿ ನಿರ್ಣ, ವಿಠಲರೆಡ್ಡಿ ಸೇರಿದಂತೆ ಅನೇಕರಿದ್ದರು..