ಬೆಂಗಳೂರು: ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಸ್ತಾಪ ಸದ್ಯಕ್ಕಿಲ್ಲ, ಕಾರ್ಖಾನೆಗೆ ಬೇಕಾಗಿರುವ ಅಗತ್ಯ ಹಣಕಾಸು ನೆರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ರೈತ ಮುಖಂಡರುಗಳ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಅವರು ಕಾರ್ಖಾನೆ ಖಾಸಗೀಕರಣವನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮೂರು ತಿಂಗಳಲ್ಲಿ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ ಅವರು, ಕಬ್ಬಿನ ಉಪ ಉತ್ಪನ್ನಗಳನ್ನು ತಯಾರಿಸಲು ಆದ್ಯತೆ ನೀಡಲಾಗುವುದು, ಕೂಡಲೆ ದಕ್ಷ ಅಧಿಕಾರಿಯನ್ನು ಎಂಡಿಯಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಅಗತ್ಯ ಯಂತ್ರೋಪಕರಣಗಳನ್ನು ಸರಿಪಡಿಸಲು ಈಗಿನಿಂದಲೇ ಸೂಚಿಸಲಾಗುವುದು, ಇದಕ್ಕೆ ಬೇಕಾಗುವ ಅಗತ್ಯ ಹಣಕಾಸು ನೆರವನ್ನು ನೀಡಲಾಗುವುದು ಎಂದು ವಿವರಿಸಿದರು. ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಅವರು ಮಂಡ್ಯ ಸಕ್ಕರೆ ಕಾರ್ಖಾನೆ ನಿಲ್ಲಬಾರದು, ಇದು ಮಂಡ್ಯ ಜನರ ಜೀವನಾಡಿ, ಹಲವು ಜನರ ಬದುಕು, ಜೀವ ಇದರಲ್ಲಿದೆ, ಸಕ್ಕರೆ ಕಾರ್ಖಾನೆ ಪ್ರಾರಂಭವಾಗಬೇಕೆಂಬ ಆಸೆಯಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರೈತರು ನಿರಂತರವಾಗಿ ಹೋರಾಟ ಮಾಡ್ತಿದ್ದೀರೆ, ಸರ್ಕಾರ ಸಾಕಷ್ಟು ಹಣವನ್ನ ಹೂಡಿಕೆ ಮಾಡಿದೆ, ಅಲ್ಲಿನ ಆಡಳಿತಗಾರರು ಭ್ರಷ್ಟಾಚಾರ ಮಾಡಿದ್ದಾರೆ, ಇದನ್ನೆಲ್ಲ ನಾವು ಗಮನಿಸಬೇಕಿದೆ, ಕಾರ್ಖಾನೆ ಪ್ರಾರಂಭಕ್ಕೆ ಹಲವು ಭಾರಿ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದ ಅವರು, ಸಿದ್ದರಾಮಯ್ಯ ಹಣಕಾಸಿನ ನೆರವು ಕೊಟ್ಟಿದ್ದರು, ಯಡಿಯೂರಪ್ಪ ಇದ್ದಾಗ ೧೫೦ ಕೋಟಿ ನೀಡಿದ್ದರು, ಆದರೆ ಕಾರ್ಖಾನೆ ನಡೆಸುವುದು ಆಗಿಲ್ಲ ಎಂದರು.
ರೈತರ ಅಭಿಪ್ರಾಯವನ್ನ ಗಮನಕ್ಕೆ ತೆಗೆದುಕೊಂಡು, ಅವರು ಹೇಳಿದಂತೆ ಕಾರ್ಖಾನೆಗೆ ಪುನಶ್ಚೇತನ ಮಾಡಬೇಕಾಗಿದೆ. ಇದನ್ನ ಮತ್ತಷ್ಟು ವಿಳಂಬ ಮಾಡುವುದು ಬೇಡ, ಸರ್ಕಾರವೇ ನಡೆಸೋದಾದ್ರೆ ಸಂತೋಷ, ಆದರೆ ಸರ್ಕಾರದ ಕಡೆಯಿಂದ ಸ್ಪಷ್ಟ ನಿರ್ದೇಶನ ಸಿಕ್ಕಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ತಿಳಿಸಿದರು.
ಸರ್ಕಾರವೇ ಪ್ರಾರಂಭ ಮಾಡಲು ನಿರ್ಧರಿಸಿರುವುದು ಸಂತಸ ತಂದಿದೆ, ಕಾರ್ಖಾನೆ ಆರಂಭಿಸಲು ಪಕ್ಷಾತೀತವಾಗಿ ಸಹಕರಿಸಲಾಗುವುದು ಎಂದು ಶಾಸಕ ಡಿ ಸಿ ತಮ್ಮಣ್ಣ ತಿಳಿಸಿದರು. ಮಂಡ್ಯ ಜಿಲ್ಲೆ ರೈತರು ಒಂದು ತಿಂಗಳಿಂದ ಹೋರಾಟ ಮಾಡಿದ್ದಾರೆ, ಸಿಎಂ ಬೊಮ್ಮಾಯಿ ಸರ್ಕಾರದ ಸ್ವಾಮ್ಯದಲ್ಲೇ ನಡೆಸೋದಾಗಿ ಭರವಸೆ ನೀಡಿದ್ದಾರೆ, ಇದು ಸಂತಸ ತಂದಿದೆ ಎಂದು ಶಾಸಕ ಅನ್ನದಾನಿ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆ ಹಿತರಕ್ಷಣಾ ಸಮಿತಿ ದೊಡ್ಡ ಹೋರಾಟ ಮಾಡಿದ್ದೆವು, ಎಲ್ಲಾ ಸಂಘಟನೆ ಪರವಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ, ಇದು ಖುಷಿ ತಂದಿದೆ ಎಂದರು. ರೈತ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಸುನಂದ ಜಯರಾಮ್ ಮಾತನಾಡಿ, ಸಿಎಂ ಪ್ರತಿಭಟನೆ ಸ್ಥಳಕ್ಕೆ ಬಂದು 18ರಂದು ಸಭೆ ಕರೆದಿದ್ರು. ಇಂದು ಸರ್ಕಾರವೇ ಮುಂದುವರೆಸೋದಾಗಿ ಹೇಳಿದೆ. 65ಸಕ್ಕರೆ ಕಾರ್ಖಾನೆಗಳಿಗೆ ಇದು ಮಾದರಿಯಾಗಿದೆ. ಮಂಡ್ಯ ಜಿಲ್ಲೆ ಘನತೆ ಎತ್ತಿ ಹಿಡಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇವತ್ತಿನ ಸಭೆಯಲ್ಲಿ ವಾಸ್ತವ ಸಮಸ್ಯೆ ಸಿಎಂ ಮುಂದಿಟ್ಟಿದ್ದೇವೆ, ರೈತರಿಗೆ ಸಮಸ್ಯೆ ಆಗದಂತೆ ನಿರ್ಧಾರ ಕೈಗೊಳ್ಳಿ ಅಂತ ಸಭೆಯಲ್ಲಿ ಹೇಳಿದೆ, ಒಟ್ಟಿನಲ್ಲಿ ಕಾರ್ಖಾನೆ ಪುನಾರಂಭ ಆಗಬೇಕು, ಆದಷ್ಟು ಬೇಗ ಆರಂಭ ಆಗಬೇಕು ಎಂದು ಸಂಸದೆ ಸುಮಲತಾ ತಿಳಿಸಿದರು.
ಸಭೆಯಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ತಕ್ಷಣವೇ ತಜ್ಞರ ಸಮಿತಿ ನೇಮಕ ಮಾಡಲು ಸೂಚಿಸಲಾಗಿದ್ದು. ಮೂರು ತಿಂಗಳಲ್ಲಿ ತಜ್ಞರ ಸಮಿತಿ ವರದಿ ನೀಡಲಿದೆ, ಮುಂದಿನ ವರ್ಷದಿಂದ ಕಬ್ಬು ನುರಿಸಯಲು ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗುವುದು, ಮುಂದಿನ ಮೂರು ತಿಂಗಳಲ್ಲಿ ಆಡಳಿತಾಧಿಕಾರಿ ನೇಮಕ, ಅಗತ್ಯ ಹಣ ಬಿಡುಗಡೆ ಹಾಗೂ ಬೇಕಾದ ಎಲ್ಲ ಯಂತ್ರೋಪಕರಣ ರಿಪೇರಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು.