ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳದ್ದು ಪರ್ಸೆಂಟೇಜ್‌ ಸರಕಾರಗಳು : ಹೆಚ್‌ಡಿ ಕುಮಾರಸ್ವಾಮಿ ಟೀಕೆ

ಕಲಬುರಗಿ : ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಷ್ಟ್ರೀಯ ಪಕ್ಷಗಳ ಸರಕಾರಗಳು ಪರ್ಸೆಂಟೇಜ್‌ ಸರಕಾರಗಳಾಗಿದ್ದು, ಸ್ವತಃ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೇ ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ. ಈ ಮೂಲಕ ಆ ಪಕ್ಷಗಳ ಭ್ರಷ್ಟಮುಖ ಜನರ ಮುಂದೆ ಅನಾವರಣಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.‌ಡಿ.ಕುಮಾರಸ್ವಾಮಿ ಆರೋಪಿಸಿದರು.
ಸಿಂಧಗಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಲು ಇಂದು ಕಲಬುರಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು 10% ಸರಕಾರ ಎಂದು ಕರೆಯುತ್ತಿದ್ದರು. ಈಗ ಅವರದ್ದೇ ಪಕ್ಷದ ಸರಕಾರವನ್ನು ಕಾಂಗ್ರೆಸ್‌ ಪಕ್ಷದವರು 20% ಸರಕಾರ ಎಂದು ಕರೆಯುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.


ಜನರ ಹಣ ಲೂಟಿ ಹೊಡೆಯುವುದರಲ್ಲಿ ಹಾಗೂ ಪರ್ಸೆಂಟೇಜ್‌ ತೆಗೆದುಕೊಳ್ಳುವುದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ದೊಡ್ಡ ಪೈಪೋಟಿಯೇ ಇದೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.
ಪೊಲೀಸ್‌ ವಸತಿ ಸಮುಚ್ಛಯ ಬೀಳುತ್ತಿದೆ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಇದ್ದಾಗ ಬೆಂಗಳೂರಿನಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಪೊಲೀಸ್‌ ವಸತಿ ಸಮುಚ್ಛಯ ಈಗ ಬೀಳುವ ಹಂತದಲ್ಲಿದೆ. ಕಳಪೆ ಕಾಮಗಾರಿ, ಪರ್ಸಂಟೇಜ್‌ ವ್ಯವಹಾರ ಇತ್ಯಾದಿ ಅಕ್ರಮಗಳಿಂದ ರಾಜ್ಯವನ್ನು ರಕ್ಷಣೆ ಮಾಡುವ ಪೊಲೀಸ್‌ ಕುಟುಂಬಗಳು ಅಪಾಯಕ್ಕೆ ಸಿಲುಕಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ನಾಡನ್ನು ಕಾಪಾಡುವ ಪೊಲೀಸ್‌ ಸಿಬ್ಬಂದಿ ವಾಸ ಮಾಡುವ ಕ್ವಾಟ್ರಸ್‌ ನಿರ್ಮಾಣದಲ್ಲಿ ಕಳಪೆ, ಅವ್ಯವಹಾರ ನಡೆದಿದೆ ಎಂದರೆ ಉಳಿದ ಯೋಜನೆಗಳ ಕಥೆ ಏನು? ಎಷ್ಟು ಅಕ್ರಮ ನಡೆದಿದೆ? ಎಷ್ಟು ಪರ್ಸೆಂಟೇಜ್‌ ವ್ಯವಹಾರವಾಗಿದೆ ಎಂಬುದು ಜನರಿಗೆ ಗೊತ್ತಾಗಲಿ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ವಿವಾದ ಆರಂಭಿಸಿದ್ದಾರೆ, ನಾನು ಅಂತ್ಯ ಹಾಡುತ್ತೇನೆ
ಸಿದ್ದರಾಮಯ್ಯ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲು ನನಗೇನು ಬೇರೆ ಕೆಲಸ ಇಲ್ಲವೇ? ಮುಸ್ಲಿಂ ಅಭ್ಯರ್ಥಿಗಳ ರಾಜಕೀಯ ವಿವಾದ ಶುರು ಮಾಡಿದ್ದು ಯಾರು? ಅವರೇ ಅಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರತಿಕ್ರಯಿಸಿದರು.
ಹಾನಗಲ್‌ ಮತ್ತು ಸಿಂಧಗಿಯಲ್ಲಿ ಜೆಡಿಎಸ್‌ ಪಕ್ಷ ಇಬ್ಬರು ಸುಶಿಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. ಆದರೆ, ಜೆಡಿಎಸ್‌ ಸೆಕ್ಯುಲರ್‌ ಮತಗಳನ್ನು ವಿಭಜಿಸಿ ಬಿಜೆಪಿಗೆ ಗೆಲ್ಲಲು ಅವಕಾಶ ಮಾಡಿಕೊಡಲು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ ಎಂದು ಸಿದ್ದರಾಮಯ್ಯ ಮೊದಲು ಹುಯಿಲೆಬ್ಬಿಸಿದ್ದರು. ಬಹುಶಃ ಅದಕ್ಕೆ ನಾನೇ ಅಂತ್ಯ ಹಾಡಬೇಕಾಗುತ್ತದೆ, ಅಂಥ ಸ್ಥಿತಿಗೆ ನನ್ನನ್ನು ದೂಡಿದ್ದಾರೆ ಎಂದು ಹೆಚ್‌ಡಿಕೆ ಅವರು ಮಾರ್ಮಿಕವಾಗಿ ತಿಳಿಸಿದರು.


ನಾನು ಯಾವುದೇ ಕಾರಣಕ್ಕೂ ಅವರ ತಂಟೆಗೆ ಹೋಗುವುದಿಲ್ಲ, ಅವರೇ ಪದೇಪದೆ ನಮ್ಮ ಸುದ್ದಿಗೆ ಬರುತ್ತಿದ್ದಾರೆ. ನಮಗೆ ಮಾಡಲು ಸಾಕಷ್ಟು ಕೆಲಸಗಳಿವೆ, ಹೇಳಲು ಅನೇಕ ವಿಚಾರಗಳಿವೆ. ಕಾಂಗ್ರೆಸ್‌ ಪಕ್ಷದ ಹೆಸರೇಳಿಕೊಂಡು ಮತ ಕೇಳಬೇಕಾದ ಕರ್ಮ ನಮಗಿಲ್ಲ. ಆದರೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಹೆಸರೇಳಿಕೊಂಡೇ ಮತಯಾಚನೆ ಮಾಡುತ್ತಿದ್ದಾರೆಂದು ಅವರು ತರಾಟೆಗೆ ತೆಗೆದುಕೊಂಡರು.
ನೀರಾವರಿ ಯೋಜನೆ ನಿಲ್ಲಿಸಿದ ಬಿಜೆಪಿ ಸರಕಾರ
ನಾಗಠಾಣ ಮತ್ತು ಇಂಡಿ ವಿಧಾನಸಭೆ ಕ್ಷೇತ್ರದ ಸುಮಾರು 28,000 ಹೆಕ್ಟೇರ್‌ ಭೂಮಿಗೆ ನೀರೊದಗಿಸುವ ಯೋಜನೆಗೆ ನಾನು ಮುಖ್ಯಮಂತ್ರಿ ಆಗಿದ್ದಾಗ ರೇವಣಸಿದ್ದೇಶ್ವರ ವೃದ್ಧಿ ಯೋಜನೆ ಅಡಿಯಲ್ಲಿ ಬಜೆಟ್‌ ಮೂಲಕವೇ 250 ಕೋಟಿ ರೂ.ಗಳನ್ನು ಮೀಸಲಿರಿಸಿದ್ದೆ. ಆದರೆ, ಬಿಜೆಪಿ ಸರಕಾರ ಅದಕ್ಕೆ ತಡೆಯೊಡ್ಡಿದೆ ಎಂದು ಹೆಚ್‌ ಡಿ ಕುಮಾರಸ್ವಾಮಿ ಅವರು ಆರೋಪಿಸಿದರು.
ಯೋಜನೆಗೆ ಬಿಜೆಪಿ ಸರಕಾರ ತಡೆಯೊಡ್ಡಿದ್ದನ್ನು ಪ್ರತಿಭಟಿಸಿ ಆ ಭಾಗದ ರೈತರು ಕಳೆದ ೪೦ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಕೆಲ ದಿನದ ಹಿಂದೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್‌ ಡಿ ದೇವೇಗೌಡರು ಅಲ್ಲಿನ ರೈತರನ್ನು ಭೇಟಿಯಾಗಿ ಅವರ ಬೇಡಿಕೆಗೆ ದನಿಗೂಡಿಸಿದ್ದಾರೆ ಹಾಗೂ ನಿಮ್ಮ ಪ್ರತಿಭಟನೆಯನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಯೋಜನೆ ಕಾರ್ಯಗತ ಮಾಡುವ ನಿಟ್ಟಿನಲ್ಲಿ ನಿಮ್ಮ ಜತೆ ನಿಂತು ಹೋರಾಟ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

More News