ಬೆಂಗಳೂರು : ವಾಲ್ಮೀಕಿ ಸಮುದಾಯದ ಶ್ರೇಯೋಭಿವೃದ್ಧಿಗೆ ನ್ಯಾಯ ಮತ್ತು ಅವಕಾಶಗಳನ್ನು ಕೊಡುವ ನಿಟ್ಟಿನಲ್ಲಿ
ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ ಕಾರ್ಯೋನ್ಮುಖವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಇಂದು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, 21 ನೇ ಶತಮಾನದಲ್ಲಿ ಈ ಜನಾಂಗವೂ ಕೂಡ ಎಲ್ಲರಂತೆ ಮುಂದೆ ಬರಬೇಕು.

ವಿದ್ಯೆ, ಉದ್ಯೋಗ ಮುಂತಾದ ಎಲ್ಲ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದರು. ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರರು. ವ್ಯಕ್ತಿಯಲ್ಲಿ ಬದಲಾವಣೆಯಾದರೆ ದೈವತ್ವದ ಹಂತವನ್ನು ತಲುಪಲು ಸಾಧ್ಯ ಎನ್ನುವುದನ್ನು ವಾಲ್ಮೀಕಿ ನಿರೂಪಿಸಿದ್ದಾರೆ ಎಂದರು.
ಮಹರ್ಷಿ ವಾಲ್ಮೀಕಿ ಅವರು ಜಗತ್ತು ಕಂಡ ಅತ್ಯಂತ ಶ್ರೇಷ್ಠ ಮಹರ್ಷಿ ಮತ್ತು ಕವಿಗಳು. ಅವರು ರಚಿಸಿರುವ ರಾಮಾಯಣ ವಿಶ್ವದ ಹತ್ತು ಶ್ರೇಷ್ಠ ಸಾಹಿತ್ಯದಲ್ಲಿ ಒಂದು. ರಾಮಾಯಣ ಇಡೀ ಭಾರತ ದೇಶದ ಪ್ರತಿಯೊಬ್ಬರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಆದರ್ಶವಾಗಿದೆ. ನಾವೆಲ್ಲರೂ ಅದರಿಂದ ಜೀವನದ ಪಾಠವನ್ನು ಕಲಿಯುವಂತಿದೆ ಎಂದರು.

ವಾಲ್ಮೀಕಿ ಸಚಿವಾಲಯ ಆರಂಭಿಸಲಾಗಿದೆ
ವಾಲ್ಮೀಕಿ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ವಾಲ್ಮೀಕಿ ಸಚಿವಾಲಯವನ್ನು ಆರಂಭಿಸಲಾಗಿದೆ ಎಂದು ತಿಳಿಸಿದ ಸಿಎಂ, ೭೬೦೦ ಕೋಟಿ ರೂಪಾಯಿ ಹಣವನ್ನು ಈ ಇಲಾಖೆಗೆ ಈಗಾಗಲೇ ನೀಡಲಾಗಿದೆ ಎಂದರು. ಸಮುದಾಯದ ಸಮಗ್ರ ಅಭಿವೃದ್ಧಿಗೆ ಇದು ಸಹಾಯಕವಾಗಲಿದೆ ಎಂದು ತಿಳಿಸಿದರು.
ಎಸ್ಸಿ, ಎಸ್ಟಿ ಮೀಸಲಾತಿ ವಿಚಾರ
ಸಮುದಾಯ ಬೆಳೆಯುತ್ತಿದೆ, ಇದಕ್ಕೆ ಸಮನಾದ ಮೀಸಲಾತಿ ಇರಬೇಕು, ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ, ಸ್ವಾಮೀಜಿ ಆಶಯದಂತೆ ಸರ್ಕಾರ ನಡೆಯುತ್ತದೆ ಎಂದು ತಿಳಿಸಿದರು. ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಸಹಾಯವನ್ನ ಮಾಡಲಾಗುತ್ತದೆ ಎಂದರು.

ಮೀಸಲಾತಿ ನೀಡುವುದು ಸುಲಭದ ಕೆಲಸವಲ್ಲ, ಆದ್ರೆ ಮೀಸಲಾತಿ ಬಗ್ಗೆ ನಾವು ಚಿಂತನೆ ನಡೆಸಿದ್ದೇವೆ, ಆದಷ್ಟು ಬೇಗ ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರು ಜನ ಸಾಧಕರಿಗೆ ಪ್ರಶಸ್ತಿನೀಡಿ ಪುರಸ್ಕರಿಸಲಾಯಿತು. ಹಾಗೆಯೇ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಪ್ರಸನ್ನಾನಂದ ಪುರಿ ಸ್ವಾಮೀಜಿ ಹಾಗೂ ಇನ್ನಿತರಗಣ್ಯರು ಪಾಲ್ಗೊಂಡಿದ್ದರು.