ಬೆಂಗಳೂರು: ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಮ್ಮ ತಾಯಿಯವರಾದ ಸೀತಮ್ಮ ತಿಮ್ಮೇಗೌಡ ಅವರ ಹುಟ್ಟುಹಬ್ಬವನ್ನು ಕಳೆದ ವಾರವಷ್ಟೇ ಆಚರಿಸಿದರು. ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಆಚರಿಸಿದ ಸೀತಮ್ಮ ಅವರಿಗೆ ಮಾತ್ರ ಒಂದು ಬೇಡಿಕೆ ಈಡೇರಿಲ್ಲ ಅನ್ನೋ ಬೇಸರ ಮೂಡಿತ್ತು. ಇದನ್ನು ಮನಗಂಡ ಅವರ ಪುತ್ರ ಸೋಮಶೇಖರ್, ಕೋರಿಕೆ ಏನೆಂದು ಕೇಳಿ ಅದನ್ನು ಈಡೇರಿಸಿದರು.

ಹಾಗಾದ್ರೆ ಅವರ ತಾಯಿಯವರು ಹುಟ್ಟುಹಬ್ಬಕ್ಕೆ ಕೇಳಿದ ಕೊಡುಗೆ ಏನು..? ಅದನ್ನು ಪೂರೈಸಿದ ಬಗೆ ಹೇಗೆ ಎಂಬ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಸಚಿವ ಎಸ್ ಟಿ ಸೋಮಶೇಖರ್ ಅವರು ತಮ್ಮ ತಾಯಿ ಸೀತಮ್ಮ ತಿಮ್ಮೇಗೌಡ ಅವರ ಹುಟ್ಟು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿದ್ದರು. ಹುಟ್ಟುಹಬ್ಬಕ್ಕೆ ಏನು ಕೊಡಬೇಕು ತಮಗೆ ಬೇಕು ಎಂದು ಸಚಿವರು ತಮ್ಮ ಮಾತೃಶ್ರೀಯವರಲ್ಲಿ ಕೇಳಿಕೊಂಡಾಗ, ಅವರು ನನಗೆ 94 ವರ್ಷ ವಯಸ್ಸಾಗಿದೆ. ನನಗೆ ಏನೇನು ಅವಶ್ಯಕತೆಗಳಿವೆಯೋ ಅದನ್ನೆಲ್ಲ ನೀನು ಪೂರೈಸಿದ್ದೀಯಾ. ಆದ್ರೆ ಒಂದೇ ಒಂದು ಆಸೆ ನೇರವೇರಿಸು ಎಂದು ಕೋರುತ್ತಾರೆ.
ಅದಕ್ಕೆ ಸೋಮಶೇಖರ್ ಅವರು ತಮ್ಮ ತಾಯಿ ಆಸೆಯನ್ನು ತಿಳಿದುಕೊಳ್ಳುತ್ತಾರೆ. ರಾಜಕೀಯ ನಾಯಕರಾದ, ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಅವರ ಅಭಿಮಾನಿ. ಅವರನ್ನು ಒಮ್ಮೆ ಭೇಟಿ ಮಾಡಬೇಕು ಎಂದು ಸೀತಮ್ಮ, ಸೋಮಶೇಖರ್ ಬಳಿ ಕೇಳಿಕೊಳ್ಳುತ್ತಾರೆ.

ಸಚಿವರು ಈ ವಿಷಯವನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಗಳಾದ ದಿನೇಶ್ ಗೂಳಿಗೌಡ ಅವರಿಗೆ ತಿಳಿಸುತ್ತಾರೆ. ಅವರು ಎಸ್. ಎಂ. ಕೃಷ್ಣ ಅವರ ಬಳಿ ಸಚಿವರ ಮಾತೃಶ್ರೀಯವರ ಹುಟ್ಟುಹಬ್ಬದ ಕೋರಿಕೆಯನ್ನು ತಿಳಿಸುತ್ತಾರೆ. ತಮ್ಮ ಮನೆಗೆ ಯಾವಾಗ? ಯಾವ ಸಮಯಕ್ಕೆ ಸಚಿವರ ತಾಯಿಯವರನ್ನು ಕರೆದುಕೊಂಡು ಬರಬೇಕೆಂಬುದನ್ನು ಮನವಿ ಮಾಡಿಕೊಳ್ಳುತ್ತಾರೆ.

ಇದನ್ನು ಕೇಳಿದ ಎಸ್.ಎಂ. ಕೃಷ್ಣ ಅವರು ಸಚಿವರ ಮಾತೃಶ್ರೀಯವರು ನನಗಿಂತ ಹಿರಿಯರು. ಹಾಗಾಗಿ ಅವರು ನಮ್ಮ ಮನೆಗೆ ಬರುವುದು ಉಚಿತವಲ್ಲ. ಹಾಗಾಗಿ ನಾನೇ ಅವರ ಮನೆಗೆ ಬಂದು ಭೇಟಿ ಮಾಡುತ್ತೇನೆ ಎಂದು ಹೇಳುತ್ತಾರೆ.
ಸಚಿವರ ನಿವಾಸಕ್ಕೆ ಎಸ್.ಎಂ.ಕೃಷ್ಣ
ಕೊಟ್ಟ ಮಾತಿನಂತೆ ಮಂಗಳವಾರ ರಾತ್ರಿ ಸಚಿವರಾದ ಎಸ್ ಟಿ ಸೋಮಶೇಖರ್ ಅವರ ಸದಾಶಿವನಗರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಸ್ .ಎಂ. ಕೃಷ್ಣ ಅವರು ಭೇಟಿ ಕೊಡುತ್ತಾರೆ. ಸಚಿವರ ಮಾತೃಶ್ರೀ ಅವರನ್ನು ಭೇಟಿಯಾಗಿ ಕೆಲಕಾಲ ಮಾತನಾಡುವ ಮೂಲಕ ಅವರ ಕೋರಿಕೆಯನ್ನು ಈಡೇರಿಸುತ್ತಾರೆ.

ಇತ್ತ ತಮ್ಮ ತಾಯಿಯ ಕೋರಿಕೆಯನ್ನು ನೆರವೇರಿಸಲು ಕೃಷ್ಣ ಅವರೇ ತಮ್ಮ ಮನೆಗೆ ಆಗಮಿಸಿದ್ದಕ್ಕೆ ಸಚಿವರಾದ ಸೋಮಶೇಖರ್ ಅವರೂ ಸಹ ಕಣ್ಮನ ತುಂಬಿ ಬಂತು. ಒಂದೆಡೆ ಹಿರಿಯ ರಾಜಕಾರಣಿ, ಇನ್ನೊಂದೆಡೆ ತಮ್ಮ ರಾಜಕೀಯ ಗುರು, ಎಲ್ಲಾದ್ದಕ್ಕೂ ಆತ್ಮೀಯತೆ ಕಂಡು ಸಚಿವರ ಹೃದಯ ತುಂಬಿ ಬಂದಿತ್ತು. ಈ ಸಂದರ್ಭದಲ್ಲಿ ಸಚಿವರ ಪತ್ನಿ ರಾಧಾ ಸೋಮಶೇಖರ್ ಹಾಗೂ ಪುತ್ರ ನಿಶಾಂತ್ ಸೋಮಶೇಖರ್ ಇದ್ದರು.
ಎಸ್ ಎಂ ಕೃಷ್ಣ ಅವರು ದಸರಾ ಉದ್ಘಾಟನೆಗೆ ಕಾರಣಕರ್ತರಾಗಿದ್ದ ಸೋಮಶೇಖರ್
ನಾಡಹಬ್ಬ ದಸರಾವನ್ನು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಉದ್ಘಾಟಿಸಲು ಸಚಿವ ಎಸ್ ಟಿ ಸೋಮಶೇಖರ್ ಅವರು ಕಾರಣಕರ್ತರಾಗಿದ್ದರು. ಕೊನೆ ಘಳಿಗೆಯಲ್ಲಿ ಎಸ್ ಎಂ ಕೃಷ್ಣ ಅವರ ಹೆಸರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಿದ್ದು ಸೋಮಶೇಖರ್. ಹಾಗೆಯೇ ಈ ಹಿಂದೆ ಸೋಮಶೇಖರ್ ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಲು ಪರೋಕ್ಷವಾಗಿ ಎಸ್ ಎಂ ಕೃಷ್ಣ ಅವರೂ ಕಾರಣಕರ್ತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.




