ಗದಗ : ರಾಜಕೀಯ ನಾಯಕರು ಒಬ್ಬರ ಮೇಲೆ ಮತ್ತೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ, ಇದು ಸಮಾಜದ ಮೇಲೆ ದೊಡ್ಡ ದುಷ್ಪರಿಣಾಮ ಬೀರಲಿದೆ ಎಂದು ಪೇಜಾವರ ಶ್ರೀ ಅದೋಕ್ಷಜ ಮಠದ ವಿಶ್ವ ಪ್ರಸನ್ನ ತೀರ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಸರೆರಚಾಟದ ದುಷ್ಪರಿಣಾಮಗಳು ಏನು ಅನ್ನೋದನ್ನ ರಾಜಕೀಯ ನಾಯಕರು ಗಮನಿಸುತ್ತಿಲ್ಲ, ಇದರಿಂದ ಸಮಾಜಕ್ಕೆ ಇದೊಂದು ದೊಡ್ಡ ಹಾನಿಯಾಗಲಿದೆ, ಹಾನಿಯಾಗುವುದಕ್ಕಿಂತ ಮುಂಚೆ ಎಚ್ಚರ ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಚುನಾವಣೆಗಳು ಹತ್ತಿರ ಬಂದಾಗ ಒಂದು ಗುಂಪನ್ನ ಓಲೈಸುವ ನಿಟ್ಟಿನಲ್ಲಿ ಇಲ್ಲ ಸಲ್ಲದ ಮಾತುಗಳನ್ನು ಆಡೋದು ತಪ್ಪು ಎಂದ ಶ್ರೀಗಳು, ಯಾರೋ ಒಬ್ರು ಅಂದ್ರಂತೆ ಭಾರತ ಹಿಂದೂ ರಾಷ್ಟ್ರ ಮಾಡಲು ಬಿಡಲ್ಲ ಎಂದು, ಇಂಥ ಮಾತುಗಳು ಒಂದು ಮತೀಯರನ್ನ ಓಲೈಸಿಕೊಳ್ಳಲು ಮಾಡುವಂಥ ವಿಚಾರ, ಇದರಿಂದ ದೇಶಕ್ಕೆ ಎಷ್ಟು ದೊಡ್ಡ ಹಾನಿ ಎಂಬುದನ್ನ ಅವರು ಗಮನಿಸುತ್ತಿಲ್ಲ ಎಂದರು.
ವೋಟಿನ ದೃಷ್ಟಿಯಿಂದ ಇಂಥ ಮಾತು ಆಡುತ್ತಿದ್ದಾರೆ, ವಿವೇಕದಿಂದ ವರ್ತಿಸಬೇಕು, ರಾಹುಲ್ ಗಾಂಧಿ ಹಾಗೂ ಹೆಚ್ ಡಿ ಕುಮಾರಸ್ವಾಮಿಯವರ ವೈಯಕ್ತಿಕ ವಿಚಾರ ಪ್ರಸ್ತಾಪ ವಿಚಾರವಾಗಿ ಮಾತನಾಡಿದ ಅವರು, ವ್ಯಕ್ತಿಗತವಾಗಿ ವಿಚಾರ ಪ್ರಸ್ತಾಪದ ಪ್ರವೃತ್ತಿ ನಡೆಯುತ್ತಿದೆ ಅದು ಸರಿಯಲ್ಲ ಎಂದು ತಿಳಿಸಿದರು.
ಅಭಿವೃದ್ಧಿಯ ಚರ್ಚೆಗಳು ಕಡಿಮೆಯಾಗಿವೆ
ಕೆಲಸ ಮಾಡಿದ್ದನ್ನ ಹೇಳುವುದರ ಬದಲಾಗಿ ಮತ್ತೊಬ್ಬರ ಮೇಲೆ ದೋಷ ಹೊರಿಸುವ ಕೆಲಸವೇ ಆಗುತ್ತಿದೆ, ಇದರಿಂದ ಏನೂ ಉಪಯೋಗ ಇಲ್ಲ ಎಂದು ಶ್ರೀಗಳು ಸಲಹೆ ನೀಡಿದರು. ತಾವು ಏನು ಮಾಡಿದ್ದೇವೆ ಏನು ಮಾಡುತ್ತೇವೆ ಅನ್ನೋದನ್ನ ತೋರಿಸಬೇಕು, ಅತಿಯಾದ ಓಲೈಕೆ ಇದ್ದಾಗ ಇಂಥ ಪ್ರವೃತ್ತಿಗಳು ಸಹಜ, ಇವೆಲ್ಲಾ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು.
ರಾಮಮಂದಿರ ದೇಣಿಗೆಯ ಲೆಕ್ಕ ವಿಚಾರ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ರಾಮಮಂದಿರ ದೇಣಿಗೆ ಸಂಗ್ರಹಣೆ ಕುರಿತು ಲೆಕ್ಕ ಇಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಪಬ್ಲಿಕ್ ನಲ್ಲಿ ಕೇಳೋದಕ್ಕಿಂತ ಅದಕ್ಕಾಗಿ ಒಂದ್ ಟ್ರಸ್ಟ್ ಇದೆ, ಕಾರ್ಯದರ್ಶಿಗಳಿದ್ದಾರೆ, ಅಲ್ಲಿ ಕೇಳಿದರೆ ಅವ್ರು ಎಲ್ಲ ಲೆಕ್ಕವನ್ನ ಕೊಡುತ್ತಾರೆ ಎಂದು ತಿಳಿಸಿದರು.