ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ : ಹೆಚ್‌ಡಿ ಕುಮಾರಸ್ವಾಮಿ ತರಾಟೆ

ವಿಜಯಪುರ : ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಸಿಂಧಗಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯಡಿಯೂರಪ್ಪನವರು ಅಲ್ಪಸಂಖ್ಯಾತರರನ್ನು ಮತಕ್ಕಾಗಿ ಓಲೈಸುವ ಕೆಲಸ ಮಾಡುತ್ತಿದ್ದಾರಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಂದೆಡೆ ಮುಸ್ಲೀಮರನ್ನು ದೇಶದಿಂದಲೇ ಓಡಿಸಬೇಕು ಎನ್ನುವ ಬಿಜೆಪಿ, ಇನ್ನೊಂದೆಡೆ ಅವರಿಗೆ ನಾವೂ ಸಹಾಯ ಮಾಡಿದ್ದೇವೆ. ನಮಗೆ ವೋಟು ಕೊಡಿ ಎಂದು ಕೇಳುತ್ತಿದೆ. ಇದು ಅವರ ದ್ವಿಮುಖ ನೀತಿ ಎಂದು ಕಿಡಿಕಾರಿದರು.
ಮುಸ್ಲೀಮರು ನಮ್ಮ ಪರ ಇರಬೇಕು ಎನ್ನುವ ಬಿಜೆಪಿ, ಅವರನ್ನು ಸಮಾನವಾಗಿ ನೋಡಬೇಕಲ್ಲವೇ? ಹಾಗೆ ಮಾಡದೇ ಮತ ಮಾತ್ರ ಹಾಕಬೇಕು ಎಂದು ಕೇಳಿದರೆ ಹೇಗೆ? ಎಂದು ಹೆಚ್‌ಡಿಕೆ ಖಾರವಾಗಿ ಪ್ರಶ್ನಿಸಿದರು. ಬಿಜೆಪಿಯು ಉಪ ಚುನಾವಣೆಯಲ್ಲಿ ಹಿಂದುತ್ವದ ಆಧಾರದ ಮೇಲೆ ಮತಯಾಚನೆ ಮಾಡುತ್ತಿದೆಯಲ್ಲ ಎನ್ನುವ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಬಿಜೆಪಿಯವರು ಮಾತ್ರ ಹಿಂದುಗಳಾ? ನಾವೇನು ಹೊರಗಿನಿಂದ ಬಂದಿದ್ದೇವೆಯಾ? ನಮಗೂ ಹಿಂದುತ್ವವಿದೆ, ನಂಬಿಕೆ-ಶ್ರದ್ಧೆಗಳಿವೆ. ಆದರೆ ನಾವು ಎಲ್ಲರನ್ನೂ ಒಳಗೊಂಡು ರಾಜಕೀಯ ಮಾಡಿದರೆ, ಬಿಜೆಪಿಯವರು ಕೇವಲ ಹಿಂದುತ್ವದ ಆಧಾರದ ಮೇಲೆ ಮಾತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಹೊರಗೆ ನಾವೆಲ್ಲ ಒಂದು, ನಾವೆಲ್ಲ ಹಿಂದು ಎಂದು ಹೇಳುತ್ತಲೇ ಒಳಗೆ ಮಾತ್ರ ಗರ್ಭಗುಡಿ ಸಂಸ್ಕೃತಿಯನ್ನು ಜೀವಂತ ಇಟ್ಟುಕೊಂಡಿದೆ ಬಿಜೆಪಿ. ಕೆಲವನ್ನು ಬಿಟ್ಟರೆ ದೀನ ದಲಿತರು, ಶೋಷಿತರಿಗೆ ಅಲ್ಲಿಗೆ ಪ್ರವೇಶಾ ಇದೆಯಾ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಸಿಂಧಗಿಯನ್ನು ನಿರ್ಲಕ್ಷಿಸಿದ ರಾಷ್ಟ್ರೀಯ ಪಕ್ಷಗಳು
ಕಳೆದ ಐವತ್ತು ವರ್ಷಗಳಿಂದ ಸಿಂಧಗಿ ಕ್ಷೇತ್ರವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಸಮಾನವಾಗಿ ಕಡೆಗಣಿಸಿವೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಎಲ್ಲ ರಾಜಕೀಯ ಪಕ್ಷಗಳೂ ತಲೆತಗ್ಗಿಸುವಂತೆ ಇದೆ. ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾಗ ಕೊಟ್ಟ ನೀರಾವರಿ ಯೋಜನೆಗಳು ಹಾಗೂ ನಾನು ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡ ಕಾರ್ಯಕ್ರಮಗಳು ಬಿಟ್ಟರೆ ಬೇರಾವ ಪ್ರಗತಿಯೂ ಇಲ್ಲಿ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.


14 ತಿಂಗಳು ನಾನು ಮುಖ್ಯಮಂತ್ರಿ ಆಗಿದ್ದಾಗ 1200 ಕೋಟಿ ರೂ. ಅನುದಾನವನ್ನು ಸಿಂಧಗಿ ಕ್ಷೇತ್ರಕ್ಕೆ ನೀಡಿದ್ದೇನೆ. ದೇವೇಗೌಡರು ಇಲ್ಲದಿದ್ದರೆ ನಾವಿಲ್ಲಿ ಭತ್ತ, ಕಬ್ಬು ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಇಲ್ಲಿನ ಜನ ಈಗಲೂ ಮಾತನಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ವೈಯಕ್ತಿಕ ವಿಚಾರಗಳ ಬಗ್ಗೆ ಆಸಕ್ತಿ ಇಲ್ಲ
ಯಾರ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡುವ ಆಸಕ್ತಿ ನನಗಿಲ್ಲ. ನನ್ನ ಬಗ್ಗೆ ಕಾಮೆಂಟ್‌ ಮಾಡೋರನ್ನು ನಾನು ಕೇರ್‌ ಮಾಡಲ್ಲ. ಜನರಿಗೆ ಮಾಡುವ ಕೆಲಸ ಬೇಕಾದಷ್ಟಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಜನರು ಅನೇಕ ಸಮಸ್ಯೆಗಳಿಂದ ಒದ್ದಾಡುತ್ತಿದ್ದಾರೆ. ಅವರಿಗೆ ಪರಿಹಾರ ಕೊಡುವುದು ಎಲ್ಲರ ಆದ್ಯತೆ ಆಗಬೇಕು ಎಂದರಲ್ಲದೆ; ನಾನು ಆರ್‌ ಎಸ್‌ ಎಸ್‌ ಸೇರಿದಂತೆ ಯಾವುದೇ ಸಂಘ ಸಂಸ್ಥೆ ಬಗ್ಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾತನಾಡಿಲ್ಲ. ನನ್ನ ಅನುಭವಕ್ಕೆ ಬಂದ, ನನಗೆ ತಿಳಿದ ವಿಷಯಗಳನ್ನಷ್ಟೇ ಹೇಳಿದ್ದೇನೆ ಎಂದು ಅವರು ತಿಳಿಸಿದರು.
ಇಂದು 14 ಹಳ್ಳಿಗಳಿಗೆ ಹೆಚ್‌ಡಿಕೆ
ಈವರೆಗೆ ಸಿಂಧಗಿ ವಿಧಾನಸಭೆ ಕ್ಷೇತ್ರದಲ್ಲಿ 30 ಹಳ್ಳಿಗಳಿಗೆ ಭೇಟಿ ನೀಡಿ ಜನರನ್ನು ಭೇಟಿಯಾಗಿದ್ದೇನೆ. ಇಂದು 14 ಹಳ್ಳಿಗಳಿಗೆ ಭೇಟಿ ನೀಡಲಿದ್ದೇನೆ. ನಾಳೆಯೂ ಇಲ್ಲಿಯೇ ಪ್ರಚಾರ ನಡೆಸಿ ನಾಡಿದ್ದು ಹಾನಗಲ್‌ʼಗೆ ತೆರಳುತ್ತೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಸಿಂಧಗಿಯಲ್ಲಿ ನಾನು ಗೆದ್ದೇ ಗೆಲ್ಲುತ್ತೇವೆ. ಪ್ರತಿ ಹಳ್ಳಿಯಲ್ಲೂ ಪಕ್ಷದ ಪರವಾದ ವಾತಾವರಣ ಇದೆ. ಹಾನಗಲ್‌ ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲವಾದ ಪೈಪೋಟಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

More News

You cannot copy content of this page