ನಿರ್ದೇಶಕ ‘ಜೋಗಿ’ ಪ್ರೇಮ್ ಅವರು ಸದ್ಯ ‘ಏಕ್ ಲವ್ ಯಾ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿ ಅಭಿಮಾನಿಗಳೊಂದಿಗೆ ಅವರು ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಮುಂಚಿತವಾಗಿಯೇ ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಸ್ಯಾಂಡಲ್ ವುಡ್ ನ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ‘ಜೋಗಿ’ ಪ್ರೇಮ್ ಅವರಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಈ ಪ್ರಯುಕ್ತ ಅವರೊಂದು ವಿಡಿಯೋ ಸಂದೇಶ ನೀಡಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದೇ ಇರಲು ಅವರು ನಿರ್ಧರಿಸಿದ್ದಾರೆ. ಅದನ್ನು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸದ್ಯ ಅವರು ‘ಏಕ್ ಲವ್ ಯಾ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾ ಬಗ್ಗೆಯೂ ಅಪ್ಡೇಟ್ ನೀಡಿದ್ದಾರೆ. ದೀಪಾವಳಿ ಹಬ್ಬಕ್ಕೆ ‘ಏಕ್ ಲವ್ ಯಾ’ ಚಿತ್ರದ ಮೂರನೇ ಹಾಡು ಬಿಡುಗಡೆ ಆಗಲಿದೆ. ಅ.22 ನನ್ನ ಹುಟ್ಟುಹಬ್ಬ. ಪ್ರತಿ ಸಾರಿ ನನ್ನ ಅನ್ನದಾತರು, ಸ್ನೇಹಿತರು ಹಾಗೂ ಬಂಧು-ಬಳಗದವರು ಬಂದು ವಿಶ್ ಮಾಡುತ್ತಿದ್ರಿ. ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ.
ಯಾಕೆಂದರೆ ಮುಂಬೈನಲ್ಲಿ ‘ಏಕ್ ಲವ್ ಯಾ’ ಸಿನಿಮಾ ಕೆಲಸ ನಡೆಯುತ್ತಿದೆ. ಹಾಗಾಗಿ ತಾವು ಯಾರೂ ಕೂಡ ನನ್ನ ಮನೆ ಬಳಿ ಬರುವುದಾಗಲಿ, ಬಂದು ಕಾಯುವುದಾಗಲಿ ಮಾಡಬೇಡಿ ಅಂತ ಪ್ರೀತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲೇ ಇದ್ದರೂ ದೂರದಿಂದ ಆಶೀರ್ವಾದ ಮಾಡಿ’ ಎಂದು ಪ್ರೇಮ್ ಮನವಿ ಮಾಡಿಕೊಂಡಿದ್ದಾರೆ.