ವಿಧಾನಸೌಧದವರೆಗೂ ಬೆಟ್ಟಿಂಗ್, ಮಟ್ಕಾ ಕಬಂಧಬಾಹು ಚಾಚಿವೆ: ಹೆಚ್ಡಿಕೆ ನೇರ ಆರೋಪ

ಸಿಂಧಗಿ :  ವಿಜಯಪುರ ಜಿಲ್ಲೆಯೂ ಸೇರಿ ರಾಜ್ಯದ ಅನೇಕ ಕಡೆ ಮಟ್ಕಾ, ಬೆಟ್ಟಿಂಗ್‌ ದಂಧೆಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಅನೇಕ ಬಡ ಕುಟುಂಬಗಳು ಬೀದಿ ಪಾಲಾಗಿವೆ. ಆದರೂ ರಾಜ್ಯದ ಬಿಜೆಪಿ ಸರಕಾರ ಚಕಾರ ಎತ್ತದೇ ಮೌನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಸಿಂಧಗಿ ಕ್ಷೇತ್ರದ ಉಪ ಚುಣಾವಣೆ ನಿಮಿತ್ತ ಪ್ರಚಾರ ಕೈಗೊಂಡಿರುವ ಅವರು ಕ್ಷೇತ್ರದ ಯಂಕಂಚಿ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ದಂಧೆಯ ಕಬಂಧಬಾಹುಗಳು ವಿಧಾನಸೌಧದಿಂದ ತಳಹಂತದವರೆಗೂ ವ್ಯಾಪಕವಾಗಿ ಚಾಚಿಕೊಂಡಿದ್ದು, ಸರಕಾರ ಕೈಕಟ್ಟಿ ಕೂತಿದೆ. ಬಡಕುಟುಂಬಗಳು ಇಂಥ ದಂಧೆಗಳಿಗೆ ಸಿಕ್ಕಿ ಬಲಿಯಾಗುತ್ತಿವೆ. ಆ ಕುಟುಂಬಗಳ ಮಕ್ಕಳು ಹೆಚ್ಚು ಬಡ್ಡಿಗೆ ಸಾಲ ಮಾಡಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಆರೋಪಿಸಿದರು.  

ವಿಜಯಪುರ ಜಿಲ್ಲೆಯಲ್ಲಿ ಈ ದಂಧೆ ಮಿತಿಮೀರಿ ನಡೆಯುತ್ತಿದೆ. ಹಣ ಕೊಟ್ಟು ಜಿಲ್ಲೆಗೆ ಪೋಸ್ಟಿಂಗ್‌ ಮಾಡಿಸಿಕೊಂಡು ಬಂದಿರುವ ಅಧಿಕಾರಿಗಳಿಗೆ ʼಮಂತ್ಲಿʼ ತಪ್ಪದೇ ಹೋಗುತ್ತಿದೆ. ದೊಡ್ಡದೊಂದು ಗ್ಯಾಂಗ್‌ ಜಿಲ್ಲೆಯಲ್ಲಿ ಈ ದಂಧೆಗಳನ್ನು ವ್ಯಾಪಕ ಮಟ್ಟದಲ್ಲಿ ಆಪರೇಟ್‌ ಮಾಡುತ್ತಿದ್ದು, ಜನರೇ ಬೀದಿಬೀದಿಗಳಲ್ಲಿ ನಿಂತು ಈ ಪೀಡೆಯನ್ನು ಹತ್ತಿಕ್ಕದ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಲಾಟರಿಗಳನ್ನು ನಿಷೇಧ ಮಾಡಿದ್ದೆ. ಇಂಥ ದಂಧೆಗಳಿಗೆ ಕಠಿಣವಾಗಿ ಕಡಿವಾಣ ಹಾಕಿದ್ದೆ. ಆದರೆ, ಈಗ ಅವೆಲ್ಲ ಬೇರೆ ಬೇರೆ ರೂಪಗಳಲ್ಲಿ ಅನಧಿಕೃತವಾಗಿ ಮತ್ತೆ ಕಾಣಿಸಿಕೊಂಡಿದ್ದು, ಪೊಲೀಸ್‌ ಇಲಾಖೆ ಕುಮ್ಮಕ್ಕು ನೀಡುತ್ತಿದೆ. ದೊಡ್ಡ ದೊಡ್ಡವರು  ಇದರಲ್ಲಿ ಶಾಮೀಲಾಗಿದ್ದಾರೆಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತಿರುವ, ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವ ಈ ದಂಧೆಗಳು ಸ್ವೇಚ್ಛಾಚಾರದಿಂದ ನಡೆಯುತ್ತಿವೆ. ಶ್ರಮಜೀವಿಗಳ ಹಣ ಹಾಳಾಗುತ್ತಿದೆ. ಸರಕಾರ ಅವುಗಳನ್ನು ಹತ್ತಿಕ್ಕುವ ಬದಲು ಸುಮ್ಮನಿದೆ ಎಂದು ಅವರು ಟೀಕಿಸಿದರು.

ಸಿಎಂ ಎಂದೂ ಕಾಮನ್‌ಮ್ಯಾನ್‌ ಆಗಲು ಸಾಧ್ಯವಿಲ್ಲ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದೂ ಕಾಮನ್‌ಮ್ಯಾನ್‌ ಆಗಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ಹೇಳಿದರು. ಮುಖ್ಯಮಂತ್ರಿಗಳು ಸಂಚಾರ ಮಾಡುವ ರಸ್ತೆಗಳಲ್ಲಿ ಹಂಪ್ಸ್‌ʼಗಳನ್ನು ತೆಗೆಯಲಾಗಿದೆ, ರಾತ್ರಿ ಹೊತ್ತು ಅವರಿಗೆ ಎಸ್ಕಾರ್ಟ್‌ ಕೊಡಲಾಗುತ್ತಿದೆ ಎಂಬ ಮಾಹಿತಿ ಬಂದಿದೆ ಎಂದರು.

ಬಿಜೆಪಿ ಅವರು ಹಿಂದೆ ಐದು ವರ್ಷ ಆಡಳಿತ ನಡೆಸಿದ್ದನ್ನು ನೋಡಿದ್ದೇವೆ. ನನ್ನ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಪತನ ಮಾಡಿ ಆಡಳಿತ ನಡೆಸುತ್ತಿರುವುದನ್ನು ನೋಡಿದ್ದೇವೆ. ಅವರೆಂದು ಜನಸಾಮಾನ್ಯರ ಪರ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು. ತೈಲ ಬೆಲೆಗಳನ್ನು, ಅಗತ್ಯ ವಸ್ತುಗಳ ಬೆಲೆಗಳನ್ನು ಏರಲು ಬಿಟ್ಟು ಜನಸಾಮಾನ್ಯರ ಜೀವನವನ್ನು ನರಕ ಮಾಡಿರುವ ಇವರು ಕಾಮನ್‌ ಮ್ಯಾನ್‌ʼಗಳಾ ಎಂದು ಹೆಚ್‌ಡಿಕೆ ಅವರು ಕಿಡಿಕಾರಿದರು.

ಆರ್ಥಿಕ ತೊಂದರೆ ಇದೆ ಎನ್ನುವ ನೆಪವೊಡ್ಡಿ ಸರಕಾರ ನೀರಾವರಿ ಇಲಾಖೆಯ ಎಲ್ಲ ಕಾಮಗಾರಿಗಳನ್ನು ಸ್ಥಗಿತ ಮಾಡಿರುವ ಮಾಹಿತಿಯೂ ಬಂದಿದೆ. ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದಿದೆ. ಇನ್ನೂ 6000 ಕೋಟಿ ರೂ.ಗಳಷ್ಟು ಹಣವನ್ನೂ ಬಿಡುಗಡೆ ಮಾಡಿಲ್ಲ ಅನ್ನುವ ಮಾಹಿತಿ ಇದೆ. ಇವರಿಗೆ ಭ್ರಷ್ಟಾಚಾರ ಮಾಡಲು ಹಣವಿದೆ, ಯೋಜನೆಗಳಿಗೆ ಕೊಡಲು ಇಲ್ಲ ಎಂದರೆ ಹೇಗೆ ಎಂದು ಅವರು ಪ್ರಶ್ನಿಸಿದರು.

ಸರ್ಟಿಫಿಕೇಟ್‌ ಕೊಡೋಕೆ ಸಿದ್ದರಾಮಯ್ಯ ಯಾರು

ಜೆಡಿಎಸ್‌ ಸೆಕ್ಯೂಲರ್‌ ಪಕ್ಷ ಹೌದೋ ಅಲ್ಲವೋ ಎಂಬ ಬಗ್ಗೆ ಸರ್ಟಿಫಿಕೇಟ್‌ ಕೊಡಲು ಸಿದ್ದರಾಮಯ್ಯ ಯಾರು ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.

ಜೆಡಿಎಸ್‌ ಸೆಕ್ಯೂಲರ್‌ ಅಲ್ಲ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು  ಎಲ್ಲರನ್ನೂ ಒಳಗೊಂಡ, ಎಲ್ಲರನ್ನೂ ಪ್ರತಿನಿಧಿಸುವ ಪಕ್ಷ. ಸಿದ್ದರಾಮಯ್ಯ ಅವರಿಂದ ನಾವು ಹಿತೋಪದೇಶ ಪಡೆಯುವ ಅಗತ್ಯವಿಲ್ಲ. ಸಿದ್ದರಾಮಯ್ಯ ಬಂದಿದ್ದು ಎಲ್ಲಿಂದ? ಇದೇ ಪಕ್ಷದಿಂದ. ಇವತ್ತು ಒಂಭತ್ತು ಜನ ಮೈನಾರಿಟಿ ನಾಯಕರಾಗಿ ಹೊರಹೊಮ್ಮಿದ್ದರೆ ಅದು ಪಕ್ಷ ಮತ್ತು ದೇವೇಗೌಡರ ಕೊಡುಗೆ ಎಂದು ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

More News

You cannot copy content of this page