ವಿಜಯಪುರ : ರಾಜ್ಯ ಬಿಜೆಪಿ ಮುಖಂಡರಿಗೆ ಧಂ ಇಲ್ಲ, ಅನುದಾನವನ್ನು ನಾವು ದೆಹಲಿಗೆ ಹೋಗಿ ಭಿಕ್ಷುಕರ ತರಹ ಕೇಳಬೇಕಾ?, ಧಂ ಇದ್ರೆ ಪ್ರಧಾನಿ ಕಚೇರಿ ಮುಂದೆ ೨೫ ಸಂಸದರು ಹೋಗಿ ನಿಂತು ಅನುದಾನ ವಸೂಲಿ ಮಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸರ್ಕಾರದ ವಿರುದ್ಧ ತಿರುಗಿ ಬೀಳದೇ ಹೋದರೆ ಹೀಗೆಯೇ ಆಗೋದು ಎಂದರು. ಬೆಲೆ ಏರಿಕೆಯನ್ನು ಜನ ಸಹಿಸಿಕೊಂಡಿದ್ದರ ಫಲವೇ ಇದು ಎಂದು ಕಿಡಿಕಾರಿದರಲ್ಲದೆ, ಜನ ಇವತ್ತು ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಜೆಡಿಎಸ್ ಏನೇ ಮಾಡಿದರೂ ಕೂಡ ಕೊನೆಗೆ ಬಿಜೆಪಿ ಜೊತೆ ಸೇರಿಕೊಳ್ಳುತ್ತಾರೆ ಎಂದು ಆರೋಪಿಸಿದ ಅವರು, ಜೆಡಿಎಸ್ ನವರಿಗೆ ಯಾವುದೇ ಸಿದ್ದಾಂತವಿಲ್ಲ. ಅಲ್ಪ ಸಂಖ್ಯಾತರು ಬುದ್ದಿವಂತರಿದ್ದಾರೆ, ಈಗಲೂ ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ಮಾಡಿದ ಮೇಲೂ ಸೆಕ್ಯುಲರ್ ಆಗ್ತಾರಾ ಜೆಡಿಎಸ್ ನವರು? ಅವರಿಗೆ ಅಲ್ಪ ಸಂಖ್ಯಾತರು ಏಕೆ ಮತ ನೀಡುತ್ತಾರೆ. ಜೆಡಿಎಸ್ ಸೆಕ್ಯುಲರ್ ಪಾರ್ಟಿ ಅಲ್ಲ. ಇಷ್ಟು ಮಾತ್ರ ಹೇಳ್ತಿನಿ. ಪ್ರಾದೇಶಿಕ ಪಕ್ಷ ನಿಜ, ಆದ್ರೆ ಜಾತ್ಯಾತೀತ ಪಕ್ಷ ಅಲ್ಲ. ನಡವಳಿಕೆಯಲ್ಲಿ ಜಾತ್ಯಾತೀತ ಇಲ್ಲ, ಆಚಾರದಲ್ಲಿ ಜೆಡಿಎಸ್ ಕೋಮುವಾದಿ ಪಕ್ಷ ಎಂದು ಟಿಕೀಸಿದರು.
ಕೇಸರಿ ಕಂಡರೆ ನನಗೆ ಭಯವಿಲ್ಲ
ಕೇಸರಿ ಕಂಡರೆ ಆರ್ ಎಸ್ ಎಸ್ ಕಂಡರೆ ನನಗೆ ಭಯ ಇಲ್ಲ. ಆದರೆ ಶಾಂತಿ ಕದಡಿ ಸಮಾಜ ಒಡೆಯುತ್ತಾರೆ ಎನ್ನುವ ಭಯ ನನಗಿದೆ ಅಷ್ಟೇ. ಸಮಾಜದ ಬಗ್ಗೆ ಕಾಳಜಿ ಅಷ್ಟೇ ಎಂದು ಕಿಡಿಕಾರಿದ ಅವರು, ಆರ್ ಎಸ್ ಎಸ್ ನ್ನು ನಾನು ಟೀಕಿಸುವುದು ಅವರ ನಡವಳಿಕೆಗೆ ಎಂದು ಸ್ಪಷ್ಟಪಡಿಸಿದರು.

ಪೊಲೀಸರು ಹೋಗಿ ಕೇಸರಿ ಶಾಲು ಹಾಕಿಕೊಂಡರು. ಪೊಲೀಸರಿಗೆ ಸಮವಸ್ತ್ರ ಇರುವುದೇಕೆ? ಎಂದು ಪ್ರಶ್ನಿಸಿದ ಅವರು, ಪೊಲೀಸರು ಕೇಸರಿ ಶಾಲು ಹಾಕಿಕೊಂಡಿದ್ದು ಪೂರ್ವ ನಿಯೋಜಿತ. ಎಲ್ಲರೂ ಒಂದೇ ಅಂಗಡಿಯಲ್ಲಿ ಖರೀದಿ ಮಾಡಿದ್ದಾರೇ ? ಇವರು ಕೊಟ್ಟಿದ್ದಾರೆ, ಅವರು ಹಾಕಿಕೊಂಡಿದ್ದಾರೆ ಎಂದರು
ಸಲೀಂ, ಉಗ್ರಪ್ಪ ಅವರ ಮಾತು ಬಿಡಿ. ಯತ್ನಾಳ್ ಸರ್ಕಾರದ ಬಗ್ಗೆಯೇ ಮಾತನಾಡಿದ್ರು. ಅವರ ಮಾತು ಸರ್ಕಾರದ ಮೇಲೆ, ಆಡಳಿತದ ಮೇಲೆ ಪರಿಣಾಮ ಬೀರಲ್ವಾ?. ಉಗ್ರಪ್ಪ ಮಾತನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ ಎಂದರು.
ಸಲೀಂ, ಉಗ್ರಪ್ಪ ಮಾತನ್ನು ನಾನು ಕೇಳಿಲ್ಲ. ಬಸವರಾಜ ಬೊಮ್ಮಾಯಿ ಅವರು ಮೊದಲು ಯತ್ನಾಳ್ ಹೇಳಿಕೆ ಬಗ್ಗೆ ಉತ್ತರ ಕೊಡಲಿ. ಹಿಂದೆ ಅನಂತ್ ಕುಮಾರ್, ಯಡಿಯೂರಪ್ಪ ಮಾತಾಡಿದ್ರಲ್ಲ ಅದಕ್ಕೆ ಉತ್ತರ ಕೊಡಲಿ ಎಂದರು, ಬಿಜೆಪಿಯವರು ಹೇಡಿಗಳ ತರಹ ವರ್ತಿಸುತ್ತಾರೆ ಎಂದು ಆರೋಪಿಸಿದರು.
ಉಪಚುನಾವಣೆಯಲ್ಲಿ ಹಣದ ಹೊಳೆ
ಈ ಚುನಾವಣೆಯಲ್ಲಿ ಬಿಜೆಪಿಯವರು ಎರಡೂ ಕ್ಷೇತ್ರದಲ್ಲಿ ಹಣದ ಹೊಳೆ ಹರಿಸ್ತಿದ್ದಾರೆ ಎಂದು ಆರೋಪಿಸಿದ ಅವರು, ಒಂದು ಓಟಿಗೆ ೨೦೦೦ ಕೊಡ್ತಿದ್ದಾರೆ ಅಂತ ಸುದ್ದಿ ಇದೆ ಎಂದರು. ಏನು ಕೆಲಸ ಮಾಡಿದಾರೆ ಅಂತ ಬಿಜೆಪಿಯವರು ಜನರ ಮುಂದೆ ನಿಂತು ಮತ ಕೇಳ್ತಾರೆ? ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಜನ ಯಾಕೆ ಓಟು ಹಾಕ್ತಾರೆ ಇವರಿಗೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಳೀನ್ ಕುಮಾರ್ ಕಟೀಲ್ ಜೋಕರ್
ಯಾವಾಗ ಚರ್ಚಿಸಲು ವಿಷಯಗಳು ಇಲ್ಲವೋ ಆಗ ಅವಹೇಳನಕಾರಿ ಮಾತುಗಳು ಬರುತ್ತವೆ, ನಳೀನ್ ಕುಮಾರ್ ಕಟೀಲ್ ಜೋಕರ್ ಮಟ್ಟದವರು. ಅವರಿಗೆ ತಲೆ ಕೆಟ್ಟಿದೆ ಎಂದು ಕಾಣುತ್ತದೆ. ಅವರು ಪ್ರಬುದ್ದ ರಾಜಕಾರಣಿ ಅಲ್ಲ ಎಂದು ಟಿಕೀಸಿದರು.
ಮೀಸಲಾತಿ ನೀಡಬೇಕು – ಸಿದ್ದರಾಮಯ್ಯ
ಅಕ್ಟೋಬರ್ ಒಳಗೆ ಮೀಸಲಾತಿ ವರದಿ ಪಡೆಯಬೇಕು, ಇಲ್ಲವಾದರೆ ಪಾಠ ಕಲಿಸ್ತೇವೆಂಬ ಜಯ ಮೃತ್ಯುಂಜಯ ಶ್ರೀಗಳ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಪಂಚಮಸಾಲಿ ಸಮುದಾಯದವರಿಗೆ ಮೀಸಲಾತಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ತಕ್ಷಣ ಮೀಸಲಾತಿ ಸೌಲಭ್ಯ ಒದಗಿಸುವುದಾಗಿ ನಾಯಕರು ಹೇಳಿದ್ದರು.

ವಾಲ್ಮೀಕಿ ಸಮುದಾಯಕ್ಕೂ ಬಿಜೆಪಿ ಆಶ್ವಾಸನೆ ಕೊಟ್ಟಿದೆ. ಅದೆಲ್ಲವನ್ನೂ ಈಗ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಪಂಚಮಸಾಲಿ ಸಮುದಾಯ ಬಿಜೆಪಿಗೆ ಪಾಠ ಕಲಿಸಲಿ ಎಂದು ಅಭಿಪ್ರಾಯಪಟ್ಟರು.
ಸುಧಾಕರ್ ಗೆ ಅಧಿಕಾರದ ಮದ
ಶಾಸಕ ರಮೇಶ್ ಕುಮಾರ್ ಅವರನ್ನ ಜೈಲಿಗೆ ಕಳಿಸುವೆ ಎನ್ನುವ ಸುಧಾಕರ್ ಹೇಳಿಕೆಗೆ ಉತ್ತರ ನೀಡಿದ ಅವರು, ದುಡ್ಡಿನ ಮದ ಅವರಿಗೆ. ಅವರು ಕಾಂಗ್ರೆಸ್ ನಿಂದ ಗೆದ್ದು ಬಿಜೆಪಿಗೆ ಹೋದವರು. ಇಂಥ ದುರಹಂಕಾರದ ಮಾತುಗಳಿಗೆ ಜನ ಬುದ್ದಿ ಕಲಿಸ್ತಾರೆ, ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. ೨೦೨೩ ಕ್ಕೆ ಮನೆಗೆ ಹೋಗ್ತಾರೆ. ಆಗ ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದರು.