ಹುಬ್ಬಳ್ಳಿ : ಎರಡೂ ಡೋಸ್ ಕೊರೊನಾ ಲಸಿಕೆ ಪಡೆದವರು ಕೇವಲ 29 ಕೋಟಿ ಜನ ಅಷ್ಟೆ. 100 ಕೋಟಿ ಜನರಿಗೆ ಲಸಿಕೆ ಹಾಕಿದೀವಿ ಎಂದು ಸಂಭ್ರಮಾಚರಣೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ, ಇದು ಬರೀ ಸುಳ್ಳು ಹೇಳುವ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಕೀಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಆಕ್ಸಿಜನ್, ವೆಂಟಿಲೇಟರ್, ಆಸ್ಪತ್ರೆ, ಆಂಬುಲೆನ್ಸ್ ಮುಂತಾದ ರೀತಿಯಲ್ಲಿ ಚಿಕಿತ್ಸೆ ಸಿಗದೆ ಕನಿಷ್ಟ 50 ಲಕ್ಷ ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ನಿಷ್ಕ್ರೀಯತೆ ಕಾರಣ ಎಂದು ಆರೋಪಿಸಿದರು. ಒಟ್ಟು ಜನಸಂಖ್ಯೆಯ ಕೇವಲ ಶೇಕಡಾ 21 ರಷ್ಟು ಜನರಿಗೆ ಮಾತ್ರ ಕೋವಿಡ್ ನಿಂದರಕ್ಷಣೆ ನೀಡಲಾಗಿದೆ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರ ಉಳಿದ ದೇಶದಲ್ಲಿ ಶೇಕಡಾ 75ರಷ್ಟು ಪ್ರಗತಿ ಸಾಧಿಸಿದೆ.
130 ಕೋಟಿ ಜನಸಂಖ್ಯೆಯ ಅರ್ಧದಷ್ಟು ಜನರಿಗೂ ಲಸಿಕೆ ನೀಡಿಲ್ಲ, ಆದ್ದರಿಂದ ಸಂಭ್ರಮಾಚರಣೆ ಒಂದು ಹಾಸ್ಯಾಸ್ಪದ ಎಂದು ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು.
ಬಡವರಿಗೆ ಒಂದೂ ಮನೆ ನೀಡದ ಸರ್ಕಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈಗ ಚುನಾವಣೆ ವೇಳೆ ನಾವು ಮಿಷನ್ ಹಾನಗಲ್ ಮಾಡ್ತೀವಿ ಎಂದು ಹೇಳುತ್ತಿದ್ದಾರೆ, ಇಷ್ಟು ದಿನ ಏಕೆ ಹಾನಗಲ್ ಅವರಿಗೆ ಕಂಡಿರಲಿಲ್ಲ? ಚುನಾವಣೆ ಬಂದಿದೆ ಈಗ ಅವರಿಗೆ ನೆನಪಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಬಡವರಿಗೆ ಒಂದು ಮನೆಯಾದ್ರೂ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರಲ್ಲದೆ, ಅಭಿವೃದ್ಧಿ ಎಂದರೆ ಏನು ಗೊತ್ತಾ? ಬರೀ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲೋದು ಮಾತ್ರ ಗೊತ್ತು ಅವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಹಾನಗಲ್ ಕ್ಷೇತ್ರಕ್ಕೆ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀನಿ ಎಂದು ಹಿಂದಿನ ಶಾಸಕರಾದ ಮನೋಹರ ತಹಶಿಲ್ದಾರ್ ಅವರನ್ನ ಕೇಳಿ ನೋಡಿ. ನಾನು 2400 ಕೋಟಿ ರೂಪಾಯಿ ಅನ್ನು ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೆ, ಈಗಿನ ಸರ್ಕಾರ ಎಷ್ಟು ಹಣ ನೀಡಿದೆ ಹೇಳಲಿ. ಹಾನಗಲ್ ನಲ್ಲಿ ಸಾಧನಾ ಸಮಾವೇಶ ಮಾಡಿ, ಜನರಿಗೆ ಸರ್ಕಾರದ ಸಾಧನೆಗಳ ಮಾಹಿತಿ ನೀಡಿದ್ದೆ. ಆದರೆ, ಇಂದು ಅಭಿವೃದ್ಧಿ ಎನ್ನುವುದು ಕೇವಲ ಮರಿಚಿಕೆಯಾಗಿದೆ ಎಂದರು.
ಬಿಜೆಪಿಯಲ್ಲಿ ಮುಸ್ಲಿಂ ಶಾಸಕ ಅಥವಾ ಮಂತ್ರಿ ಇಲ್ಲ
ಬಿಜೆಪಿ ಪಕ್ಷದಲ್ಲಿ ಒಬ್ಬ ಮುಸ್ಲಿಂ ಶಾಸಕ ಅಥವಾ ಮಂತ್ರಿ ಇಲ್ಲ. ಇದು ಬೇರೆ ಧರ್ಮದ ಬಗ್ಗೆ ದ್ವೇಷ ಮಾಡಿದಂತಲ್ಲವೆ? ಎಂದು ಪ್ರಶ್ನಿಸಿದ್ದಾರೆ. ಕೇವಲ ಬಾಯಿ ಮಾತಿನಲ್ಲಿ ನಾವು ಧರ್ಮದ ಪರವಾಗಿದ್ದೇವೆ ಎಂದುಹೇಳುವ ಬಿಜೆಪಿ, ಕೃತಿಯಲ್ಲಿ ಮಾತ್ರ ಯಾರಜತೆಯಲ್ಲಿಯೂ ಇಲ್ಲಾ ಎಂದು ಆರೋಪಿಸಿದರು.

ನಮ್ಮ ಪಕ್ಷದಲ್ಲಿ ಎಲ್ಲಾ ಜಾತಿ, ಧರ್ಮಗಳ ಶಾಸಕರಿದ್ದಾರೆ. ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವುದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಸಂವಿಧಾನ ಬದಲಾವಣೆ ಮಾಡ್ತೀವಿ ಎಂದವರು ಬಿಜೆಪಿಯವರು, ಅವರ ಹಿಡನ್ ಅಜೆಂಡಾಗಳನ್ನು ಜಾರಿ ಮಾಡಲು ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ಟಿಕೀಸಿದರು.
ಚುನಾವಣೆಯಲ್ಲಿ ಹಣ ಹಂಚುತ್ತಿರುವ ಬಿಜೆಪಿ ?
ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ಹಣ ಹಂಚುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಕೇಳಲು ಬಿಜೆಪಿಯವರಿಗೆ ಆಗುತ್ತಿಲ್ಲ, ಕಳೆದ ಎರಡೂ ಕಾಲು ವರ್ಷಗಳಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡಿಲ್ಲ. ಹೀಗಾಗಿ ಹಣ ಹಾಕಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸುಳ್ಳು ಭರವಸೆ ಕೊಡುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಮುಖ್ಯಮಂತ್ರಿ ಬೊಮ್ಮಾಯಿ ಬಂದಾಗ ಹಾನಗಲ್ ಪ್ರಚಾರದಲ್ಲಿ ಅಲೆ ಎದ್ದಿಲ್ವಂತ? ಸೋಲಿನ ಭಯದಿಂದ ಏನೇನೊ ಮಾತನಾಡಲು ಅವರು ಆರಂಭಿಸಿದ್ದಾರೆ. ಹಾನಗಲ್ ನಲ್ಲಿ ಬಿಜೆಪಿ ಸೋಲುತ್ತೆ ಎಂದು ಬಸವರಾಜ ಬೊಮ್ಮಾಯಿಯವರಿಗೂ ಮತ್ತು ಮುರುಗೇಶ್ ನಿರಾಣಿ ಅವರಿಗೂ ಗೊತ್ತಿದೆ. ಆದ್ದರಿಂದ ಅವರು ವ್ಯಯಕ್ತಿಕ ಟೀಕೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.