ಬೆಳಗಾವಿ : ಮುಂಬೈ-ಕರ್ನಾಟಕವನ್ನು ಕಿತ್ತೂರು- ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ, ಆದ್ದರಿಂದ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕಿತ್ತೂರು ಉತ್ಸವ-2021 ಕ್ಕೆ ಶನಿವಾರ (ಅ.23) ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದರು.
ರಾಜ್ಯಮಟ್ಟದ ಉತ್ಸವ- ಸಿಎಂ ಭರವಸೆ
ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಘೋಷಿಸುವ ನಿಟ್ಟಿನಲ್ಲಿ ಸರಕಾರ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕಿತ್ತೂರು ಜ್ಯೋತಿಯು ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಸಂಚರಿಸುತ್ತಿತ್ತು. ಅದೇ ರೀತಿ ಮುಂದಿನ ಉತ್ಸವ ಸಂದರ್ಭದಲ್ಲಿ ವೀರಜ್ಯೋತಿ ರಾಜ್ಯದಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಆದೇಶವನ್ನು ನೀಡಿದರು.

ಕಿತ್ತೂರು ಚೆನ್ನಮ್ಮ ಝಾನ್ಸಿಯ ರಾಣಿಗಿಂತ ನಲವತ್ತು ವರ್ಷಗಳ ಮುಂಚೆಯೇ ಸ್ವಾತಂತ್ರ್ಯಕ್ಕಾಗಿ ಕತ್ತಿ ಝಳಪಿಸಿದಳು. ಈ ಐತಿಹಾಸಿಕ ಸಾಧನೆಯನ್ನು ಜಗತ್ತಿಗೆ ಸಾರುವ ಮೂಲಕ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಪ್ರಪ್ರಥಮ ಮಹಿಳೆ ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದು ಇತಿಹಾಸವನ್ನು ಮೆಲುಕು ಹಾಕಿದರು.
ಕಿತ್ತೂರು ಮಾಸ್ಟರ್ ಪ್ಲ್ಯಾನ್ ಗೆ ಹೆಚ್ಚಿನ ಅನುದಾನ
ಪ್ರಾಧಿಕಾರದ ಮಾಸ್ಟರ್ ಪ್ಲ್ಯಾನ್ ಗೆ ಒಟ್ಟಾರೆ 200 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂಬ ಬೇಡಿಕೆ ಇದೆ. ಮುಂದಿನ ಆಯವ್ಯಯದಲ್ಲಿ ಪ್ರಾಧಿಕಾರಕ್ಕೆ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಮೀಸಲಾತಿ- ಕಾನೂನು ಪರಿಶೀಲಿಸಿ ಸೂಕ್ತ ಕ್ರಮ
ಮೀಸಲಾತಿ ಒದಗಿಸಲು ಹಾಗೂ ಪ್ರಮಾಣ ಹೆಚ್ಚಿಸಲು ಬೇಡಿಕೆಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನು ತೊಡಕುಗಳು ಇರುವುದರಿಂದ ಅವುಗಳನ್ನು ಗಮನದಲ್ಲಿಟ್ಟುಕೊಂಡು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸರಕಾರ ಪರಿಶೀಲಿಸುತ್ತಿದೆ ಎಂದರು.

ಸಂಗೊಳ್ಳಿ ಸೈನಿಕ ಶಾಲೆಯು ಕೂಡ ಮುಚ್ಚುವ ಹಂತದಲ್ಲಿದೆ. ರಕ್ಷಣಾ ಇಲಾಖೆಯ ಜತೆ ಚರ್ಚಿಸಿ ಶಾಲೆಯನ್ನು ರಾಜ್ಯ ಸರಕಾರದ ವ್ಯಾಪ್ತಿಗೆ ಸೇರಿಸಿ ಉನ್ನತಮಟ್ಟದ ಮಿಲಿಟರಿ ಶಾಲೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಇಲಾಖೆಯ ಸಚಿವರಾದ ಪ್ರಹ್ಲಾದ ಜೋಶಿ ಅವರು, ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ಚೆನ್ನಮ್ಮಳಿಗೆ ಸಿಗಬೇಕಾದ ಮಾನ್ಯತೆ ಇತಿಹಾಸದಲ್ಲಿ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರು, ದೇಶದ ಸ್ವಾತಂತ್ರ್ಯದ ಕಹಳೆ ಊದಿದ ಕಿತ್ತೂರು ಉತ್ಸವದ ಬೆಳ್ಳಿಹಬ್ಬದ ಸವಿನೆನಪಿನಲ್ಲಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವ ಎಂದು ಘೋಷಿಸಬೇಕು, ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳನ್ನು ಕಿತ್ತೂರಿನಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಕಿತ್ತೂರು ಉತ್ಸವವನ್ನು ರಾಜ್ಯ ಉತ್ಸವವೆಂದು ಘೋಷಿಸಿ ಪ್ರತಿವರ್ಷ ಎರಡು ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡರು ಒತ್ತಾಯಿಸಿದರು.
ಕಿತ್ತೂರಿನ ರಾಜಗುರು ಸಂಸ್ಥಾನಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ, ಹರಿಹರದ ಹರಕ್ಷೇತ್ರದ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಬೆಳ್ಳಿಹಬ್ಬದ ಪ್ರಯುಕ್ತ ಸನ್ಮಾನ
ಕಿತ್ತೂರು ಉತ್ಸವದ ಬೆಳ್ಳಿಹಬ್ಬದ ಪ್ರಯುಕ್ತ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಗತಿಪರ ರೈತ ಮಹಿಳೆಯಾಗಿರುವ ರಾಯಚೂರು ಜಿಲ್ಲೆಯ ಕವಿತಾಳದ ಶ್ರೀಮತಿ ಕವಿತಾ ಮಿಶ್ರಾ ಹಾಗೂ ರಾಣಿ ಚನ್ನಮ್ಮನ ವಂಶಸ್ಥರಾದ ಬಾಳಾಸಾಹೇಬ್ ದೇಸಾಯಿ(ಕಿತ್ತೂರಕರ) ಅವರನ್ನು ಸನ್ಮಾನಿಸಲಾಯಿತು.
ಕೋವಿಡ್ ನಿಂದ ಮರಣ; ಕುಟುಂಬಸ್ಥರಿಗೆ ಪರಿಹಾರ ಚೆಕ್ ವಿತರಣೆ
ಕೋವಿಡ್ ಸೋಂಕಿನಿಂದ ಮೃತಪಟ್ಟಿರುವವರ ಕುಟುಂಬದವರಿಗೆ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಮೂರು ಜನರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರಧನ ಚೆಕ್ ವಿತರಿಸಿದರು.