ಹಿರಿಸಾವೆ: ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ ಬಿಡಿಎ ಎನ್‌ಒಸಿ ಪಡೆದು ಕಟ್ಟಿದ್ದ ಮನೆಗಳನ್ನು ನೆಲಸಮ ಮಾಡುವುದನ್ನು ತಡೆಯಲು ಹೋದ ಜೆಡಿಎಸ್ ಪಕ್ಷದ ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್ ಅವರನ್ನು ಪೊಲೀಸರು ಬಂಧಿಸಿರುವುದು ಅತ್ಯಂತ ಖಂಡಿನೀಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಬಡಾವಣೆಯ ಜನರ ಸಂಕಷ್ಟಕ್ಕೆ ಸಂಬಂಧಿಸಿ ಹೋರಾಟಗಾರರು, ಸ್ಥಳೀಯ ನಿವಾಸಿಗಳನ್ನು ಒಳಗೊಂಡಂತೆ ಒಂದು ಸಭೆ ಕರೆಯಿರಿ, ನಾನೂ ಬರುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಆದರೆ, ಸಭೆಗೆ ಕಾಲಾವಕಾಶವವನ್ನೇ ನೀಡದೇ ಈಗ ಏಕಾಎಕಿ ಮನೆಗಳನ್ನು ಒಡೆಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನ ಸಾಲ ಮಾಡಿ ಮನೆಗಳನ್ನು ಕಟ್ಟಿದ್ದಾರೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಇದೆಲ್ಲವನ್ನೂ ಅಧಿಕಾರಿಗಳು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಆರೋಪಿದರು. ಬಿಡಿಎಯ ಈಗಿನ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರೇ ಈ ಜನರ ಪರ ಹೋರಾಟ ಮಾಡಿದ್ದರು. ಈಗ ನೋಡಿದರೆ ಅವರೇ ಮನೆಗಳನ್ನು ನೆಲಸಮ ಮಾಡಿಸುತ್ತಿದ್ದಾರೆ. ಈ ಸರಕಾರ ನಿಜಕ್ಕೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಇವರೇ ಒಂದು ಕಡೆ ದುಡ್ಡು ಹೊಡೆಯೋದು. ಇನ್ನೊಂದು ಕಡೆ ಇವರೇ ಕಟ್ಟಡ ಒಡೆಸೋದು. ಜನರನ್ನು ಈಗ ಬೀದಿಗೆ ತಂದು ನಿಲ್ಲಿಸಿದ್ದಾರೆ. ಮುಖ್ಯಮಂತ್ರಿಗೆ ಜವಾಬ್ದಾರಿ ಎನ್ನುವುದು ಇದ್ದಿದ್ದರೆ ಕೂತು ಚರ್ಚೆ ಮಾಡಿ ಕಾನೂನು ರೀತಿಯಲ್ಲಿ ಆ ಜನರಿಗೆ ರಕ್ಷಣೆ ನೀಡಬೇಕಾಗಿತ್ತು ಎಂದು ಕುಮಾರಸ್ವಾಮಿ ಅವರು ಹೇಳಿದರು.

ತುಮಕೂರಿನ ಗುಬ್ಬಿಯಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚನ್ನಬಸವೇಶ್ವರ ದೇವಾಲಯದ ಆವರಣದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. 500 k.g ಸೇಬಿನ ಹಾರ ಹಾಗೂ ಪುಷ್ಪಗಳನ್ನು ಹಾಕುವ ಮೂಲಕ ಕುಮಾರಸ್ವಾಮಿ ಅವರನ್ನು ಬೆಂಬಲಿಗರು ಸ್ವಾಗತಿಸಿದರು.
ಜಾತಿಗೊಂದು ಸಮಾವೇಶ ಮಾಡ್ತಾರೆ – ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಜೆಡಿಎಸ್ ಅನ್ನು ಜಾತಿ ಪಕ್ಷ ಎಂದು ಅಪಪ್ರಚಾರ ಮಾಡುವ ಸಿದ್ದರಾಮಯ್ಯ ಅವರು ಸಿಂಧಗಿಯಲ್ಲಿ ಕೂತು ಜಾತಿಗೊಂದು ಸಮಾವೇಶ ಮಾಡುತ್ತಿದ್ದಾರೆಂದು ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ಹಿರಿಸಾವೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ಮುಂಚೆ ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಸಿದ್ದರಾಮಯ್ಯ ಅವರು ಕುರುಬರಿಗೊಂದು ಪ್ರತ್ಯೇಕ ಸಮಾವೇಶ, ತಳವಾರ ಸಮಾಜಕ್ಕೊಂದು ಪ್ರತ್ಯೇಕ ಸಮಾವೇಶ, ಕೋಳಿ ಸಮಾಜಕ್ಕೊಂದು ಪ್ರತ್ಯೇಕ ಸಮಾವೇಶ ಮಾಡಿದ್ದಾರೆ. ಇದು ಯಾವ ಸೀಮೆಯ ಜಾತ್ಯಾತೀತತೆ? ಬಾಯಲ್ಲಿ ಮಾತ್ರ ಜಾತ್ಯತೀತ, ಒಳಗೆಲ್ಲ ಬರೀ ಜಾತಿ. ನಮ್ಮ ರಾಜ್ಯದಲ್ಲಿ ಜಾತಿ-ಜಾತಿಗಳ ನಡವೆ ಕಂದಕ ಸೃಷ್ಟಿ ಮಾಡುತ್ತಿರುವುದೇ ಇದೇ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ತಾವು ಗಾಜಿನ ಮನೆಯಲ್ಲಿ ಕೂತು ಇನ್ನೊಬ್ಬರ ಮನೆಯ ಮೇಲೆ ಕಲ್ಲು ಹೊಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಬೇರೆಯವರಿಗೆ ಉಪದೇಶ ಮಾಡುವ ಮುನ್ನ ಅವರು ತಮ್ಮ ನಡವಳಿಕೆಯ ಬಗ್ಗೆ ಜನರಿಗೆ ಸ್ಪಷ್ಟವಾಗಿ ಹೇಳಬೇಕು. ಒಂದು ಕಡೆ ಜಾತಿ ಹೋಗಬೇಕು ಅಂತೀರಿ? ಹಾಗಾದರೆ, ಜಾತಿ ಸಮಾವೇಶಗಳನ್ನು ಯಾಕೆ ಮಾಡುತ್ತೀರಿ? ಚುನಾವಣೆಯಲ್ಲಿ ಮತ ಪಡೆಯುವುದಕ್ಕಷ್ಟೇ ಸಿದ್ದರಾಮಯ್ಯ ಅವರ ಜಾತಿ ರಾಜಕೀಯ ಎಂದು ಮಾಜಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು.
ತಳಮಳ ಉಂಟಾಗಿದೆ
ಈಗ ಜೆಡಿಎಸ್ ಪಕ್ಷದ ಓಟ ವೇಗವಾಗಿದೆ. ಜನರಿಗೆ ಹತ್ತಿರವಾಗುತ್ತಿದೆ, ಹೀಗಾಗಿ ಅವರಲ್ಲಿ ತಳಮಳ ಉಂಟಾಗಿದೆ. ಆದ್ದರಿಂದಲೇ ಇಷ್ಟು ದೊಡ್ಡ ಮಟ್ಟದ ದಾಳಿಗಳು ನಮ್ಮ ಪಕ್ಷದ ಮೇಲಾಗುತ್ತಿವೆ. ವೈಯಕ್ತಿಕವಾಗಿಯೂ ಟೀಕೆ ಮಾಡುತ್ತಿದ್ದಾರೆ. ಕಾರ್ಯಕ್ರಮಗಳ ಮೇಲೆ ಅಥವಾ ನಮ್ಮ ವೈಫಲ್ಯಗಳನ್ನು ಎತ್ತಿತೋರಿಸಿ ದಾಳಿ ನಡೆಸುತ್ತಿಲ್ಲ, ಬದಲಿಗೆ ನಮ್ಮ ವ್ಯಕ್ತಿಗತ ವಿಚಾರಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ಎಷ್ಟು ಟೀಕೆ ಮಾಡಿದರೂ ನಾವು ಅಷ್ಟೇ ಗಟ್ಟಿಯಾಗುತ್ತೇವೆ. ಅವರು ಇನ್ನೂ ಹೆಚ್ಚೆಚ್ಚು ಟೀಕೆ ಮಾಡಲಿ ಎಂದು ವ್ಯಂಗ್ಯವಾಡಿದರು.
ಪಕ್ಷದಿಂದ ಹೊರದಬ್ಬುತ್ತಿದ್ದಾರೆ
ಗುಬ್ಬಿ ವಾಸು ಮತ್ತು ಕಾಂತರಾಜು ಅವರಿಬ್ಬರೂ ಕುಮಾರಸ್ವಾಮಿ ಅವರೇ ನಮ್ಮನ್ನು ಪಕ್ಷದಿಂದ ಹೊರದಬ್ಬುತ್ತಿದ್ದಾರೆಂದು ಹೇಳಿಕೆ ನೀಡಿದ್ದಾರಲ್ಲ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾರನ್ನೂ ಪಕ್ಷದಿಂದ ಹೊರಗೆ ಕಳಿಸುತ್ತಿಲ್ಲ. ಹೋಗಿ ಎಂದು ಯಾರಿಗೂ ಹೇಳಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಮೂರು ವರ್ಷಗಳಿಂದ ಅವರು ಪಕ್ಷದೊಳಗೇ ಇದ್ದುಕೊಂಡು ಪಕ್ಷದ ಬಗ್ಗೆ ಹಾಗೂ ನಾಯಕರ ಬಗ್ಗೆ ಯಾವೆಲ್ಲ ಹೇಳಿಕೆಗಳನ್ನು ನೀಡಿದ್ದಾರೆನ್ನುವುದನ್ನು ಆ ಇಬ್ಬರು ಮುಖಂಡರು ಒಮ್ಮೆ ನೆನಪು ಮಾಡಿಕೊಳ್ಳಲಿ. ವೈಯಕ್ತಿಕವಾಗಿ ನನ್ನ ಬಗ್ಗೆಯೇ ಹೇಳಿಕೆಗಳನ್ನು ನೀಡಿದ್ದರು, ಅದರ ಅಗತ್ಯ ಇತ್ತಾ? ಬಿಡದಿಯಲ್ಲಿ ನಡೆದ ಕಾರ್ಯಾಗಾರಕ್ಕೆ ಬರುವಂತೆ ಸ್ವತಃ ನಾನೇ ಕರೆದಿದ್ದೇನೆ. ಸಮಸ್ಯೆ ಇದ್ದರೆ ಮುಕ್ತವಾಗಿ ಚರ್ಚೆ ಮಾಡೋಣ ಎಂದು ಹೇಳಿದ್ದೇನೆ. ಅವರೇ ತಮಗೆ ಬೇಕಾದ ಹಾಗೆ ಹೇಳಿಕೆಗಳನ್ನು ನೀಡಿದರೆ ಹೇಗೆ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿಯನ್ನು ಹುಡುಕುತ್ತಿದ್ದೀರಾ? ಎನ್ನುವ ಪ್ರಶ್ನೆಗೆ; ನಮ್ಮ ಪಕ್ಷವು 2023ರ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿದೆ. ಬಿಡದಿಯಲ್ಲಿ ಕಾರ್ಯಾಗಾರವನ್ನು ಹುಡುಗಾಟಕ್ಕೆ ಮಾಡಿದ್ದಲ್ಲ. ಚುನಾವಣೆಗೆ 17 ತಿಂಗಳ ಮೊದಲೇ ಪಕ್ಷದ ಸಂಘಟನೆಗೆ ಚಾಲನೆ ನೀಡಿದ್ದೇವೆ. ನವೆಂಬರ್ 1ರಿಂದ ಪುನಾ ಜನತಾ ಸಂಗಮ ಎನ್ನುವ ಕಾರ್ಯಕ್ರಮ ಆರಂಭವಾಗುತ್ತಿದೆ. ಅದಕ್ಕೆ ಅಗತ್ಯವಾದ ಪೂರ್ವ ಸಿದ್ಧತೆ ನಡೆಯುತ್ತಿದೆ. 123 ಕ್ಷೇತ್ರಗಳನ್ನು ಗೆಲ್ಲಲು ಏನು ಬೇಕೋ ಅದೆಲ್ಲವನ್ನೂ ಮಾಡುತ್ತೇವೆ” ಎಂದು ಅವರು ತಿಳಿಸಿದರು.




