ಕಾಂಗ್ರೆಸ್ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿದೆ: ಸಿಎಂ, ಬಹಿರಂಗ ಪ್ರಚಾರದ ಕೊನೆ ದಿನ ಮುಖ್ಯಮಂತ್ರಿಯಿಂದ ಬಿರುಸಿನ ಪ್ರಚಾರ

ಹಾನಗಲ್ : ರಾಜ್ಯದಲ್ಲಿ ಕೇವಲ ಎರಡು ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ. ಇಡೀ ರಾಜ್ಯಕ್ಕೆ ಚುನಾವಣೆ ನಡೆಯುವ ರೀತಿಯಲ್ಲಿ ಜಿದ್ದಾ ಜಿದ್ದಿ ನಡೆಯುತ್ತಿದೆ. ವೈಯಕ್ತಿಕ ನಿಂದನೆ ಜತೆ ಪಕ್ಷಗಳ ನಿಂದನೆ ಜೋರಾಗಿ ನಡೆಯುತ್ತಿದೆ. ಅಭಿವೃದ್ಧಿಗೆ ಪೂರಕವಾದ ಯಾವುದೇ ಟೀಕೆಗಳು ಬಾರದಿದ್ದರೂ ಆಡಳಿತರೂಢ ಬಿಜೆಪಿ ಮಾತ್ರ ಅನೇಕ ಯೋಜನೆಗಳನ್ನು ಘೋಷಣೆ ಮಾಡುವುದರ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷ ಆರೋಪಿಸಿದೆ .
ಚುನಾವಣಾ ಬಹಿರಂಗ ಪ್ರಚಾರದ ಕೊನೆ ದಿನವಾದ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿರುಸಿನ ಪ್ರಚಾರದಲ್ಲಿ ಪಾಲ್ಗೊಂಡರು. ಇಂದೂ ಕೂಡ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅನ್ನು ಕೇಂದ್ರೀಕರಿಸಿ ಟೀಕೆ ಮಾಡಿದರು. ವಿಪರ್ಯಾಸ ಎಂದರೆ ಜೆಡಿಎಸ್ ವಿರುದ್ಧ ಇದುವರೆಗೂ ಒಂದೇ ಒಂದು ಆರೋಪ, ಟೀಕೆ ಮಾಡದೇ ಇರುವುದು ಮಾತ್ರ ಅನೇಕರ ಹುಬ್ಬೇರುವಂತೆ ಮಾಡಿದೆ.
ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಕಾಂಗ್ರೆಸ್
ಜಾತಿ, ಜಾತಿಗಳ ನಡುವೆ ಕಂದಕ ಸೃಷ್ಟಿ ಮಾಡಿ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡಿ, ಅಧಿಕಾರದ ಅರಮನೆ ಕಟ್ಟುವ ಕಾಂಗ್ರೆಸ್ ಪ್ರಯತ್ನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಆರೋಪಿಸಿದರು. ಹಾನಗಲ್ ನಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರೂ ಇಲ್ಲಿಗೆ ಬಂದಿದ್ದಾರೆ. ಹೇಗಾದರೂ ಮಾಡಿ ಬಿ.ಜೆ.ಪಿ ಹವಾಕ್ಕೆ ಅಡ್ಡಿ ಪಡಿಸಬೇಕು, ಮತಗಳನ್ನು ಒಡೆಯಬೇಕು ಎಂದು ಹಣದ ಚೀಲ ಹಿಡಿದು ಬಂದಿದ್ದಾರೆ. ನಮ್ಮ ನಮ್ಮ ಮತಗಟ್ಟೆಗಳನ್ನು ಯುವಕರು ಸುರಕ್ಷಿತವಾಗಿ ಕಾಯಬೇಕು ಎಂದು ಕರೆ ನೀಡಿದರು.


ಮುಖ್ಯಮಂತ್ರಿಯಾದವರು ಇಂತಹ ಹೇಳಿಕೆ ನೀಡುತ್ತಿರುವುದು ಮಾತ್ರ ವಿಪರ್ಯಾಸ. ಹಣದ ಚೀಲ ತಂದಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡಬೇಕು. ಅವರನ್ನು ಬಂಧಿಸಬೇಕು. ಅದನ್ನು ಬಿಟ್ಟು ಇಂತಹ ಬಹಿರಂಗ ಹೇಳಿಕೆ ನೀಡಿ, ಅವರೇ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ ಎಂದು ಪ್ರತಿಪಕ್ಷದವರು ದೂರಿದ್ದಾರೆ.
ಕಾಂಗ್ರೆಸ್ ಪಕ್ಷ ಘೋಷಣೆಗಳ ಪಕ್ಷ. ಇಂದಿರಾ ಗಾಂಧಿ ಗರೀಬಿ ಹಠಾವೋ ಎಂದರು. ಬಡತನ ಹೋಗಿದೆಯೇ ? 20 ಅಂಶಗಳ ಕಾರ್ಯಕ್ರಮ ಏನಾಗಿದೆ? ಅನ್ನಭಾಗ್ಯ ಯೋಜನೆ ಕಾಂಗ್ರೆಸ್ ಪಕ್ಷ ಪ್ರಾರಂಭಿಸುವ ಮುನ್ನವೂ ಅಕ್ಕಿ ನೀಡಲಾಗುತ್ತಿತ್ತು. ದೇಶದಲ್ಲಿ ಪಡಿತರ ನೀಡಲು ಶುರು ಮಾಡಿ 50 ವರ್ಷಗಳಾಗಿವೆ. ಕೇಂದ್ರ ಸರ್ಕಾರ 29 ರೂ. ರಾಜ್ಯ ಸರ್ಕಾರ 3.00 ರೂ ನೀಡುತ್ತದೆ. ಅದನ್ನು ತೆಗೆದುಕೊಂಡು ಅನ್ನಭಾಗ್ಯ ಎನ್ನುತ್ತಾರೆ ಎಂದು ಟೀಕಿಸಿದರು.
ಒಂದೇ ಸಮುದಾಯಕ್ಕೆ ಶಾದಿ ಭಾಗ್ಯ ಯೋಜನೆ ನೀಡಿದ್ದಾರೆ. ಇದ್ಯಾವ ನ್ಯಾಯ? ಒಬ್ಬರಿಗೆ ಕೊಟ್ಟು ಒಬ್ಬರನ್ನು ಬಿಡುವುದು ರಾಜಕಾರಣದಲ್ಲಿ ಒಡೆದಾಳುವ ಹಾಗೂ ಓಲೈಕೆಯ ನೀತಿ. ಒಂದು ತಾಲ್ಲೂಕಿಗೆ 4-5 ಜನರಿಗೆ ಮಾತ್ರ ಶಾದಿಭಾಗ್ಯ ನೀಡಿದ್ದಾರೆ. ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಹಚ್ಚಿದ್ದಾರೆಯೇ ವಿನ: ನ್ಯಾಯ ಕೊಡಲಿಲ್ಲ ಎಂದು ದೂರಿದರು.
ಅಲ್ಪಸಂಖ್ಯಾತರಿಗೂ ಕೂಡ ಕಾಂಗ್ರೆಸ್ ಅನ್ಯಾಯ ಮಾಡಿದೆ
ಅಲ್ಪಸಂಖ್ಯಾತರಿಗೂ ಕೂಡ ಕಾಂಗ್ರೆಸ್ ಅನ್ಯಾಯ ಮಾಡಿದೆ. ಅಧಿಕಾರದ ಐದು ವರ್ಷ ಅವರನ್ನು ಕತ್ತಲ ಬಾವಿಯಲ್ಲಿಟ್ಟು, ನಂತರ ಮತ ಕೇಳುವ ಸಮಯಕ್ಕೆ ಹಗ್ಗ ಕೊಟ್ಟು ಅವರನ್ನು ಸೆಳೆದು ಓಟು ಪಡೆದು ಪುನ: ಬಾವಿಗೆ ನೂಕುತ್ತಾರೆ. ಸಾರ್ವಜನಿಕರು ಜಾಗೃತರಾಗಿ ಕಾಂಗ್ರೆಸ್ ಸುಳ್ಳು ಕಂತೆಗೆ, ನೋಟಿನ ಚೀಲಕ್ಕೆ ತಿರಸ್ಕಾರ ಮಾಡಿ, ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಕರೆನೀಡಿದರು.
ಅಲ್ಪಸಂಖ್ಯಾತರು ಟೇಕನ್ ಫಾರ್ ಗ್ರಾಂಟೆಡ್ ಆಗದೇ ಜಾಗೃತರಾಗಬೇಕು
ಜಮೀರ್ ಅಹ್ಮದ್ ಗ್ರಾಮಕ್ಕೆ ಬಂದು ಸಾರ್ವಜನಿಕವಾಗಿ ಮತ ಕೇಳದೆ ಕೆಲವೇ ಕೆಲವರಿಗೆ ಮತ ಕೇಳಿದರು. ಅಲ್ಪಸಂಖ್ಯಾತರ ಮತಗಳು ಅವರ ಗುತ್ತಿಗೆ ಎಂದು ಕಾಂಗ್ರೆಸ್ ತಿಳಿದಿದ್ದಾರೆ. ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡಿರುವ ಅಲ್ಪಸಂಖ್ಯಾತ ಬಂಧುಗಳು ಜಾಗೃತರಾಗಬೇಕು.

ಟೇಕನ್ ಫಾರ್ ಗ್ರಾಂಟೆಡ್ ಆಗದೇ, ನಿಮ್ಮ ಓಟಿನ ಮಹತ್ವ ತಿಳಿಸಿ, ಕಾಂಗ್ರೆಸ್ ನವರಿಗೆ ಒಮ್ಮೆ ಸರಿಯಾದ ಪಾಠ ಕಲಿಸಿ, ನಂತರವೇ ಅವರು ನಿಮ್ಮ ಬಗ್ಗೆ ಚಿಂತನೆ ಮಾಡುತ್ತಾರೆ. ನಿಮ್ಮ ಮತಗಳು ಕಾಂಗ್ರೆಸ್‌ನದ್ದೇ ಎಂಬ ಹುಂಬತನದಿಂದ ಅಲ್ಪಸಂಖ್ಯಾತರ ಬಗ್ಗೆ ನಿರ್ಲಕ್ಷ ಮಾಡಿದ್ದಾರೆ ಎಂದು ಆರೋಪಿಸಿದರು.
ಬಹಿರಂಗ ಚರ್ಚೆಗೆ ಸಿದ್ಧ
ಕಾಂಗ್ರೆಸ್ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನಮ್ಮನ್ನು ಬಹಿರಂಗ ಚರ್ಚೆಗೆ ಕರೆಯುತ್ತಾರೆ. ನಮ್ಮ ಕೆಲಸ ಮಾತನಾಡುತ್ತದೆ. ಬಹಿರಂಗ ಚರ್ಚೆಗೆ ಕರೆಯುವ ಮೊದಲು ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿಯನ್ನು ಖುದ್ದಾಗಿ ಬಂದು ನೋಡಬೇಕು.

ನಂತರ ನಾನು ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.
ಜನರನ್ನು ಅಂಧಕಾರದಲ್ಲಿಯೇ ಇರಿಸುವ ಕೆಲಸವನ್ನ ಕಾಂಗ್ರೆಸ್ ಮಾಡಿದೆ
ಜನರನ್ನು ಅಂಧಕಾರದಲ್ಲಿಯೇ ಇರಿಸುವ ಕೆಲಸವನ್ನ ಕಾಂಗ್ರೆಸ್ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಮುಖ್ಯಮಂತ್ರಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಯಾವುದಾದರೂ ಸಣ್ಣ ಯೋಜನೆಗೆ ದೊಡ್ಡ ಪ್ರಚಾರವನ್ನು ಕೊಡುವುದು ಕಾಂಗ್ರೆಸ್‌ನ ಪ್ರವೃತ್ತಿ. ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿ ಬೇಕಾಗಿಲ್ಲ. ಜನರು ಬುದ್ಧಿವಂತರಾಗುವುದು ಬೇಕಾಗಿಲ್ಲ. ಜನ ಜಾಗೃತರಾದರೆ ತಮ್ಮ ಹಕ್ಕಿನ ಅರಿವಾಗುತ್ತದೆ ಎಂದು ಜನರನ್ನು ಹಿಂದುಳಿಯುವಂತೆ ಮಾಡಿದ್ದಾರೆ ಎಂದರು.

More News