ಹಾಯ್, ಹಲೋ ಎಂಬುದರ ಬದಲು ಸ್ವಚ್ಛ ಭಾರತ ಎಂದು ಆರಂಭಿಸಿ : ಸಚಿವ ನಾರಾಯಣಗೌಡ ಕರೆ

ವಿಜಯನಗರ: ಹಾಯ್, ಹಲೋ ಎಂದು ಮಾತುಕತೆ ಆರಂಭಿಸುವ ಬದಲು ಸ್ವಚ್ಛ ಭಾರತ ಎಂದು ಶುರು ಮಾಡಿ ಎಂದು ವಿದ್ಯಾರ್ಥಿಗಳು ಹಾಗೂ ಯುವ ಜನತೆಗೆ ಸಚಿವ ನಾರಾಯಣಗೌಡ ಅವರು ಕರೆ ನೀಡಿದರು.
ವಿಶ್ವಪ್ರಸಿದ್ಧ ಹಂಪಿಯ ವಿರೂಪಾಕ್ಷ ದೇವಸ್ಥಾನದ ಬಳಿ ಕ್ಲೀನ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಮಾತನಾಡಿದ ಅವರು, ಹಂಪಿ ವಿಶ್ವಪ್ರಸಿದ್ಧ ಸ್ಥಳ. ಇಲ್ಲಿಗೆ ದೇಶವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ದೇಶಕ್ಕೆ ಹೆಸರು ತರಬೇಕು ಎಂದು ಕರೆನೀಡಿದರು.
100 ಜನರಿಂದ ಸಾವಿರ ಜನ, ಸಾವಿರ ಜನರಿಂದ ಹತ್ತು ಸಾವಿರ ಜನರು ಹೀಗೆ ಎಲ್ಲರೂ ಕೈಗೂಡಿಸುವುದರಿಂದ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿ ಆಗಲಿದೆ. ನಮ್ಮ ಕಸವನ್ನು ನಾವೇ ಈಡೇರಿಸಬೇಕು. ಆದರೆ ನಮ್ಮಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಲಾಗುತ್ತದೆ, ಹಾಗೆ ಆಗಬಾರದು, ಕಸದ ಬುಟ್ಟಿಗೆ ಕಸವನ್ನು ಹಾಕಬೇಕು ಎಂದು ಸಚಿವರು ಕರೆ ನೀಡಿದರು.


ಹಿಂದೆ ನಮ್ಮ ಊರುಗಳಲ್ಲಿ ಪ್ರತಿ ಸೋಮವಾರದಂದು ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಎಲ್ಲರೂ ಮನೆ ಅಥವಾ ಊರುಗಳನ್ನು ಸ್ವಚ್ವಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ವಿ. ಸ್ವಯಂ ಪ್ರೇರಿತವಾಗಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು, ಶಾಲೆ ಕಾಲೇಜುಗಳು ಸೇರಿದಂತೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ನಮ್ಮ ದೇಶ ಎಂದು ಕಾಳಜಿ ಬರಬೇಕು. ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರು ಸುಧಾರಣೆ ಮಾಡಿಕೊಂಡರೇ ಸ್ವಚ್ಛ ಭಾರತ ಯಶಸ್ವಿ ಆಗಲಿದೆ ಎಂದರು.


ದೇಶದ 744 ಜಿಲ್ಲೆಗಳಲ್ಲಿ ಅಕ್ಟೋಬರ್ 1 ರಿಂದ 31 ರವರೆಗೆ ಕ್ಲೀನ್ ಇಂಡಿಯಾ ಕ್ಯಾಂಪೇನ್ ಹಮ್ಮಿಕೊಳ್ಳಲಾಗಿದೆ‌. ಒಂದು ತಿಂಗಳ ಅವಧಿಯಲ್ಲಿ 75 ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿ ಹೊಂದಲಾಗಿದೆ. ಕರ್ನಾಟಕದಲ್ಲಿ ಐದೂವರೆ ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿ ಹೊಂದಲಾಗಿದ್ದು, ಕರ್ನಾಟಕದಲ್ಲಿ ಉತ್ತಮ ಸ್ಪಂದನೆ ಸಿಕ್ಕಿರುವುದಕ್ಕೆ ಸಚಿವರು ಸಂತಸ ವ್ಯಕ್ತಪಡಿಸಿದರು.
ಶನಿವಾರ ಹಾಗೂ ಭಾನುವಾರದಂದು ಸಾವಿರಾರು ಪ್ರವಾಸಿಗರು ಹಂಪಿಗೆ ಬರುತ್ತಾರೆ. ಹಾಗಾಗಿ, ಪ್ರತಿ ಶುಕ್ರವಾರ ಹಂಪಿಯಲ್ಲಿ ವಿಶೇಷವಾಗಿ ಸ್ವಚ್ಛತಾ ಅಭಿಯಾನ ಕೈಗೊಳ್ಳುತ್ತೇವೆ ಎಂದು ಉಪ ವಿಭಾಗಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.

More News