ಬಿಟ್ ಕಾಯಿನ್ ಪ್ರಕರಣ: ನಿಗೂಢ ನಾಪತ್ತೆಯಾದ ಹ್ಯಾಕರ್ ಶ್ರೀಕೀ ಠಾಣೆಗೂ ಹಾಜರಾಗಲಿಲ್ಲ

ಬೆಂಗಳೂರು : ಹ್ಯಾಕರ್ ಶ್ರೀಕೀ ಅಲಿಯಾಸ್ ಶ್ರೀಕೃಷ್ಣ ರಮೇಶ್ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಅಂತರಾಷ್ಟ್ರೀಯ ಖ್ಯಾತಿ ಹ್ಯಾಕರ್ ಶ್ರೀಕೀ ಸಹಿ ಮಾಡಲು ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ ಆಗಮಿಸಿರಲಿಲ್ಲ.
ಶ್ರೀಕೀಗೆ ನ್ಯಾಯಾಲಯ ಜಾಮೀನು ನೀಡುವ ಸಂದರ್ಭದಲ್ಲಿ ಪ್ರತಿ ಶನಿವಾರ ಪೊಲೀಸ್ ಠಾಣೆಗೆ ತೆರಳಿ ಸಹಿಹಾಕಬೇಕೆಂದು ಸೂಚನೆ ನೀಡಿತ್ತು. ಆದರೆ, ಈತ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು, ನಿನ್ನೆಯೂ ಕೂಡ ಪೊಲೀಸ್ ಠಾಣೆಗೆ ಆಗಮಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಕರ್ ಶ್ರೀಕೃಷ್ಣ ಹಾಗೂ ವಿಷ್ಣುಭಟ್ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಶ್ರೀಕಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಜೈಲಿನಿಂದ ಹೊರಬಂದಿದ್ದ. ನ್ಯಾಯಾಲಯದ ಆದೇಶದ ಮೇರೆಗೆ ಶನಿವಾರ ರಾತ್ರಿಯವರೆಗೂ ಆತ ಠಾಣೆಗೆ ಆಗಮಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳವರೆಗೆ ಕಾದು ನಂತರ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿರುವ ಅಧಿಕಾರಿಗಳು ಆತನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಆತ ಎಲ್ಲಿದ್ದಾನೆ ಎಂಬಸುಳಿವು ಪೊಲೀಸರಿಗೆ ತಿಳಿದಿಲ್ಲ. ಆತನಿಗೆ ಜಾಮೀನು ಸಿಕ್ಕ ಬಳಿಕ ಆತ ನಿಗೂಢವಾಗಿ ನಾಪತ್ತೆಯಾಗಿದ್ದ.


ಬಿಟ್ ಕಾಯಿನ್ ಆರೋಪಿಯಾಗಿರುವ ಶ್ರೀಕೃಷ್ಣ ತಲೆಮರೆಸಿಕೊಂಡಿದ್ದು, ಆತನಿಗೆ ಜೀವಭಯವಿದೆ ಎಂದು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ದಿನಗಳ ಹಿಂದೆಯಷ್ಟೇ ಆರೋಪಿಸಿದ್ದರು. ಈ ಆರೋಪದ ನಂತರ ಆತನಿಗೆ ಪೊಲೀಸ್ ಭದ್ರತೆ ನೀಡಲು ಮುಂದಾಗಿತ್ತಾದರೂ ಆತನ ಮಾತ್ರ ಸುಳಿವು ಸಿಕ್ಕಿರಲಿಲ್ಲ.
ಹಳ್ಳ ಹಿಡಿಯುತ್ತಿದೆಯಾ ಪ್ರಕರಣ
ಬಿಟ್ ಕಾಯಿನ್ ಹಗರಣ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಅದು ಅಷ್ಟೇ ಬೇಗನೆ ಸುದ್ದಿ ತೆರೆಮರರೆಗೆ ಸರಿದಿತ್ತು. ಈ ಪ್ರಕರಣದಲ್ಲಿ ಸಾಕಷ್ಟು ಪ್ರಭಾವಿಗಳ ಹೆಸರಿದೆ, ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ವಿರೋಧ ಪಕ್ಷ ಆರೋಪಿಸಿತ್ತು.
ಇದರ ತನಿಖೆಯನ್ನು ಸಿಬಿಬಿ, ಇಡಿ ಇಲಾಖೆ ಮಾಡುತ್ತಿದೆ ಎಂದು ಸ್ವತಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದರು. ಆದರೆ, ಪ್ರಕರಣ ಬಯಲಾಗಿ ಒಂದು ತಿಂಗಳು ಮುಗಿಯುತ್ತಾ ಬಂದರೂ ಕೂಡ ಯಾರೂ ಯಾವ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎನ್ನುವುದು ಮಾತ್ರ ಬಹಿರಂಗವಾಗಲೇ ಇಲ್ಲ.
ಬೇರೆ ಪ್ರಕರಣದಂತೆ ಇದನ್ನೂ ಕೂಡ ಹಳ್ಳ ಹಿಡಿಸಲಾಗಿದೆ, ಪ್ರಕರಣ ತನಿಖೆ ನಡೆಸಲು ಸರ್ಕಾರ ಮುಂದಾಗುತ್ತಿಲ್ಲ. ಎಕೆಂದರೆ ಈ ಪ್ರಕರಣದಲ್ಲಿ ಆಡಳಿತ ಸರ್ಕಾರದ ಪ್ರಭಾವಿಗಳು ಶಾಮೀಲಾಗಿದ್ದಾರೆ ಎಂಬ ಮಾತು ಕೇಳಿಬಂದಿದ್ದರಿಂದ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂದು ಪ್ರತಿಪಕ್ಷ ಆರೋಪಿಸಿದೆ.

More News