ನವದೆಹಲಿ: ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಮಹತ್ವದ ಜವಾಬ್ದಾರಿ ನೀಡಿದೆ. ಈ ಕೂಡಲೇ ಗೋವಾಗೆ ತೆರಳಲು ಸೂಚನೆ ನೀಡಿದೆ. ಇನ್ನೆರೆಡು ದಿನಗಳಲ್ಲಿ ಗೋವಾ ವಿಧಾನಸಭೆಯ ಫಲಿತಾಂಶ ಬರುವ ಹಿನ್ನೆಲೆಯಲ್ಲಿ ಟ್ರಬಲ್ ಶೂಟರ್ ಗೆ ಕೂಡಲೇ ಗೋವಾಗೆ ತೆರಳಲು ಹೈಕಮಾಂಡ್ ಸೂಚಿಸಿದೆ.
ನಿನ್ನೆ ಎಕ್ಸಿಟ್ ಪೋಲ್ ಪ್ರಕಟವಾದ ಹಿನ್ನೆಲೆಯಲ್ಲಿ ಗೋವಾ ವಿಧಾನ ಸಭೆಯ ಫಲಿತಾಂಶ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟವಾಗುವ ಮುನ್ನ ಕೆಪಿಸಿಸಿ ಅಧ್ಯಕ್ಷ ಗೋವಾಗೆ ಹೋಗಲು ಸೂಚಿಸಲಾಗಿದೆ.
ಈ ಹಿಂದೆ ಗೋವಾ ಕಾಂಗ್ರೆಸ್ ನಾಯಕರನ್ನು ಪಕ್ಷ ಬಿಡದಂತೆ ದೇವರ ಮೇಲೆ ಆಣೆ ಮಾಡಿಸಲಾಗಿತ್ತು, ಪಕ್ಷಾಂತರ ಮಾಡಬಾರದು ಎಂದು ದೇವರ ಕಾಂಗ್ರೆಸ್ ಪಕ್ಷದ ಮುಖಂಡರು ಆಣೆ ಮಾಡಿಸಿದ್ದರು. ಪ್ರಸ್ತುತ ವಿಧಾನ ಸಭೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಉದ್ದೇಶದಿಂದ ಗೆಲ್ಲುವ ಮುಖಂಡರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ತಂತ್ರಗಾರಿಕೆಗೆ ಡಿ ಕೆ ಶಿವಕುಮಾರ್ ಅವರನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗ ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟೈಟ್ ಫೈಟ್ ಇರುವ ಹಿನ್ನಲೆ ಅಧಿಕಾರ ಹಿಡಿಯಲು ಎರಡೂ ಪಕ್ಷಗಳು ಮುಂದಾಗಿವೆ. ಬಿಜೆಪಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ನ ಶಾಸಕರನ್ನು ಸೆಳೆಯುವ ಸಾಧ್ಯತೆಗಳಿವೆ ಎಂಬ ಉದ್ದೇಶದಿಂದ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ತಂತ್ರಗಾರಿಕೆ ಹೂಡಲಾಗಿದೆ.
ಮಾರ್ಚ್ 10ಕ್ಕೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಗೋವಾದತ್ತ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೆರಳಲಿದ್ದಾರೆ. ಕಳೆದ ಬಾರಿ ಅಚಾತುರ್ಯದಿಂದ ಪಾಠ ಕಲಿತಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಫಲಿತಾಂಶಕ್ಕೂ ಮುನ್ನವೇ ಎಚ್ಚೆತ್ತುಕೊಂಡು, ರೆಸಾರ್ಟ್ ರಾಜಕಾರಣ ಆರಂಭಿಸಿದೆ.

ಎರಡು ದಿನಗಳ ಕಾಲ ಗೋವಾದಲ್ಲೇ ರಾಜ್ಯ ಕಾಂಗ್ರೆಸ್ ನಾಯಕರ ದಂಡು ಉಳಿಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, ಎಂಎಲ್ ಸಿ ಪ್ರಕಾಶ್ ರಾಥೋಡ್ ಸೇರಿದಂತೆ ಕೆಲ ನಾಯಕರು ಗೋವಾಗೆ ತೆರಳಲಿದ್ದಾರೆ.
ಇಂದು ಸಂಜೆ ಗೋವಾದಲ್ಲಿ ಸಭೆ
ಪಕ್ಷದ ಅಧಿಕೃತ ಎಲ್ಲಾ ಅಭ್ಯರ್ಥಿಗಳೊಂದಿಗೆ ಇಂದು ಸಂಜೆ ಗೋವಾದಲ್ಲಿ ತುರ್ತು ಸಭೆಯನ್ನು ನಡೆಸಲು ಮುಖಂಡರು ತೀರ್ಮಾನಿಸಿದ್ದು, ಚುನಾವಣಾ ಫಲಿತಾಂಶ ಬಂದ ತಕ್ಷಣ ಎಲ್ಲಾ ಶಾಸಕರನ್ನು ರೆಸಾರ್ಟ್ ಗೆ ಶಿಫ್ಟ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ಅಥವಾ ರಾಜಸ್ಥಾನದಲ್ಲಿರುವ ರೆಸಾರ್ಟ್ ಗೆ ಶಿಫ್ಟ್ ಮಾಡಲು ಚಿಂತಿಸಲಾಗಿದ್ದು, ಹೈಕಮಾಂಡ್ ಸೂಚನೆ ಮೇರೆಗೆ ಗೇಮ್ ಪ್ಲ್ಯಾನ್ ಸಿದ್ದಮಾಡಿಟ್ಟುಕೊಳ್ಳಲಾಗಿದೆ ಎನ್ನಲಾಗಿದೆ.




