GOODBYE TO POLITICS BECOME SWAMIJI: ರಾಜಕಾರಣಕ್ಕೆ ಗುಡ್ ಬೈ: ಸನ್ಯಾಸತ್ವ ಕಡೆಗೆ ಮಾಜಿ ಸಿಎಂ ಬಿಎಸ್ ವೈ ಪರಮಾಪ್ತ: ಗಾಣಿಗ ಸಮಾಜದ ಪೀಠಾಧಿಪತಿ

ಬೆಂಗಳೂರು : ಎರಡು ಬಾರಿ ಶಾಸಕರಾಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ, ಸಹಕಾರ ಸಚಿವರಾಗಿ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರಾಜಕಾರಣಿಯೊಬ್ಬರು ಈಗ ಸನ್ಯಾಸತ್ವ ಕಡೆಗೆ ಪಯಣ ಬೆಳೆಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗಾಣಿಗ ಜನಾಂಗದ ನಾಯಕರಾಗಿದ್ದ ಬಿ ಜೆ ಪುಟ್ಟಸ್ವಾಮಿ ಅವರು ಇನ್ನು ಮುಂದೆ ಗಾಣಿಗ ಸಮಾಜದ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾಗಲಿದ್ದಾರೆ.
ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಗಳಾಗಲಿದ್ದಾರೆ ಬಿ ಜೆ ಪುಟ್ಟಸ್ವಾಮಿ ಅವರು, ಇನ್ನು ಮುಂದೆ ಶ್ರೀ ಪೂರ್ಣಾನಂದ ಪುರಿ ಸ್ವಾಮಿಗಳಾಗಲಿದ್ದು, ಮೇ ತಿಂಗಳ 15ರಂದು ಅವರ ಪೀಠಾರೋಹಣ ಮತ್ತು ಪಟ್ಟಾಭಿಷೇಕ ನಡೆಯಲಿದೆ.

ರಾಜಕೀಯಕ್ಕೆ ಬಿ.ಜೆ.ಪುಟ್ಟಸ್ವಾಮಿ ಗುಡ್ ಬೈ ಹೇಳಲಿದ್ದು, ಗಾಣಿಗ ಸಮುದಾಯದ ಸ್ವಾಮೀಜಿಯಾಗಿ ಪದಗ್ರಹಣ ಮಾಡಲಿದ್ದಾರೆ. ಶೀಘ್ರದಲ್ಲೇ ಸನ್ಯಾಸ ದೀಕ್ಷೆ ಪಡೆಯಲಿರುವ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಅವರೇ ಖುದ್ದಾಗಿ ದೀಕ್ಷಾ ಕಾರ್ಯಕ್ರಮಕ್ಕೆ ನಾಯಕರಿಗೆ ಆಹ್ವಾನಿಸುತ್ತಿದ್ದಾರೆ.

ಸಿಎಂ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿಎಸ್ ವೈ, ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡುತ್ತಿದ್ದಾರೆ. ಮೇ೧೫ರಂದು ಸ್ವಾಮೀಜಿಯಾಗಿ ಪಟ್ಟಾಭಿಷೇಕವನ್ನು ಶ್ರೀ ರಾಜರಾಜೇಶ್ವರಿ ಜಯೇಂದ್ರ ಶ್ರೀಗಳಿಂದ ದೀಕ್ಷೆ ಪಡೆಯಲಿದ್ದಾರೆ.
ನೆಲಮಂಗಲ ಬಳಿಯ ತೈಲೇಶ್ವರ ಗಾಣಿಗರ ಸಂಸ್ಥಾನ ಮಠದಲ್ಲಿ ಕಾರ್ಯಕ್ರಮ ನಡೆಯಲಿದೆ. ಗಾಣಿಗ ಜನಾಂಗ ಸಾಮಾಜಿಕವಾಗಿ, ರಾಜಕೀಯವಾಗಿ ಆರ್ಥಿಕವಾಗಿ ಹಿಂದುಳಿದ ಜನಾಂಗವಾಗಿದೆ. ಜೀವನದ ಸಂಧ್ಯಾಕಾಲದಲ್ಲಿ ಪುಟ್ಟಸ್ವಾಮಿ ಅವರು ಭಾರತೀಯ ಸಂಸ್ಕೃತಿಯ ಆಶ್ರಮ ವ್ಯವಸ್ಥೆಯನ್ನು ಸ್ವೀಕರಿಸಲು ನಿರ್ಧರಿಸಿದ್ದಾರೆ.

ಬಿ ಜೆ ಪುಟ್ಟಸ್ವಾಮಿ ಅವರಿಗೆ ಜಗನ್ಮಾತೆ ರಾಜರಾಜೇಶ್ವರಿ ಅಮ್ಮನವರು ಪ್ರೇರಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

More News