ಭಾರತೀಯ ಚಿತ್ರರಂಗದ ಖ್ಯಾತನಟ ಮೆಗಾಸ್ಚಾರ್ ಚಿರಂಜೀವಿ ಅವರಿಗೆ ಇಂದು 67ರ ಹುಟ್ಟುಹಬ್ಬದ ಸಂಭ್ರಮ. ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿಯೇ ಆಚರಿಸಿಕೊಂಡ ಅವರು ಪುತ್ರ ರಾಮ್ ಚರಣ್, ಪುತ್ರಿ ಹಾಗೂ ಪತ್ನಿಯ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದರು.
ಸಾಮಾಜಿಕ ಜಾಲತಾಣದ ಮೂಲಕ ತೆಲುಗು ಚಿತ್ರ ರಂಗದ ಗಣ್ಯರು ಮತ್ತು ದಕ್ಷಿಣ ಭಾರತದ ನಟ ನಟಿಯರು ಬಾಲಿವುಡ್ ತಾರೆಯರು ಚಿರು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅದೇ ರೀತಿಯಲ್ಲಿ ಚಿರು ಅವರು ಈ ವರ್ಷ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದು, ಭೋಲಾ ಶಂಕರ್, ವಾಲ್ಟರ್ ವೀರಯ್ಯ ಮತ್ತು ಗಾಡ್ ಫಾದರ್ ನಲ್ಲಿ ನಟಿಸುತ್ತಿದ್ದಾರೆ.
ಅವರ ಹುಟ್ಟು ಹಬ್ಬಕ್ಕೆ ಗಾಡ್ ಫಾದರ್ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಈ ಚಿತ್ರ ಮಲಯಾಳಂನ ಲೂಸಿಫರ್ ಚಿತ್ರದ ರಿಮೇಕ್, ಹಾಗಿದ್ದರೂ ಈ ಚಿತ್ರದ ಮೇಲೆ ಚಿರು ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 80 ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ.
ಲೂಸಿಫರ್ ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಾಯಕರಾಗಿ ಅಭಿನಯಿಸಿದ್ದರು. ಅದೇ ಪಾತ್ರವನ್ನು ಮೆಗಾಸ್ಟಾರ್ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರದಲ್ಲಿ ಈ ಚಿತ್ರದಲ್ಲಿದ್ದು, ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮೋಹನ್ ರಾಜಾ ಅವರ ನಿರ್ದೇಶನದಲ್ಲಿ ಈ ಸಿನೆಮಾ ಮೂಡಿಬಂದಿದ್ದು, ನೀರವ್ ಶಾ ಛಾಯಾಗ್ರಹಣ, ಥಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಗಾಡ್ ಫಾದರ್ ಸಿನೆಮಾ ಈ ವರ್ಷದ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ 5 ರಂದು ತೆರೆಕಾಣಲಿದೆ. ಮತ್ತೊಂದು ಚಿತ್ರ ಬೋಲಾ ಶಂಕರ್ 2023 ರ ಎಪ್ರಿಲ್ 14 ರಂದು ತೆರೆ ಕಾಣಲಿದೆ.
#salman khan #megastar #chiranjeevi #mohanlal #godfather #lushifer #nayanthara #happy birthday #ramcharn




