GANGA KALYAN SCHEME: ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ಆರೋಪ: ಸೂಕ್ತ ರೀತಿಯ ತನಿಖೆಗೆ ಸಿಎಂ ಭರವಸೆ

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಗಂಗಾಕಲ್ಯಾಣ ಯೋಜನೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಇಂದು ವಿಧಾನಸಭೆಯಲ್ಲಿ ಮಾರ್ಧನಿಸಿತು. ಕಾಂಗ್ರೆಸ್ ಪಕ್ಷದ ಆಕ್ಷೇಪಕ್ಕೆ ಜನತಾದಳ ದ ಶಾಸಕರು ಕೈಜೋಡಿಸಿ, ಸದನದ ಬಾವಿಗಿಳಿದು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಅವ್ಯವಹಾರದ ಬಗ್ಗೆ ಸೂಕ್ತ ರೀತಿಯ ತನಿಖೆ ನಡೆಸಲಾಗುವುದು ಎಂದು ಸದನಕ್ಕೆ ತಿಳಿಸಿದರು. ಇದರಿಂದ ಶಾಸಕರು ತಮ್ಮ ಧರಣಿಯನ್ನು ಹಿಂದಕ್ಕೆ ಪಡೆದರು.
ಶಾಸಕ ಪ್ರಿಯಾಂಕ್ ಖರ್ಗೆ ಗಂಗಾಕಲ್ಯಾಣ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿ, 2019-21 ರಲ್ಲಿ ಬೋರ್ ವೆಲ್ ಕೊರೆಯಲಾಗಿದೆ. ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಆರೋಪವಿದೆ. ಇದರ ಬಗ್ಗೆ ಸರ್ಕಾರ ಸ್ಪಷ್ಟ ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯವ್ಯಾಪಿ ಒಂದೇ ಗುತ್ತಿಗೆದಾರರರಿಗೆ ಬಾವಿ ಕೊರೆಯುವ ಯೋಜನೆಗೆ ಆಕ್ಷೇಪ ಹೊರಹಾಕಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, 2018ರ ಫಲಾನುಭವಿಗಳಿಗೆ ಬಾವಿ ಕೊರೆಯಿಸಿಲ್ಲ, ದೊಡ್ಡ ಹಗರಣ ಆಗಿದೆ ಆಂತ ಅಸಮಾಧಾನ ಹೊರ ಹಾಕಿದರು.

ಈ ವೇಳೆ ಸಿಎಂ ಬೊಮ್ಮಾಯಿ ಉತ್ತರ ನೀಡಿ, ಹಿಂದೆ ಬೋರ್ ವೆಲ್ ಗಳನ್ನ ಕೊರೆಯಲಾಗಿತ್ತು. ಆದರೆ ಸಮರ್ಪಕವಾಗಿ ಆಗ್ತಿರಲಿಲ್ಲ. ಆದರೆ ಈಗ ಗೊಂದಲ ಸರಿಪಡಿಸುವ ಕೆಲಸ ಮಾಡ್ತಿದ್ದೇವೆ. ಕೋರ್ಟ್ ನಲ್ಲಿರುವ ಪ್ರಕರಣಗಳ ಗಮನಹರಿಸ್ತೇವೆ, ಈ ವರ್ಷ ನಾವು ಬೋರ್ ವೆಲ್ ಕೊರೆಸುವುದು. ಅದನ್ನ ಕ್ಲಿಯರ್ ಮಾಡಲು ಆದೇಶ ನೀಡುತ್ತೇನೆ ಎಂದರಲ್ಲದೆ, ಇದಕ್ಕಾಗಿ ಕೂಡಲೇ ಸಭೆ ಕರೆದು ಚರ್ಚೆ ಮಾಡ್ತೇವೆ, ಎಂದು ಉತ್ತರಿಸಿದರು.

ಸಭೆಗೆ ಉತ್ತರ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ,”ಯೋಜನೆ ತಪ್ಪುಗಳನ್ನು ಸರಿಪಡಿಸಲಾಗುವುದು. ಹಿಂಬಾಕಿಯಾಗಿರುವ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು”, ಎಂದರು. ಮಧ್ಯೆ ಪ್ರವೇಶ ಮಾಡಿದ ಸಿಎಂ ಬಸವರಾಜ್ ಬೊಮ್ಮಾಯಿ,”ಕಳೆದ ಹಲವು ವರ್ಷಗಳಿಂದ ಗಂಗಾ ಕಲ್ಯಾಣ ಯೋಜನೆ ಜಾರಿಯಲ್ಲಿ ತಪ್ಪಾಗಿದೆ.2018-19 ರ ಅವಧಿಯ ಫಲಾನುಭವಿಗಳಿಗೆ ಈಗ ಬಾವಿ ಕೊರೆಸಲಾಗುತ್ತಿದೆ. ಈ ಯೋಜನೆ ಸರಳೀಕರಣ ಮಾಡಲಾಗುತ್ತಿದೆ. ಅದನ್ನು ಸರಿ ಪಡಿಸಲು ಶೀಘ್ರದಲ್ಲೇ ಸಭೆ ಕರೆಯುತ್ತೇನೆ. ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

#ganga kalyan scheme #assembly #congress #jds #cm basavaraj bommai #investigation

More News