ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದಲ್ಲಿ ಸತತ ಎರಡು ಪಂದ್ಯದಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಕಳಪೆ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ವೈಫಲ್ಯದಿಂದಾಗಿ ಸೌತ್ ಆಫ್ರಿಕಾ ವಿರುದ್ಧ ಸೋಲು ಕಂಡಿದೆ.
ಪರ್ತ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಸೌತ್ ಆಫ್ರಿಕಾದ ವೇಗದ ಬೌಲರ್ಗಳ ದಾಳಿಗೆ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳು ತತ್ತರಿಸಿದರು. ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಸೂರ್ಯಕುಮಾರ್ ಯಾದವ್(68) ಅವರ ಜವಾಬ್ದಾರಿಯ ಆಟದಿಂದ ಭಾರತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ಗಳಿಸಿತು.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ(15) ಹಾಗೂ ಕೆಎಲ್ ರಾಹುಲ್(9) ಜೋಡಿ ಮತ್ತೊಮ್ಮೆ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. ನಂತರ ಕಣಕ್ಕಿಳಿದ ವಿರಾಟ್ ಕೊಹ್ಲಿ(12) ಉತ್ತಮ ಆಟವಾಡುವ ಭರವಸೆ ಮೂಡಿಸಿ ವಿಕೆಟ್ ಒಪ್ಪಿಸಿದರು. ಇದಾದ ನಂತರದಲ್ಲಿ ಬಂದ ದೀಪಕ್ ಹೂಡಾ(0), ಹಾರ್ದಿಕ್ ಪಾಂಡ್ಯ(2) ಹಾಗೂ ದಿನೇಶ್ ಕಾರ್ತಿಕ್(6) ಜವಾಬ್ದಾರಿಯ ಆಟವಾಡುವಲ್ಲಿ ಎಡವಿದರು.
ಅದರೆ ಸೌತ್ ಆಫ್ರಿಕಾದ ಬೌಲಿಂಗ್ ದಾಳಿಗೆ ನಲುಗಿ 49 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ, ಅಲ್ಪಮೊತ್ತಕ್ಕೆ ಕುಸಿಯುವ ಆತಂಕಕ್ಕೆ ಸಿಲುಕಿತ್ತು. ಆದರೆ 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಸಂಕಷ್ಟದಲ್ಲಿದ್ದ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಆಫ್ರಿಕನ್ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಸೂರ್ಯಕುಮಾರ್, 40 ಬಾಲ್ಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 68 ರನ್ಗಳಿಸಿ ಮಿಂಚಿದರು.

ಸೌತ್ ಆಫ್ರಿಕಾಕ್ಕೆ ವೇಗದ ಬೌಲರ್ಗಳು ಆಸರೆಯಾದರು. ತಮ್ಮ ಮೊದಲ ಓವರ್ನಿಂದಲೇ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಎನ್ಗಿಡಿ, 4 ಓವರ್ಗಳಲ್ಲಿ 29 ರನ್ಗಳಿಸಿ 4 ಪ್ರಮುಖ ವಿಕೆಟ್ ಪಡೆದು ಭಾರತದ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಪರ್ನೆಲ್ 3 ಹಾಗೂ ನೋಕಿಯೇ 1 ವಿಕೆಟ್ ಪಡೆದರು.
ಭಾರತ ನೀಡಿದ 134 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ಸಹ ಆರಂಭಿಕ ಆಘಾತ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿಕಾಕ್(1), ರೊಸ್ಸೋ(0) ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಅರ್ಶದೀಪ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಕೆಲವೇ ಹೊತ್ತಿನಲ್ಲಿ ನಾಯಕ ತೆಂಬಾ ಬವುಮಾ(10) ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ಪರಿಣಾಮ ಸೌತ್ ಆಫ್ರಿಕಾ ಕೂಡ 24ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಜೊತೆಯಾದ ಐಡೆನ್ ಮಾರ್ಕ್ರಂ(52) ಹಾಗೂ ಡೇವಿಡ್ ಮಿಲ್ಲರ್(59*) ಅದ್ಭುತ ಆಟವಾಡಿದರು. ಟೀಂ ಇಂಡಿಯಾ ಬೌಲರ್ಗಳ ಮೇಲೆ ನಿಧಾನವಾಗಿ ಪ್ರಾಬಲ್ಯ ಸಾಧಿಸಿದ ಈ ಜೋಡಿ, 4ನೇ ವಿಕೆಟ್ಗೆ 76 ರನ್ ಕಲೆಹಾಕಿ ತಂಡದ ಗೆಲುವಿನ ಆಸೆ ಜೀವಂತವಾಗಿರಿಸಿದರು. ಮಾರ್ಕ್ರಂ ಔಟಾದ ನಂತರವೂ ತಮ್ಮ ಆಟ ಮುಂದುವರಿಸಿದ ಮಿಲ್ಲರ್, ತಂಡವನ್ನ ಗೆಲುವಿನ ದಡಸೇರಿಸಿದರು.
ಭಾರತದ ಪರ ಅರ್ಶದೀಪ್ ಸಿಂಗ್ 2, ಶಮಿ, ಹಾರ್ದಿಕ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು. ಭಾರತ ತನ್ನ ಮುಂದಿನ ಪಂದ್ಯದಲ್ಲಿ ನ.2ರಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
#t20 cricket world cup #india south Africa #loast the match india #tema india poor performence #surya kumar yadav batted well #opener failure




