ಆಂಧ್ರಪ್ರದೇಶ: ತಿರುಪತಿ ತಿಮ್ಮಪ್ಪ.. ಆಂದ್ರಪ್ರದೇಶದ ತಿರುಮಲದಲ್ಲಿರುವ ತಿಮ್ಮಪ್ಪನ ದೇವಾಲಯ ವಿಶ್ವದ ಶ್ರೀಮಂತ ದೇವಾಲಯಗಳ ಪೈಕಿ ಒಂದಾಗಿದೆ. ಕೋಟ್ಯಾಧಿಪತಿಗಳು, ವ್ಯಾಪಾರಿಗಳು, ರಾಜಕಾರಣಿಗಳು ಸೇರಿದಂತೆ ಲಕ್ಷಾಂತರ ಸಾಮಾನ್ಯ ಜನರು ಇಲ್ಲಿಗೆ ಬಂದು ಕಾಣಿಕೆಗಳನ್ನು ಸಮರ್ಪಿಸುತ್ತಾರೆ.
ನೀವು ನಂಬುತ್ತೀರೋ ಇಲ್ವೋ ತಿರುಪತಿ ದೇವಸ್ಥಾನದ ಆಸ್ತಿ ಬರೋಬ್ಬರಿ ಕೋಟ್ಯಾಂತರ ರೂಪಾಯಿ ಇದೆ. ಇದೀಗ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ರಾಜ್ಯದ ಹಲವಾರು ಕಡೆ 7 ಸಾವಿರಕ್ಕೂ ಅಧಿಕ ಎಕರೆ ಭೂಮಿ ಇದೆ ಎಂದು ಟಿಟಿಡಿ ಅಧಿಕೃತವಾಗಿ ಹೇಳಿದೆ.
ಸುಮಾರು ದೇಶದ 960 ಪ್ರದೇಶಗಳಲ್ಲಿ 2 ಲಕ್ಷ ಕೋಟಿ ರೂ.ಗಳು ಮೀರುವಷ್ಟು ಮೌಲ್ಯದ 7123 ಎಕರೆ ಜಮೀನಿದೆ. ತಿರುಪತಿ ಮತ್ತು ತಿರುಮಲದಲ್ಲಿ ಕಟ್ಟಡಗಳು, ಅತಿಥಿ ಗೃಹಗಳು, ಕುಟೀರಗಳು, ಯಾತ್ರಾತ್ರಿಗಳ ಸೌಕರ್ಯ ಕೇಂದ್ರಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸೇರಿದಂತೆ ಇನ್ನಿತರೆ ಹೆಸರಿನಲ್ಲಿ 5 ಸಾವಿರ ಕೋಟಿ, ದೇವಸ್ಥಾನದ ಹೆಸರಿನಲ್ಲಿ 2.26 ಲಕ್ಷ ಕೋಟಿ ಆಸ್ತಿಗಳಿವೆ ಎಂದು ಟಿಟಿಡಿ ಹೊರಡಿಸಿರುವ ಶ್ವೇತಪತ್ರದಲ್ಲಿ ವಿವರಿಸಲಾಗಿದೆ.

ಈ ಆಸ್ತಿಯು ಹಲವು ರಾಜ್ಯಗಳ ವಾರ್ಷಿಕ ಬಜೆಟ್ ಅನ್ನು ಮೀರಿಸುವಷ್ಟಿದ್ದು, ಅಬ್ಬಾ ಅಂತ ಹುಬ್ಬೇರಿಸುವಂತೆ ಮಾಡಿದೆ. ತಿರುಪತಿಗೆ ಇಷ್ಟೊಂದು ಸಂಪತ್ತು ಯಾವ ಮೂಲೆಯಿಂದ ಹರಿದು ಬರಲಿದೆ ಎಂಬುದು ನೋಡುತ್ತಾ ಹೋದಂತೆ ಅನೇಕ ವಿಚಾರಗಳು ಬರುತ್ತದೆ.
ತಿರುಪತಿ ತಿಮ್ಮಪ್ಪ ನ ಮೇಲೆ ಜನರು ಅಪಾರವಾದ ನಂಬಿಕೆ ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಈ ಪ್ರಮಾಣದ ದೇಣಿಗೆ ಹರಿದುಬರಲು ಪ್ರಮುಖ ಕಾರಣವಾಗಿದೆ. ಒಂದು ರೂಪಾಯಿಯಿಂದ ಹಿಡಿದು ಕೋಟ್ಯಾಂತರ ರೂಪಾಯಿಗಳವರೆಗೆ ತಿಮ್ಮಪ್ಪನ ಹುಂಡಿಗೆ ಹಣ ಹಾಕ್ತಾರೆ. ಪ್ರತಿ ಭಾರಿ ಇಲ್ಲಿ ಲೆಕ್ಕ ಹಾಕುವಾಗಲು ಸಾಕಷ್ಟು ಬೆಳ್ಳಿ, ಚಿನ್ನವನ್ನು ಸಂಗ್ರಹಿಸಲ್ಪಡುತ್ತದೆ.
ತಿರುಪತಿ ಬೆಟ್ಟ ಹತ್ತಿ, ಮನಸ್ಸಿನಲ್ಲಿ ಅಂದುಕೊಂಡಿದ್ದು ನೆರವೇರುತ್ತೆ ಎಂಬ ನಂಬಿಕೆ ಜನರದ್ದು. ಹೀಗಾಗಿ, ವರ್ಷದಾದ್ಯಂತ ಜನರು ತಿರುಪತಿಗೆ ಬರ್ತಾನೆ ಇರ್ತಾರೆ. ಅದರಿಂದಾಗಿ ತಿರುಮಲದಲ್ಲಿ ಪ್ರತಿ ತಿಂಗಳ ಗಳಿಕೆ ಅಂದಾಜು 100 ಕೋಟಿಯಿತ್ತು. ಕೊರೋನ ಬಂದಮೇಲೆ ಇದರ ಗಳಿಕೆ ಪ್ರಮಾಣ ದ್ವಿಗುಣಗೊಂಡಿದ್ದು, ತಿಂಗಳಿಗೆ ಕನಿಷ್ಟ 140 ಕೋಟಿಯಷ್ಟು ಸಂಗ್ರಹ ಆಗ್ತಿದೆ.

ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಇಲ್ಲಿ ಜನರು ಕೂದಲು ಮುಡಿ ಕೊಡುವುದು ವಾಡಿಕೆ. ಅದಕ್ಕಾಗಿಯೇ ವರ್ಷವಾರು ಜನ ಕೂದಲು ಬಿಡ್ತಾರೆ. ಇಲ್ಲಿ ಬಂದು ಅದನ್ನು ತೆಗೆಸ್ತಾರೆ. ಅದರಿಂದ ಇಲ್ಲಿ ವಾರ್ಷಿಕವಾಗಿ 150 ಕೋಟಿಯಷ್ಟು ಆದಾಯ ಬರುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹ ಆಗುವ ದೇವಾಲಯ ಬೇರೊಂದಿಲ್ಲ ಎಂತಲೇ ಹೇಳಬಹುದು.
2021-22 ನೇ ಸಾಲಿನಲ್ಲಿ ಕರ್ನಾಟಕದ ಬಜೆಟ್ ಗಾತ್ರ 2.46 ಲಕ್ಷ ಕೋಟಿ, ಆಂದ್ರಪ್ರದೇಶದ ಬಜೆಟ್ ಗಾತ್ರ 2.29 ಲಕ್ಷ ಕೋಟಿ, ತೆಲಂಗಾಣದ ಬಜೆಟ್ 2.30 ಲಕ್ಷ ಕೋಟಿಯಿದೆ. ಆದರೆ, ಇದೀಗ ತಿರುಪತಿ ದೇವಸ್ಥಾನದ ಸಂಪತ್ತಿನ ಗಾತ್ರವೂ ಇದಕ್ಕೆ ಸರಿಸಮಾನವಾಗಿದೆ ಎಂದರೆ ಆಶ್ಚರ್ಯ ಆಗದೇ ಇರುವುದೇ…?
#ttd #tirupathi thimmappa temple #andrapradesh #property #unimmaginable




