ಹುಬ್ಬಳ್ಳಿ ಡಿ.7: ಕೇಶ್ವಾಪೂರ ಠಾಣೆ ವ್ಯಾಪ್ತಿಯಲ್ಲಿ ನಡೆದ ಉದ್ಯಮಿ ಪುತ್ರನ ಕೊಲೆ ಪ್ರಕರಣದಲ್ಲಿ ಏಳು ಜನರನ್ನು ವಶಕ್ಕೆ ಪಡೆಯಲಾಗಿದೆ. ಸವಾಲಾಗಿರುವ ಈ ಪ್ರಕರಣವನ್ನು ನಮ್ಮ ಪೊಲೀಸರು ಭೇದಿಸಿದ್ದಾರೆ. ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇರುವುದರಿಂದ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಭುರಾಮ್ ಹೇಳಿದರು.

ಉದ್ಯಮಿ ಪುತ್ರನ ಕೊಲೆ ಪ್ರಕರಣದ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೆಲವರು ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯುವಕನ ಮಿಸ್ಸಿಂಗ್ ಬಹಳ ಅನುಮಾನ ಮೂಡಿಸಿತ್ತು. ಆಗ ನಮ್ಮ ಸಿಬ್ಬಂದಿ ಯುವಕನ ತಂದೆಯನ್ನು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ವ್ಯಾಪಾರದ ಉದ್ದೇಶಕ್ಕಾಗಿ ಕಲಘಟಗಿಗೆ ತಂದೆ ಮಗ ಇಬ್ಬರು ಹೋಗಿ, ತಂದೆ ಮಾತ್ರ ವಾಪಸ್ ಆಗಿದ್ದ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು ಎಂದರು.

ವ್ಯಾಪಾರಕ್ಕಾಗಿ ಕಲಘಟಗಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ತಂದೆಯನ್ನು ತೀವ್ರ ವಿಚಾರಣೆಯನ್ನ ಮಾಡಿದಾಗ ಸತ್ಯ ಬಯಲಾಗಿದೆ. ಈಗಾಗಲೇ ಏಳೂ ಜನರನ್ನ ಬಂಧಿಸಿದ್ದೆವೆ. ಉಸಿರುಗಟ್ಟಿಸಿ ಯುವಕನನ್ನು ಕೊಲೆ ಮಾಡಿದ್ದಾರೆ. ನಮ್ಮ ಸಿಬ್ಬಂದಿ ಭರತನನ್ನು ವಿಚಾರಣೆ ನಡೆಸಿದಾಗ ಪ್ರಕರಣವನ್ನ ದಿಕ್ಕೂ ತಪ್ಪಿಸಲು ನೋಡಿದ್ದು, ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ತನಿಖೆಗೆ ಪುಷ್ಟಿ ಬಂತು ಎಂದು ಅವರು ಹೇಳಿದರು.
ವೈಯಕ್ತಿಕ ಕಾರಣಗಳಿಂದ ತಂದೆಯೇ ಮಗನನ್ನ ಕೊಲೆ ಮಾಡಿಸಿದ್ದು ದೃಡವಾಗಿದೆ. ಇನ್ನೂ ಏಳು ಆರೋಪಿಗಳ ವಿಚಾರಣೆ ಮುಂದುವರೆದಿದೆ. ವಿಚಾರಣೆ ನಂತರ ಕೊಲೆಗೆ ಮೂಲ ಕಾರಣ ಗೊತ್ತಾಗಲಿದೆ. ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ ಮಾಡಿದರು.




