42 Thousand Civic Workers Permanent : 42 ಸಾವಿರ ಪೌರ ಕಾರ್ಮಿಕರಿಗೆ ಖಾಯಂಗೊಳಿಸಿ ಸರ್ಕಾರ ಆದೇಶ

ಬೆಳಗಾವಿ :ಡಿ.28: ಪೌರ ಕಾರ್ಮಿಕರ ಮುಖದಲ್ಲಿ ನಗು ನೋಡಿ ಅವರಿಗಿಂತ ಸಂತೋಷ ನನಗೆ ಆಗಿದೆ. ಬಹುತೇಕ 30 ವರ್ಷಗಳಿಂದ ಈ ಬೇಡಿಕೆಯನ್ನು ನೀವು ಸರ್ಕಾರಗಳ ಮುಂದೆ ಇಟ್ಟಿದ್ರಿ. ನಿಮ್ಮ ಬೇಡಿಕೆ ಈಡೇರುವ ಭರವಸೆ ಇರಲಿಲ್ಲ ಅನ್ಸುತ್ತೆ. ಆದ್ರೆ ಇವತ್ತು ನಿಮ್ಮ ಕಣ್ಣಲ್ಲಿ ಭವಿಷ್ಯ ನೋಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವ್ಯಕ್ತಿ ಹುಟ್ಟಿದಾಗಿನಿಂದಲೂ ಬೇರೆಯವರು ಹೊಲಸನ್ನು ಕ್ಲೀನ್ ಮಾಡುವಾಗ ಎಷ್ಟು ಮಾನಸಿಕ ಹಿಂಸೆ ಪಡುತ್ತಿರಾ ಅಂತ ನನಗೆ ಗೊತ್ತಿದೆ. ನೇರವಾಗಿ ಹೊಲಸನ್ನು ತೆಗೆಯುವ ಪರಿಸ್ಥಿತಿ ಬಹಳ ಗಂಭೀರ ಇದೆ. ಬದುಕಿಗಾಗಿ ಬೇರೆಯವರ ಹೊಲಸನ್ನು ತೆಗೆಯಬೇಕು ಎಂಬ ಪ್ರಶ್ನೆ ಮೂಡುತ್ತದೆ. ನಿಮ್ಮ ಜಾಗದಲ್ಲಿ ನಾನು ಇದ್ದರೂ ನನಗೂ ಹೀಗೆ ಅನ್ಸುತ್ತೆ. ಕಾರಜೋಳ ಸಾಹೆಬ್ರು ನಿಮ್ಮ ಪರಿಸ್ಥಿತಿ ಹೇಳಿದಾಗ ನನಗೆ ಕರುಳು ಚುರ್ ಅನ್ಸುತ್ತೆ ಎಂದು ಸಿಎಂ ಹೇಳಿದರು.

ರಾಜ್ಯದಲ್ಲಿ  ಸುಮಾರು 42 ಸಾವಿರ ಪೌರ ಕಾರ್ಮಿಕರಿದ್ದು, ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಖಾಯಂ ನೇಮಕಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು,  ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆ ನೀಡಲಾಗುತ್ತಿದ್ದು, ಅವರ ಆರೋಗ್ಯ ,ಅವರ ಮಕ್ಕಳ ಆರೋಗ್ಯ ಹಿತರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು. ಎಸ್ ಸಿ, ಎಸ್ ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಈ ನಿರ್ಣಯಕ್ಕೆ ಗಟ್ಟಿಯಾಗಿ ನಿಲ್ಲಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪೌರ ನೌಕರರ ಸೇವೆಯನ್ನು ಸರ್ಕಾರ ಗುರುತಿಸಿದೆ.

ಬರುವ ದಿನಗಳಲ್ಲಿ ಪೌರನೌಕರರ ಮಕ್ಕಳಿಗೆ  ಉತ್ತಮ ವಿದ್ಯೆ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಇದಕ್ಕೆ ಸರ್ಕಾರ ಎಲ್ಲ ಸಹಕಾರ ನೀಡುತ್ತದೆ ಎಂದು ಅವರು ತಿಳಿಸಿದರು. ಪೌರ ಕಾರ್ಮಿಕರ ಪರವಾಗಿ ಇರದ ಸರ್ಕಾರ, ಆಡಳಿತ ಹಾಗೂ ಅಧಿಕಾರ ಯಾಕೆ ಬೇಕು..? ಬಡವರು, ದುಡಿಯುವ ವರ್ಗದ ಪರವಾಗಿ ನಿಂತರೆ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಸಿಎಂ ಹೇಳಿದರು.

More News