ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅನ್ಯ ಪಕ್ಷಗಳ ಕೆಲವು ಪ್ರಭಾವಿ ನಾಯಕರು ಬಿಜೆಪಿಗೆ ಇಂದು ಸೇರ್ಪಡೆಯಾಗಲಿದ್ದಾರೆ.
ಹಿರಿಯ ನಟ ಅನಂತ್ ನಾಗ್ ಸೇರಿದಂತೆ ಅನೇಕ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಲಿದ್ದು, ಅವರು ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರೆ. ಇವರ ಜೊತೆ ನೆಲಮಂಗಲದ ಕೆಲವು ಜೆಡಿಎಸ್, ಕಾಂಗ್ರೆಸ್ ಮುಖಂಡರು ಕಮಲ ಸೇರ್ಪಡೆಯಾಗಲಿದ್ದಾರೆ.
ಇಂದು ಸಂಜೆ 4.30 ಕ್ಕೆ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಲಿದ್ದು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುಧಾಕರ್, ಸಚಿವ ಮುನಿರತ್ನ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ.
ಅನಂತ ನಾಗ್ 1983 ರಿಂದ ಜನತಾದಳ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು, 1983,1985,1989 ರ ಚುನಾವಣೆಗಳಲ್ಲಿ ಜನತಾದಳದ ಸ್ಟಾರ್ ಪ್ರಚಾರಕರಾಗಿದ್ದರು, 1994ರಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಅನಂತ್ ನಾಗ್, ಜೆ.ಎಚ್.ಪಟೇಲ್ ರ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಸಚಿವರಾಗಿದ್ದರು. 1983ರ ಲೋಕಸಭೆ ಚುನಾವಣೆಯಲ್ಲಿ ಕೂಡ ಅನಂತ್ ನಾಗ್ ಸ್ಪರ್ಧಿಸಿದ್ದರು.




