CM Siddaramaiah: ಸಿಎಂ ಫೈಟ್ ಗೆ ಬ್ರೇಕ್: ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ

ನವದೆಹಲಿ: ಕೊನೆಗೂ ಮುಖ್ಯಮಂತ್ರಿ ಸ್ಥಾನದ ಹಗ್ಗಜಗ್ಗಾಟಕ್ಕೆ ಬ್ರೇಕ್ ಬಿದ್ದಿದೆ…ಪ್ರಾರಂಭದ ಎರಡು ವರೆ ವರ್ಷ ಸಿದ್ದರಾಮಯ್ಯ ಮತ್ತೆರಡು ವರ್ಷಕ್ಕೆ ಡಿಕೆ ಶಿವಕುಮಾರ್ ರನ್ನು ರಾಜ್ಯದ ಮುಂದಿನ‌ ಮುಖ್ಯಮಂತ್ರಿ ಮಾಡಲು ಕೈ ಹೈಕಮಾಂಡ್ ನಿರ್ಧರಿಸಿದೆ.

ದೆಹಲಿಯಲ್ಲಿ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸರಣಿ ಸಭೆಯಲ್ಲಿ ಡಿಕೆ ಶಿವಕುಮಾರ್ ಮನವೊಲಿಸಲು ಬೆಳಗಿ ಜಾವದವರೆಗೂ ಸರ್ಕಸ್ ನಡೆಸಲಾಯಿತು. ಕೊನೆಗೂ 50-50 ಅಧಿಕಾರ ಹಂಚಿಕೆಗೆ ಬೇಸರದಲ್ಲೇ ಡಿಕೆ ಅಸ್ತು ಎಂದಿದ್ದು, ಎರಡುವರೆ ವರ್ಷ ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಉಪಮುಖ್ಯಂತ್ರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮುಂದಿನ ಎರಡು ವರೆ ವರ್ಷ ಸಿಎಂ ಖುರ್ಚಿ ಅಲಂಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲಿಗೆ ಯಾರಿಗೆ ಸಿಎಂ ಹುದ್ದೆ ನೀಡಬೇಕೆಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಗೊಂದಲ ಇತ್ತು.‌ ಈ ಬಗ್ಗೆ ‌ನೆನ್ನೆ ರಾತ್ರಿ ಅಂತಿಮ ತೀರ್ಮಾನ ತೆಗೆದುಕೊಂಡ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯರ ಹಿರಿತನದ ಕಾರಣದಿಂದಾಗಿ ಮೊದಲಿಗೆ ಸಿದ್ದರಾಮಯ್ಯಗೆ ಸಿಎಂ ಹುದ್ದೆ ನೀಡಲು ತೀರ್ಮಾನ ಮಾಡಿದೆ. ಡಿಕೆಶಿ ಕೈ ಕೆಳಗೆ ಸಿದ್ದರಾಮಯ್ಯ ಡಿಸಿಎಂ ಆಗಲು ಸಾಧ್ಯವಿಲ್ಲ.‌ಆದರೆ ಸಿದ್ದರಾಮಯ್ಯ ಸಿಎಂ ಆದಾಗ ಆ ಸರ್ಕಾರದಲ್ಲಿ ಡಿಕೆಶಿ ಉಪಮುಖ್ಯಮಂತ್ರಿಯಾದರೆ ಮುಜುಗರವಿಲ್ಲ. ಹೀಗಾಗಿ ಮೊದಲ ಅವಧಿಗೆ ಸಿಎಂ ಹುದ್ದೆಯನ್ನು ಸಿದ್ದರಾಮಯ್ಯಗೆ ನೀಡಲು ಹೈಕಮಾಂಡ್ ತೀರ್ಮಾನ ಮಾಡಿದೆ.

ಮೊದಲ‌ ಅವಧಿಗೆ ಸಿಎಂ ಆಗುವ ಸಿದ್ದರಾಮಯ್ಯಗೆ ಸಾಲು ಸಾಲು ಚುನಾವಣೆ ಎದುರಿಸಬೇಕಾಗಿದೆ. ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್, ಬಿಬಿಎಂಪಿ, 2024 ರ ಲೋಕಸಭಾ ಚುನಾವಣೆಗಳಲ್ಲಿ ಸಿದ್ದರಾಮಯ್ಯ ಪಕ್ಷ ಗೆಲ್ಲಿಸಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯ ಗೆ ತಮ್ಮದೇ ಆದ ಅಭಿಮಾನಿಗಳ ಬಳಗ ಇರುವ ಕಾರಣ
ಮೊದಲ ಅವಧಿಯ ಸಿಎಂ ಹುದ್ದೆಯನ್ನು ಸಿದ್ದುಗೆ ಬಿಟ್ಟು ಕೊಡಲು ಹೈಕಮಾಂಡ್ ಡಿಕೆ ಶಿವಕುಮಾರ್ ಅವರನ್ನು ಮನವೊಲಿಸಿದ್ದು, ಎರಡನೇ ಅವಧಿಗೆ ಸಿಎಂ ಆಗಲು ಡಿಕೆ ಶಿವಕುಮಾರ್ ಒಪ್ಪಿದ್ದಾರೆ.

ಇಂದು ಬೆಳಗ್ಗೆ ಎಐಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಟಿ ನಡೆಸಿ ಅಧಿಕೃತ ಘೋಷಣೆ ಮಾಡಲಿದ್ದು, ಇದೇ ೨೦ ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜೊತೆಗೆ ೩೦ ಮಂದಿ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

More News