WHO IS OPPOSITION LEADER FROM BJP ..? ಸಿಎಂಗಿಂತ ಹೆಚ್ಚು ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ: ಬಿಜೆಪಿ ನಾಯಕ ಯಾರು…?

ಬೆಂಗಳೂರು: ಪ್ರತಿಪಕ್ಷ  ಬಿಜೆಪಿಯಲ್ಲಿ ಇದೀಗ ವಿಪಕ್ಷ ನಾಯಕನ ಆಯ್ಕೆಗೆ ಭಾರೀ ಲಾಭಿ ಆರಂಭವಾಗಿದೆ.  ಮುಖ್ಯಮಂತ್ರಿ ಸ್ಥಾನಕ್ಕಿಂತ ಹೆಚ್ಚು ಕಗ್ಗಂಟಾಗಿದೆ. ಅತಿರಥ ಮಾಹಾರಥರಿದ್ದ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ.

ಪ್ರತಿಪಕ್ಷದ ನಾಯಕನ ಸ್ಥಾನವನ್ನು ಯಾರಿಗೆ ನೀಡಬೇಕು ಎನ್ನುವುದರ ಕುರಿತು ಬಿಜೆಪಿ ಹೈಕಮಾಂಡ್ ತಲೆಕೆಡಿಸಿಕೊಂಡಿದೆ. ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥವಾಗಿ ಎದುರಿಸಬಲ್ಲ ನಾಯಕ ಬಿಜೆಪಿಗೆ ಬೇಕಾಗಿದೆ. ಮುಂಬರುವ ಲೋಕಸಭಾ ಚುನಾವಣೆ, ಬಿಬಿಎಂಪಿ, ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಗಳ ದೃಷ್ಟಿಯಿಂದ ಬಿಜೆಪಿ ಹಿಂದೆಂದಿಗಿಂತಲೂ ಈಗ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮುವ ಅನಿವಾರ್ಯತೆಯಲ್ಲಿ ಸಿಲುಕಿಕೊಂಡಿದೆ.

ಆದರೆ, ಚುನಾವಣೆಯ ಫಲಿತಾಂಶ ಬಂದು ಹತ್ತು ದಿನಗಳು ಕಳೆದರೂ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿಲ್ಲ. ಅಲ್ಲದೆ, ವಿರೋಧ ಪಕ್ಷದ ನಾಯಕ ಯಾರಾಗಲಿದ್ದಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಕೇವಲ ಪ್ರತಿಪಕ್ಷದ ನಾಯಕ ಸ್ಥಾನ ಮಾತ್ರವಲ್ಲದೆ, ಉಪನಾಯಕ, ಮುಖ್ಯ ಸಚೇತಕ ಆಯ್ಕೆ ನಡೆದಿಲ್ಲ.

ಇದಕ್ಕೆಲ್ಲಾ ಜಾತಿ ರಾಜಕಾರಣ ಬಹಳವಾಗಿ ಕೆಲಸ ಮಾಡುತ್ತಿದೆ ಎಂದು ಕೇಳಿಬರುತ್ತಿದೆ. ಬಿಜೆಪಿ ಹೈಕಮಾಂಡ್ ಇದುವರೆಗೂ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳದೇ ಇರುವುದು ರಾಜ್ಯ ನಾಯಕರಲ್ಲಿ ಆತಂಕ ಇನ್ನಷ್ಟು ಹೆಚ್ಚಿಸಿದೆ. ಈವರೆಗೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ರಂತಹ ಪ್ರಮುಖ ನಾಯಕರು ಪ್ರತಿಪಕ್ಷ ಸ್ಥಾನವನ್ನು ನಿಭಾಯಿಸಿದ್ದರು. ಆದರೆ ಇಬ್ಬರೂ ವಿಧಾನಸಭೆಯಲ್ಲಿಲ್ಲ. ಈಶ್ವರಪ್ಪ ನೇಪತ್ಯಕ್ಕೆ ಸರಿದಿದ್ದಾರೆ. ಸಿಟಿ ರವಿ ಸೋಲುಂಡಿದ್ದಾರೆ. 

ರಾಜ್ಯದಲ್ಲಿ ಅಧಿಕಾರದಿಂದ ದೂರ ಉಳಿದಿರುವುದೇ ಬಿಜೆಪಿಗೆ ದೊಡ್ಡ ಹಿನ್ನೆಡೆಯಾಗಿದೆ. ಅದರ ಜತೆಯಲ್ಲಿಯೇ ಘಟಾನುಘಟಿ ನಾಯಕರು ಸೋಲು ಕಂಡಿದ್ದು ಇನ್ನಷ್ಟು ಸಮಸ್ಯೆಗೆ ನಾಂದಿ ಹಾಡಿದೆ. ಈ ಆಘಾತದಿಂದ ಬಿಜೆಪಿ ನಾಯಕರು ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಹಾಗೆಯೇ ಸಮರ್ಥ ನಾಯಕ ಬಿಜೆಪಿಯಲ್ಲಿ ಕಾಣುತ್ತಿಲ್ಲ ಎಂದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಸೇರಿದಂತೆ, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ಆರ್ ಅಶೋಕ್, ಅಶ್ವಥ್ ನಾರಾಯಣ, ಸುರೇಶ್ ಕುಮಾರ್ ಅವರ ಹೆಸರುಗಳು ಕೇಳಿಬರುತ್ತಿವೆ. ಇವರುಗಳು ತೆರೆಮರೆಯಲ್ಲಿ ವಿಪಕ್ಷ ಸ್ಥಾನಕ್ಕಾಗಿ ಸಾಕಷ್ಟು ಕಸರತ್ತು ಆರಂಭಿಸಿದ್ದಾರೆ.

ಲಿಂಗಾಯತ ವಿರೋಧಿ ಹೇಳಿಕೆಯಿಂದ ಅಧಿಕಾರವನ್ನೇ ತೈಜಿಸಿರುವ ಬಿಜೆಪಿ ಇದೀಗ ಮತ್ತೆ ಲಿಂಗಾಯತರಿಗೆ ವಿಪಕ್ಷ ಸ್ಥಾನ ನೀಡಲು ಮುಂದಾಗಿದೆ ಎನ್ನಲಾಗಿದೆ. ಉಪನಾಯಕ ಸ್ಥಾನವನ್ನು ಒಕ್ಕಲಿಗರಿಗೆ ಹಾಗೂ ಸಚೇತಕ ಸ್ಥಾನವನ್ನು ಒಬಿಸಿಗೆ ನೀಡಲು ಬಿಜೆಪಿ ಮುಖಂಡರು ಒಲವು ತೋರಿದ್ದಾರೆ.

ಆದರೂ, ಸಿಎಂ ಸಿದ್ದರಾಮಯ್ಯ ಅವರನ್ನು ಎದುರಿಸುವ ಹಾಗೂ ಅವರಷ್ಟೇ ಅನುಭವವುಳ್ಳವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕೂರಬೇಕಾಗಿದೆ. ಕಾಂಗ್ರೆಸ್ಸ್ ನಲ್ಲಿರುವ ಅನುಭವಿಗಳ ದಂಡು ಎದುರಿಸಲು ಬಿಜೆಪಿಯ ಸಂಘಟಿತ ಹೋರಾಟ ಅಗತ್ಯ. ತಮ್ಮ ಜತೆ ಪ್ರಾದೇಶಿಕ ಪಕ್ಷ ಜೆಡಿಎಸ್ ನಾಯಕರನ್ನು ಒಟ್ಟಿಗೆ ಕರೆದೊಯ್ಯಬಲ್ಲ ಮುಖಂಡರ ಅಗತ್ಯ ಎದುರಾಗಿದೆ. 

More News