ಹುಬ್ಬಳ್ಳಿ (ಕ.ವಾ) ಜೂ.19: ರಾಜ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅವರು ಇಂದು ಬೆಳಿಗ್ಗೆ ಉತ್ತರ ಕರ್ನಾಟಕದ ಪ್ರಮುಖ ಆರೋಗ್ಯ ಸಂಸ್ಥೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ಆರೋಗ್ಯ ಸೇವೆ, ಸೌಕರ್ಯಗಳನ್ನು ಪರಿಶೀಲಿಸಿದರು.
ಸಚಿವರು ಹುಬ್ಬಳ್ಳಿ ಐಬಿಯಿಂದ ಬೆಳಿಗ್ಗೆ 9:30 ಗಂಟೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ , ಪಾಲಿಕೆ ಆಯುಕ್ತ ಡಾ.ಗೋಪಾಲ ಕೃಷ್ಣ ಬಿ., ಅವರೊಂದಿಗೆ ನೇರವಾಗಿ ಕಿಮ್ಸ್ ಆಸ್ಪತ್ರೆಗೆ ತೆರಳಿದರು.
ಆಸ್ಪತ್ರೆಯ ಸಾಮಾನ್ಯ ವಾರ್ಡ್, ಮಕ್ಕಳ ವಾರ್ಡ್, ಹೆರಿಗೆ ಮತ್ತು ಬಾಣಂತಿಯರ ವಾರ್ಡ್, ಶಸ್ತ್ರಚಿಕಿತ್ಸೆ ವಾರ್ಡ್, ಔಷಧ ವಿತರಣಾ ಕೌಂಟರ್ ಹಾಗೂ ಆಡಳಿತಾತ್ಮಕ ಕಟ್ಟಡಗಳಿಗೆ ಭೇಟಿ ನೀಡಿದರು.

ಸವಣೂರು, ಕೊಪ್ಪಳ, ನವಲಗುಂದ, ರಾಣಿಬೆನ್ನೂರು, ವಿಜಯಪುರ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಚಿಕಿತ್ಸೆಗೆ ಆಗಮಿಸಿದ್ದ ರೋಗಿಗಳನ್ನು ಮತ್ತು ಅವರ ಪಾಲಕ, ಪೋಷಕರನ್ನು ಸಚಿವರು ಮಾತನಾಡಿಸಿ, ಆರೋಗ್ಯ ವಿಚಾರಿಸಿದರು. ಮತ್ತು ಅವರಿಂದ ಆಸ್ಪತ್ರೆ ಸೌಲಭ್ಯಗಳು, ವೈದ್ಯರ ಚಿಕಿತ್ಸೆ, ಔಷಧಿ ಹಾಗೂ ಆರೋಗ್ಯ ಸಿಬ್ಬಂದಿಗಳ ಸೇವೆ ಕುರಿತು ಸಚಿವರು ಮಾಹಿತಿ ಪಡೆದುಕೊಂಡರು.
ವಿಶೇಷ ವಾರ್ಡ್ ಹತ್ತಿರ ಅನೈರ್ಮಲ್ಯ ಕಂಡ ಸಚಿವರು, ಗುತ್ತಿಗೆದಾರನಿಗೆ ಎಚ್ಚರಿಕೆ ನೀಡುವಂತೆ ಕಿಮ್ಸ್ ನಿರ್ದೇಶಕರಿಗೆ ಸೂಚಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಅವರು, ಕಿಮ್ಸ್ ಆಸ್ಪತ್ರೆ ಸುಧಾರಣೆಗೆ ಅಗತ್ಯವಿರುವ ಅನುದಾನ, ಕಿಮ್ಸ್ ಸಿಬ್ಬಂದಿಗಳ ಸಮಸ್ಯೆ ಮತ್ತು ವಿವಿಧ ಜಿಲ್ಲೆಗಳಿಂದ ಬರುವ ರೋಗಿಗಳಿಗೆ ತಕ್ಷಣ ಸ್ಪಂದಿಸುವ ಕುರಿತು ಸಚಿವರಿಗೆ ವಿವರಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕಿಮ್ನ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಆಸ್ಪತ್ರೆ ಅಧೀಕ್ಷಕ ಡಾ. ಅರುಣಕುಮಾರ ಸಿ., ಸಮುದಾಯ ಆರೋಗ್ಯ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ಲಕ್ಷ್ಮಿಕಾಂತ ಲೋಕರೆ ಅವರು ಕಿಮ್ಸ್ ಆಸ್ಪತ್ರೆಯ ಸೌಲಭ್ಯ, ಸುಧಾರಣೆ, ಹೊಸ ಕಟ್ಟಡ, ಅಗತ್ಯವಾದ ಅನುದಾನ ಮತ್ತು ರೋಗಿಗಳ ಚಿಕಿತ್ಸೆ ಕುರಿತು ಸಚಿವರಿಗೆ ವಿವರವಾಗಿ ತಿಳಿಸಿದರು.

ನಂತರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಿಮ್ಸ್ ಆಸ್ಪತ್ರೆಯ ಇಂದಿನ ಭೇಟಿ ನನಗೆ ಖುಷಿ ತಂದಿದೆ. ಹಿಂದಿನ ದಿನಗಳಲ್ಲಿದ್ದ ಆಸ್ಪತ್ರೆ ವ್ಯವಸ್ಥೆ ಸುಧಾರಣೆ ಆಗಿದೆ. ಸ್ವಚ್ಚತೆ ಕಾಪಾಡಲಾಗಿದೆ. ಅದಕ್ಕೂ ಮೀಗಿಲಾಗಿ ಆಸ್ಪತ್ರೆಗೆ ದಾಖಲಾಗಿರುವ ಬಹಳಷ್ಟು ರೋಗಿಗಳನ್ನು ನಾನು ಸ್ವತಃ ಮಾತಾಡಿಸಿ, ಅವರಿಗೆ ನೀಡುತ್ತಿರುವ ಚಿಕಿತ್ಸೆ, ಸೌಲಭ್ಯ, ವೈದ್ಯರ ಸ್ಪಂದನೆ ಬಗ್ಗೆ ಕೇಳಿದಾಗ ಎಲ್ಲರೂ ಸಂತೃಪ್ತಿ, ಸಂತೋಷ ವ್ಯಕ್ತಪಡಿಸಿದರು. ಯಾರೊಬ್ಬರೂ ಕಿಮ್ಸ್ ಕಾರ್ಯದ ಬಗ್ಗೆ ದೂರಲಿಲ್ಲ.
ಇದನ್ನೆಲ್ಲ ನೋಡಿದ ನನಗೆ ತುಂಬಾ ಸಂತೋಷವಾಯಿತು. ಇದಕ್ಕಾಗಿ ಕಿಮ್ಸ್ ನಿರ್ದೇಶಕರು ಸೇರಿ ಎಲ್ಲ ಅಧಿಕಾರಿಗಳನ್ನು, ವೈದ್ಯರನ್ನು, ಆರೋಗ್ಯ ಕಾರ್ಯಕರ್ತರನ್ನು ಮತ್ತು ಕಿಮ್ಸ್ ಆಸ್ಪತ್ರೆಯ ಪ್ರತಿ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಸಚಿವರು ತಿಳಿಸಿದರು.
ನಮ್ಮ ಅಧಿಕಾರ ಅವಧಿಯಲ್ಲಿ ಕಿಮ್ಸ್ ಆಸ್ಪತ್ರೆಯ ಅಭಿವೃದ್ಧಿಗೆ ಇನ್ನು ಹೆಚ್ಚಿನ ಅನುದಾನ ನೀಡಲಾಗುತ್ತದೆ. ಇಲ್ಲಿನ ಸಿಬ್ಬಂದಿಗಳ ನೇಮಕಾತಿ, ಬಡ್ತಿ ಮತ್ತು ಆಸ್ಪತ್ರೆಯ ಅಗತ್ಯ ಕಾಮಗಾರಿಗಳ ಕುರಿತು ವಿಶೇಷ ಸಭೆ ಜರುಗಿಸಿ, ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವರು ತಿಳಿಸಿದರು.

ಸರಕಾರಿ ಆಸ್ಪತ್ರೆ ಎಂದರೆ ದೂರ ಸರಿಯುವ ಜನರಿಗೂ ಆಸೆ ಹುಟ್ಟುವಂತೆ ಕಿಮ್ಸ್ ಕೆಲಸ ಮಾಡುತ್ತಿದೆ. ಬಡವರ ಪಾಲಿಗೆ ಸಂಜೀವಿನಿ ಆಗಿದೆ. ಸರಕಾರ ಅಗತ್ಯ ಕ್ರಮಕೈಗೊಂಡು ಕಿಮ್ಸ್ ಆಸ್ಪತ್ರೆಯನ್ನು ಇನ್ನೂ ಉನ್ನತ ದರ್ಜೆಗೆ ಏರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಮತ್ತು ಕಿಮ್ಸ್ ಅಭಿವೃದ್ಧಿಗಾಗಿ ಆರೋಗ್ಯ ಸಚಿವರ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಜರುಗಿಸಿ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯನ್ನು ರಾಜ್ಯದಲ್ಲಿ ಮಾದರಿಯಾಗಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಸಚಿವ ಸಂತೋಷ ಲಾಡ ಹೇಳಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ನಗರ ತಹಸಿಲ್ದಾರ ಕಲ್ಲನಗೌಡ ಸಿ. ಪಾಟೀಲ, ಪಾಲಿಕೆ ಸದಸ್ಯರು, ವಿವಿಧ ಜನಪ್ರತಿನಿಧಿಗಳು, ಪ್ರಮುಖರು ಮತ್ತು ಕಿಮ್ಸ್ ಆಸ್ಪತ್ರೆಯ ವೈಧ್ಯರು,ಅಧಿಕಾರಿಗಳು ಉಪಸ್ಥಿತರಿದ್ದರು.




