ತಮ್ಮ ವಿರುದ್ಧದ ಆರೋಪಗಳ ವಿರುದ್ಧ ಕಾನೂನು ಸಮರ ಸಾರಿದ ಸ್ಯಾಂಡಲ್ ವುಡ್ ನಟ ಸುದೀಪ್, ಆರೋಪ ಸಾಬೀತು ಮಾಡಿ, ಇಲ್ಲ ದಂಡ ಕಟ್ಟಿ ಎಂದು ನಿರ್ಮಾಪಕರಾದ ಎಂಎನ್ ಕುಮಾರ್, ಸುರೇಶ್ ವಿರುದ್ಧ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಇತ್ತೀಚೆಗೆ ಅಷ್ಟೇ ನಟ ಸುದೀಪ್ ನಮ್ಮಿಂದ ಹಣ ಪಡೆದು ಸತಾಯಿಸುತ್ತಿದ್ದಾರೆ. ನಮ್ಮಿಂದ ಹಣ ಪಡೆದ ಬಳಿಕ ನಮಗೆ ಸಿನಿಮಾಗಾಗಿ ಡೇಟ್ ಕೊಡ್ತಿಲ್ಲ. ಕೇಳಲು ಹೋದಾಗಲೆಲ್ಲಾ ಡೇಟ್ ಸಿಗ್ತಿಲ್ಲ ಎಂದು ಯಾಮಾರಿಸ್ತಿದ್ದಾರೆ ಎಂದು ನಿರ್ಮಾಪಕ ರಾದ ಎಂಎನ್ ಕುಮಾರ್, ಸುರೇಶ್ ದೂರಿದ್ದರು. ನಿರ್ಮಾಪಕರ ಆರೋಪದ ವಿರುದ್ಧ ಬೇಸರಗೊಂಡು ಟ್ವೀಟ್ ಮಾಡಿದ್ದ ನಟ ಸುದೀಪ್ ನನ್ನ ಒಳ್ಳೆತನವನ್ನ ಯಾರ ಲಾಭಕ್ಕಾಗಿ ಬಳಸಿಕೊಂಡ್ರೂ ಸಹಿಸೊಲ್ಲ ಎಂದಿದ್ದರು. ಆದರೂ ಕೆಲವೆಡೆ ಎಂಎನ್ ಕುಮಾರ್ ವಾಗ್ದಾಳಿ ನಡೆಸುತ್ತಲೇ ಬಂದ ಕಾರಣ, ಕಿಚ್ಚ ಕಾನೂನು ಅಸ್ತ್ರ ಪ್ರಯೋಗಿಸಿದ್ದಾರೆ.

ನಿರ್ಮಾಪಕರಿಗೆ ನೊಟೀಸ್ ಕಳುಹಿಸಿದ ಕಿಚ್ಚ, “ನೀವು ನನ್ನ ತಾಳ್ಮೆಯನ್ನ ಪರೀಕ್ಷಿಸಿದ್ದೀರಿ. ಸುಳ್ಳಿನ ಕಂತೆ ಕಟ್ಟಿ ತೇಜೋವಧೆ ಮಾಡಿದ್ದೀರಿ. ನಾನು ನ್ಯಾಯಾಲಯ ಮತ್ತು ಸಂವಿಧಾನ ನಂಬಿರುವವನು. ನಾನು ನನ್ನದೇ ರೀತಿಯಲ್ಲಿ ಉತ್ತರ ಕೊಡಲು ಕಾಯುತ್ತಿದ್ದೆ. ನೀವು ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತು ಪಡಿಸಿ. ಇಲ್ಲವಾದಲ್ಲಿ 10 ಕೋಟಿ ಮಾನನಷ್ಟದ ದಂಡ ಕಟ್ಟಿಕೊಡಿ” ಎಂದು ಉಲ್ಲೇಖಿಸಿದ್ದಾರೆ.

ಘಟನೆ ಕುರಿತು ನೋಟಿಸ್ ಕಳುಹಿಸಿರುವ
ಸುದೀಪ್ ಪರ ವಕೀಲರು, “ಸುದೀಪ್ ಅವರು ಚಿತ್ರರಂಗದಲ್ಲಿ 20 ವರ್ಷದಿಂದ ನಟಿಸುತ್ತಿರುವ ಪ್ರತಿಭಾನ್ವಿತ ನಟರಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಸಮಾಜ ಸೇವೆಯ ಮೂಲಕವೂ ಜನರಿಗೆ ಮಾದರಿಯಾಗಿದ್ದಾರೆ. ಅವರ ವಿರುದ್ಧ ನೀವು ಮಾಡಿರುವ ಆರೋಪಗಳು ಸುಳ್ಳಾಗಿದ್ದು, ಮಾನಹಾನಿ ಉಂಟು ಮಾಡಿವೆ. ಹಾಗಾಗಿ ನೀವು ಕ್ಷಮೆಯಾಚಿಸಬೇಕು ಹಾಗೂ ಪರಿಹಾರ ಕೊಡಬೇಕು” ಎಂದು ಲೀಗಲ್ ನೋಟಿಸ್ ಕಳುಹಿಸಿದ್ದು, ತಮ್ಮ ವಿರುದ್ಧ ಮಾಡಿದ ಆರೋಪ ದ ವಿರುದ್ಧ ಮಾಧ್ಯಮಗಳಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಮಾನಹಾನಿ ಮಾಡಿದ ಕಾರಣ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಜೊತೆಗೆ ನೋಟಿಸ್ ಕಳುಹಿಸಲು ತಗುಲಿದ 50 ಸಾವಿರ ರೂಪಾಯಿ ವೆಚ್ಚವನ್ನೂ ನೀವೇ ಭರಿಸಬೇಕು. ಇಲ್ಲದಿದ್ರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟೀಸ್ ನಲ್ಲಿ ಎಚ್ಚರಿಕೆ ರವಾನಿಸಿದ್ದಾರೆ.




