MANIPUR VICTIMS IN BANGALURU: ಮಣಿಪುರ ಸಂತ್ರಸ್ತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಸಚಿವ ಜಮೀರ್ ಅಹಮದ್ ಖಾನ್

ಬೆಂಗಳೂರು: ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗೆ ತುತ್ತಾಗಿ ಆಶ್ರಯ ಅರಸಿ ಬಂದ ವಿದ್ಯಾರ್ಥಿಗಳ ಜತೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

ಚಾಮರಾಜಪೇಟೆಯ ಸೈಂಟ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವ 29 ವಿದ್ಯಾರ್ಥಿನಿಯರ ಸಂಪೂರ್ಣ ಶಿಕ್ಷಣ ಹಾಗೂ ಹಾರೈಕೆ ವೆಚ್ಚ ಭರಿಸುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿ ಎರಡು ಲಕ್ಷ ರೂಪಾಯಿಯನ್ನು ಜಮೀರ್ ಸಂಸ್ಥೆಗೆ ನೀಡಿದರು.

ಮಣಿಪುರ ವಿದ್ಯಾರ್ಥಿಗಳ ಜತೆ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಸಚಿವರು, ಇಲ್ಲಿ ಸುರಕ್ಷಿತವಾಗಿರಿ, ನಿಮಗೆ ಏನೇ ಬೇಕಾದರೂ ನಾನೇ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಮಣಿಪುರ ವಿದ್ಯಾರ್ಥಿಗಳ ಜತೆಯೇ ಉಪಹಾರ ಸೇವಿಸಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 250 ಮಕ್ಕಳಿಗೂ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ರಾತ್ರಿ ಊಟದ ವ್ಯವಸ್ಥೆ ಮಾಡಿದರು.

ಒಟ್ಟು ಮಣಿಪುರದಿಂದ 200 ವಿದ್ಯಾರ್ಥಿಗಳು ಆಶ್ರಯ ಪಡೆಯಲು ಬಂದಿದ್ದು 29 ವಿದ್ಯಾರ್ಥಿಗಳು ಇದೇ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದು, ಉಳಿದವರಿಗೆ ಇದೇ ಸಂಸ್ಥೆಯ ಬೇರೆ ಕಡೆ ಆಶ್ರಯ ನೀಡಲಾಗಿದೆ. ಈ ವಿದ್ಯಾರ್ಥಿಗಳು ಏಳು ವರ್ಷ ಇಲ್ಲೇ ವಿದ್ಯಾಭ್ಯಾಸ ಪಡೆಯಲಿದ್ದಾರೆ. ಸೆಂಟ್ ತೆರೇಸಾ ವಿದ್ಯಾ ಸಂಸ್ಥೆಯ ಶಿಕ್ಷಕ ವರ್ಗ ಉಪಸ್ಥಿತರಿದ್ದರು.

More News