ಬೆಂಗಳೂರು: ಚಿತ್ರ ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಹೇಳಿಕೆ ನೀಡಿದರು.
ಬೆಂಗಳೂರು ನಗರದ 13ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾದ ನಟ ಸುದೀಪ್ ನ್ಯಾಯಾಧೀಶರಾದ ವೆಂಕಣ್ಣ ಬಸಪ್ಪ ಹೊಸಮನಿ ಅವರ ಮುಂದೆ ಹೇಳಿಕೆ ನೀಡಿದರು. ನಂತರ ನ್ಯಾಯಾಧೀಶರು ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದರು.
ಚಿತ್ರ ನಿರ್ಮಾಪಕ ಎಂ ಎನ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ ಸುದೀಪ್, ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವನ್ನು ಪಡೆದಿದ್ದಾರೆ ಎನ್ನುವುದು ಸುಳ್ಳು ಎಂದು ಸುದೀಪ್ ನ್ಯಾಯಾಲಯಕ್ಕೆ ಹೇಳಿಕೆ ನೀಡಿದರು.

ಎಂ ಎನ್ ಕುಮಾರ್ ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಸಂಪಾದಿಸಿದ್ದ ನನ್ನ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಹೇಳಿಕೆ ನೀಡಿದರು. ಎಂ ಎನ್ ಸುರೇಶ್ ಅವರು ಕುಮಾರ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಹಾಗೆನೇ ಸುದೀಪ್ ತಮ್ಮ ಹೇಳಿಕಗಳಿಗೆ ಪೂರಕವಾಗಿ ಫೋಟೋಗಳನ್ನು ನ್ಯಾಯಾಲಯಕ್ಕೆ ನೀಡಿದರು. ಸುದೀಪ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ಒಂದು ವೇಳೆ ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಅದನ್ನು ತಾವು ಮನ್ನಿಸುತ್ತೀರಾ, ರಾಜಿ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ ಎಂಬ ನ್ಯಾಯಾಧೀಶರ ಪ್ರಶ್ನೆಗೆ, ಒಬ್ಬ ಸುದೀಪ್ ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದು ಎಂದ ಅವರು ತಿಳಿದಂತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
#ACTORSUDEEP #KICHCHASUDEEP #MNKUMAR #FILMPRODUCER #COURT #DEFAMATIONCASE




