ಹಾವೇರಿ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್ ಗೆ ಎಂಪಿ ಟಿಕೆಟ್ ಕೊಡಸಬೇಕೆಂಬ ಉದ್ದೇಶದಿಂದ ಹಾವೇರಿ ಜಿಲ್ಲೆಯ ವಾತಾವರಣ ಕೆಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪನವರ ನಡೆಗೆ ಕೌರವ ಸಿಟ್ಟಿಗೆದ್ದರು. ಚುನಾವಣೆಯಲ್ಲಿ ತಮಗೆ ವಿರೋಧ ಮಾಡಿದವರನ್ನ ಕರೆದುಕೊಂಡು ಕ್ಷೇತ್ರದಲ್ಲಿ ಓಡಾಡುತ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಈಶ್ವರಪ್ಪನವರು ವಲಸೆ ಬಂದ ನಮ್ಮವರ ವಿರುದ್ಧ ಮಾತನಾಡಿದ್ದರು, ಈ ಸಂಬಂಧ ಅವರಿಗೆ ಕರೆ ಮಾಡಿ ಮಾತನಾಡಿದಾಗ ನಾನು ಹೇಳಿಲ್ಲಾ, ಕ್ಷಮಿಸಿ ಅಂತಾರೆ, ಹಿರಿಯ ನಾಯಕರಾಗಿ ಈ ಥರ ಮಕ್ಕಳಾಟದವರ ಥರ ಮಾತಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ವರಿಷ್ಠರು ವಿನ್ನಿಂಗ್ ಅಭ್ಯರ್ಥಿ ಕುರಿತು ಸರ್ವೇ ಮಾಡುತ್ತಿದ್ದಾರೆ, ಯಾರಿಗೆ ಟಿಕೇಟ್ ನೀಡಬೇಕು ಎನ್ನುವುದರ ಕುರಿತು ಅಳೆದು ತೂಗಿ, ಟಿಕೇಟ್ ನೀಡಲಿದ್ದಾರೆ, ಏನೂ ಇಲ್ಲದೆ ಸುಮ್ಮನೆ ಬಂದು ವಾತಾವರಣವನ್ನು ಈಶ್ವರಪ್ಪ ಅವರು ಕೆಡಿಸುತ್ತಾ ಇದ್ದಾರೆ ಎಂದರು.
ಯಾರಾದರೂ ಈಶ್ವರಪ್ಪ ಅವರ ಪುತ್ರನಿಗೆ ಟಿಕೆಟ್ ಬಗ್ಗೆ ಭರವಸೆ ಕೊಟ್ಟಿದ್ದೀರಾ ಎಂದು ಅಧ್ಯಕ್ಷ ಕಟೀಲ್ ಅವರಿಗೂ ಕೇಳಿದಾಗ ಅವರು ಇಲ್ಲಾ ಎಂದಿದ್ದಾರೆ, ಹೀಗಿದ್ದರು ಕ್ಷೇತ್ರದಲ್ಲಿ ಮಗನಿಗಾಗಿ ಓಡಾಡೋದು ಯಾಕೆ? ಹಿರಿಯ ನಾಯಕರು ಒಡಕು ಇರುವ ಜಾಗದಲ್ಲಿ ನೀರು ಎರೆಯಬಾರದು, ಪಕ್ಷ ಹೇಳಿದಾಗ ಕ್ಷೇತ್ರಕ್ಕೆ ಹೋಗೋದು ಅರ್ಥ ಇದೆ, ಯಾರು ಹೇಳದೆ ಓಡಾಡಿದ್ರೆ ತಪ್ಪು ಅರ್ಥ ಆಗುತ್ತದೆ ಎಂದರು.
ಪ್ರಧಾನಿ ಮೋದಿಯವರ ಹೆಸರಿನ ಮೇಲೆ ಎಂಪಿ ಚುನಾವಣೆ ನಡಿಯೋದು, ಇಲ್ಲಿ ಯಾರ ಮೇಲೂ ನಡೆಯೋದಿಲ್ಲ ಎನ್ನುವ ಮೂಲಕ ಟಾಂಗ್ ನೀಡಿದರು.

ಪ್ರಕಾಶ್ ರೈ ಅವರದ್ದು ಮೂರ್ಖತನದ ಹೇಳಿಕೆ
ಚಂದ್ರಯಾನದ ಬಗ್ಗೆ ನಟ ಪ್ರಕಾಶ್ ರೈ ನೀಡಿರುವ ಹೇಳಿಕೆ ಮೂರ್ಖತನದ ಹೇಳಿಕೆಯಾಗಿವೆ, ಇಡೀ ವಿಶ್ವ, ಭಾರತದ ಕಡೆ ನೋಡ್ತಾ ಇದೆ, ಇದು ಭಾರತ ದೇಶದ ದೊಡ್ಡ ಸಾಧನೆ, ನಾಳೆ ಎಲ್ಲಾ ಕಾತುರದಿಂದ ಕಾಯ್ತಾ ಇದ್ದಾರೆ, ಆ ಮನುಷ್ಯ ಎಲ್ಲೊ ಕುಳಿತು ಮಾತನಾಡೋದು ಸರಿಯಲ್ಲ ಎಂದರು.
ಆಪರೇಷನ್ ಹಸ್ತ
ಆಪರೇಷನ್ ಹಸ್ತ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ಸಿನಲ್ಲಿ 136 ಶಾಸಕರಿದ್ದರು ಕೂಡಾ ಅವರಿಗೆ ಅಭದ್ರತೆ ಕಾಡುತ್ತಿದೆ, ಆದ್ದರಿಂದ ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಮಾಜಿ ಸಚಿವ ಎಸ್ ಟಿ ಸೋಮಶೇಖರ ಮನಸ್ಸಿಗೆ ಬೇಜಾರ್ ಆಗಿದೆ, ಅಲ್ಲಿಗೆ ಹೋದರೂ ಇವರೇನೂ ಮಂತ್ರಿಯಾಗೋದಿಲ್ಲ, ಅನುದಾನಕ್ಕೆ ಹೋದಾಗ ಭೇಟಿಯಾಗಬೇಕು ಹೀಗಾಗಿ ಹೋಗಿರುತ್ತಾರೆ ಎಂದರು.
ಯಾರು ನಮ್ಮ ಪಕ್ಷ ಬಿಟ್ಟು ಹೋಗೋಲ್ಲಾ, ಕಾಂಗ್ರೇಸ್ ನಲ್ಲಿ ಮೂರು ಗುಂಪುಗಳಿವೆ, ಪರಮೇಶ್ವರರದ್ದು, ಸಿದ್ಧರಾಮಯ್ಯನವರದ್ದು, ಡಿಕೆ ಶಿವಕುಮಾರ್ ರದ್ದು ಅಂತಾ ಗುಂಪು ಇವೆ ಎಂದು ಟಿಕೀಸಿದ ಬಿಸಿ ಪಾಟೀಲ್, ಚುನಾವಣೆ ಬರ್ತಾ ಇದೆ,ಈ ಗಮನ ಬೇರೆಡೆ ಸೆಳೆಯಲು ಈ ಥರ ಮಾಡ್ತಾ ಇದ್ದಾರೆ ಎಂದರು.




