Janata Darshan Response to Public Sufferings: ಸಾರ್ವಜನಿಕರ ನೋವುಗಳಿಗೆ ಜನತಾ ದರ್ಶನದಿಂದ ಸ್ಪಂದನೆ: ಸಚಿವ ಸಂತೋಷ್ ಲಾಡ್

ಧಾರವಾಡ: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸಲು ಮತ್ತು ಅವುಗಳಿಗೆ ಸರ್ಕಾರದ ಸ್ಪಂದನೆ ದೊರಕಲು ‘ಜನತಾ ದರ್ಶನ’ ಕಾರ್ಯಕ್ರಮ ಸಹಾಯಕವಾಗಲಿದೆ. ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ರವರು ಹೇಳಿದ್ದಾರೆ.

ಧಾರವಾಡ ಜಿಲ್ಲಾಡಳಿತ ವತಿಯಿಂದ ಇಂದು ಸೃಜನಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರದ ಬಹುನಿರೀಕ್ಷಿತ ‘ಜನತಾ ದರ್ಶನ’ ಕಾರ್ಯಕರ್ಮಕ್ಕೆ ಚಾಲನೆ ನೀಡಿ ಸಚಿವರಾದ ಸಂತೋಷ್ ಲಾಡ್ ರವರು ಮಾತನಾಡಿದರು.

ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಜರುಗುವ ‘ಜನತಾ ದರ್ಶನ’ ಕಾರ್ಯಕ್ರಮವು, ಜಿಲ್ಲೆಯ ಸಾರ್ವಜನಿಕರು ಅಹವಾಲು ಸಲ್ಲಿಸಲು ವೇದಿಕೆನ್ನು ಕಲ್ಪಿಸಲಿದೆ. ಇದರಿಂದಾಗಿ ಸರ್ಕಾರದ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕ ವಲಯದ ಮಧ್ಯೆ ಸಂಪರ್ಕ ಬೆಳೆದು ಉತ್ತಮ ಸಂವಹನಕ್ಕೆ ಅವಕಾಶ ಸಿಕ್ಕಂತಾಗುತ್ತದೆ. ಇದೊಂದು ಜನಸ್ನೇಹಿ ಕಾರ್ಯಕ್ರಮ ಎಂದು ಸಚಿವ ಸಂತೋಷ್ ಲಾಡ್ ಬಣ್ಣಿಸಿದರು.

ಸಚಿವರು, ಶಾಸಕರು , ಸ್ಥಳೀಯ ಮಟ್ಟದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಒಂದೇ ಕಡೆ ಲಭ್ಯವಾಗುವುದರಿಂದ ಸಾರ್ವಜನಿಕರ ಕೆಲ ಸಮಸ್ಯೆಗಳು ಸ್ಥಳದಲ್ಲಿಯೇ ಇತ್ಯರ್ಥವಾಗಲಿವೆ. ಹಾಗೂ ನೆನೆಗುದಿಗೆ ಬಿದ್ದಿರುವ ಸಮಸ್ಯಗಳು ಸರ್ಕಾರದ ಗಮನಕ್ಕೂ ಬರಲಿವೆ. ಇದರಿಂದಾಗಿ ಸಾರ್ವಜನಿಕರ ಅಹವಾಲುಗಳಿಗೆ ಮನ್ನಣೆ ದೊರಕಲಿದೆ ಎಂದು ಸಚಿವ ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.

ಜನತಾ ದರ್ಶನ ಚಾಲನಾ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಎನ್.ಹೆಚ್.ಕೋನರೆಡ್ಡಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ-ತಾಲ್ಲೂಕು ಮಟ್ಟದ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

More News