ಬೆಂಗಳೂರು : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಗುತ್ತಿಗೆದಾರರ ಹಣದಲ್ಲಿ ಕನಿಷ್ಠ ಶೇಕಡಾ 50ರಷ್ಟು ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಇದುವರೆಗೂ 20 ಸಾವಿರ ಕೋಟಿ ರೂಪಾಯಿ ಬಾಕಿ ಇದೆ. ಮುಖ್ಯಮಂತ್ರಿ ಅವರನ್ನು ಬಾಕಿ ಬಿಲ್ ಪಾವತಿಗಾಗಿ ನಾಲ್ಕೈದು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ, ಆದರೂ ಬಾಕಿ ಹಣ ಬಿಡುಗಡೆಯಾಗಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ, ಜಲಸಂಪನ್ಮೂಲ ಸೇರಿದಂತೆ ಹಲವು ಇಲಾಖೆಗಳಿಂದ ಗುತ್ತಿಗೆದಾರರಿಗೆ ಬಾಕಿ ಹಣ ಬರಬೇಕಾಗಿದೆ. ಆದ್ದರಿಂದ ಸರ್ಕಾರಕ್ಕೆ 30 ದಿನಗಳ ಗಡುವು ನೀಡಲಾಗುವುದು. ಇದರೊಳಗೆ ಗುತ್ತಿಗೆದಾರರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.
ತನಿಖೆ ಹೆಸರಿನಲ್ಲಿ ಅನೇಕರ ಹಣ ತಡೆಹಿಡಿಯಲಾಗಿದೆ. ಇದರಿಂದ ಹಳೆ ಸಮಸ್ಯೆಯ ಜತೆ ಹೊಸ ಸಮಸ್ಯೆಗಳು ಸೇರಿಕೊಂಡಿವೆ ಎಂದು ಆರೋಪಿಸಿದ ಅವರು, ಕೆಲವು ಇಲಾಖೆಗಳಲ್ಲಿ ಶೇಕಡಾ 7ರಷ್ಟು ಮಾತ್ರ ಹಣ ಬಿಡುಗಡೆಯಾಗಿದೆ ಎಂದರು.
ತಮಗೆ ಬೇಕಾದ ಗುತ್ತಿಗೆದಾರರಿಗೆ ಮಾತ್ರ ಹಣ ಬಿಡುಗಡೆಯಾಗುತ್ತಿದೆ ಎಂದು ಆರೋಪಿದಿ ಕೆಂಪಣ್ಣ,. ಇದನ್ನು ಪ್ರಶ್ನಿಸಿದರೆ ತಮಗೆ ತಿಳಿದಿಲ್ಲ ಎನ್ನುತ್ತಿದ್ದಾರೆ. ಈ ಸಂಬಂಧ ಸಿಎಂ ಮತ್ತು ಪ್ರಧಾನಿಯವರಿಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.
ಕೆಲ ಗುತ್ತಿಗೆದಾರರು ಶಿಫಾರಸ್ಸು ಪತ್ರ ನೀಡಿ ರಾತ್ರೋರಾತ್ರಿ ಚೆಕ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಅಂಬಿಕಾಪತಿ ಈಗ ಗುತ್ತಿಗೆ ಕೆಲಸ ಮಾಡುತ್ತಿಲ್ಲ, ಬೇರೆ ಬೇರೆ ಕೆಲಸ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.




