ಬೆಂಗಳೂರು: ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುವ ವಿರಾಟ್ ಕೊಹ್ಲಿ, ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಟಾಪ್-5 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ವಿರಾಟ್ ಕೊಹ್ಲಿ, ಟೂರ್ನಿಯಲ್ಲಿ ಆಡಿರುವ ಎಂಟು ಪಂದ್ಯಗಳಲ್ಲಿ ಎರಡು ಶತಕ ಹಾಗೂ ನಾಲ್ಕು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೇ ಟೂರ್ನಿಯಲ್ಲಿ ತಮ್ಮ ಎರಡನೇ ಶತಕ ಸಿಡಿಸಿದ ರನ್ ಮಷಿನ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 49ನೇ ಶತಕ ಬಾರಿಸಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ. ಕಿಂಗ್ ಕೊಹ್ಲಿಯ ಈ ಪ್ರದರ್ಶನ ಟೀಂ ಇಂಡಿಯಾ ವಿಶ್ವಕಪ್‌ನಲ್ಲಿ ಅಜೇಯ ಗೆಲುವಿನ ಓಟವನ್ನು ಮುಂದುವರಿಸಲು ಕಾರಣವಾಗಿದೆ.
ತಮ್ಮ ಈ ಪ್ರದರ್ಶನದಿಂದ ಕಿಂಗ್ ಕೊಹ್ಲಿ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ 5ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಕೇವಲ ವಿಶ್ವಕಪ್ ಟೂರ್ನಿಯಲ್ಲಿ ಮಾತ್ರವಲ್ಲದೆ ಪ್ರಸಕ್ತ ವರ್ಷದಲ್ಲಿ ಆಡಿರುವ ಏಕದಿನ ಪಂದ್ಯಗಳಲ್ಲಿ ಕೂಡ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇವೆಲ್ಲದರ ಪರಿಣಾಮ ಕೊಹ್ಲಿ ಅವರಿಗೆ ಐಸಿಸಿ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಬಡ್ತಿ ಪಡೆಯಲು ಪ್ರಮುಖ ಕಾರಣವಾಗಿದೆ.
ಸದ್ಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಫಾರ್ಮ್ ಹೊಂದಿರುವ ಚೇಸ್ ಮಾಸ್ಟರ್, ತಮ್ಮ 50ನೇ ಏಕದಿನ ಶತಕದ ನಿರೀಕ್ಷೆಯಲ್ಲಿದ್ದಾರೆ. ಟೀಂ ಇಂಡಿಯಾ ನವೆಂಬರ್ 12ರಂದು ಬೆಂಗಳೂರಿನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲಿದ್ದು, ಇದಾದ ಬಳಿಕ ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಹೀಗಾಗಿ ಈ ಎರಡು ಪಂದ್ಯಗಳಲ್ಲೂ ಕೂಡ ಕಿಂಗ್ ಕೊಹ್ಲಿ ತಮ್ಮ ಉತ್ತಮ ಬ್ಯಾಟಿಂಗ್ ಫಾರ್ಮ್ ಮುಂದುವರಿಸುವ ನಿರೀಕ್ಷೆ ಹೊಂದಿದ್ದಾರೆ.




