ಬೆಳಗಾವಿ: ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರಿಗೆ ಹಕ್ಕುಚ್ಯುತಿಯಾಗಿದೆ ಎಂಬ ವಿಚಾರ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಅರಣ್ಯಾಧಿಕಾರಿಗಳಿಂದ ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿ ಪ್ರಸ್ತಾವ ಮಂಡಿಸಲು ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು.
ಬೆಳ್ತಂಗಡಿ ಅರಣ್ಯಾಧಿಕಾರಿಗಳಿಂದ ಹಕ್ಕುಚ್ಯುತಿಯಾಗಿದೆ. ಅವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಅಲ್ಲದೆ
ಸದನದ ಬಾವಿಗಿಳಿದು ಧರಣಿ ನಡೆಸಿದರು.
ಅರಣ್ಯಾಧಿರಿಗಳು ಶಾಸನ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಶಾಸಕನ ರಕ್ಷಣೆ ನಿಮ್ಮ ಜವಾಬ್ದಾರಿ, ಹಕ್ಕು ಚ್ಯುತಿ ಪಡೆದುಕೊಂಡು ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಕ್ಯಾಬಿನೆಟ್ ನಲ್ಲಿ ಡಿಕೆಶಿ ವಿರುದ್ಧ ಕೇಸ್ ವಾಪಸ್ ತೆಗೆದುಕೊಳ್ಳುತ್ತೀರಿ. ಹರೀಶ್ ಪೂಂಜಾ ವಿರುದ್ಧ ಕೇಸ್ ದಾಖಲು ಮಾಡ್ತೀರಿ. ಇದು ಯಾವ ನ್ಯಾಯ ಎಂದು ಶಾಸಕ ಸುನೀಲ್ ಕುಮಾರ್ ಪ್ರಶ್ನೆ ಮಾಡಿದರು.
ಬಿಜೆಪಿ ಶಾಸಕರ ಪಟ್ಟುಗೆ ಕೊನೆಗೂ ಮಣಿದ ಸ್ಪೀಕರ್ ಖಾದರ್, ಹಕ್ಕುಚ್ಯುತಿ ಮಂಡನೆ ಪ್ರಸ್ತಾಪಕ್ಕೆ ಅವಕಾಶ ಕೊಟ್ಟರು.
ಬಳಿಕ ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಿದ ಹರೀಶ್ ಪೂಂಜಾ, ಹಕ್ಕುಚ್ಯುತಿ ಪ್ರಸ್ತಾಪದಲ್ಲಿ
ಮೂವರನ್ನು ಅಧಿಕಾರಿಗಳನ್ನು ಅಮಾನತು ಮಾಡಿ, ನಂತರ ತನಿಖೆ ನಡೆಸಲು ಆಗ್ರಹಿಸಿದರು.
ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿ,ಅದು ಮೀಸಲು ಅರಣ್ಯವಾಗಿದೆ. ಅಲ್ಲಿ ಅತಿಕ್ರಮಣ ಮಾಡಿ ಕೃಷಿ ಮಾಡಿದ ಹಿನ್ನಲೆಯಲ್ಲಿ ದೂರು ದಾಖಲು ಆಗಿದೆ. ಅತಿಕ್ರಮಣ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಲು ಮುಂದಾದಾಗ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದರು.
ನಾನು ಅಧಿಕಾರಿಗಳಿಗೆ ಫೋನ್ ಮಾಡಿದಾಗ ಅತಿಕ್ರಮಣದ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಅಧಿಕಾರಿಗಳಿಂದ ವರದಿ ತರಿಸುವ ತನಕ ಯಥಾಸ್ಥಿತಿ ಇರಲಿ ಎಂದಿದ್ದೆ.
ನನ್ನ ಕರೆಯನ್ನು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದೀರಿ. ಇದು ಸರಿಯಾದ ಕ್ರಮ ಅಲ್ಲ ಎಂದು ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಸುನೀಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ನಿಯಮ ಪ್ರಕಾರ ಹಕ್ಕುಚ್ಯುತಿಗೆ ಸಚಿವರು ಸ್ಪಷ್ಟನೆ ಕೊಡುವ ಅಗತ್ಯ ಇಲ್ಲ ಎಂದರು. ಈ ವೇಳೆ ಈಶ್ವರ್ ಖಂಡ್ರೆ ಸಹಾಯಕ್ಕೆ ಬಂದ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೃಷ್ಣ ಬೈರೇಗೌಡ ಬಂದು,
ತೀರ್ಪು ಕೊಡುವ ಮೊದಲು ಏನು ನಡೆದಿದೆ ಎಂದು ವಿಚಾರ ಸದನಕ್ಕೆ ತಿಳಿಯಲಿ. ಸಚಿವರು ಸದನಕ್ಕೆ ಮಾಹಿತಿ ಕೊಡ್ತಿದ್ದಾರೆ, ಕೊಡಲು ಅವಕಾಶ ನೀಡಿ ಎಂದು ಆಗ್ರಹಿಸಿದರು.
ಮತ್ತೆ ಬಾವಿಗಿಳಿದು ಧರಣಿ
ಸಚಿವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಸದನದ ಬಾವಿಗೆ ಇಳಿದು ಧರಣಿ ನಡೆಸಿದ ಬಿಜೆಪಿ ಸದಸ್ಯರು. ಈ ವೇಳೆ ಸ್ಪೀಕರ್ ಖಾದರ್ ಸಮಾಧಾನ ಪಡಿಸಿದ ಹಿನ್ನಲೆಯಲ್ಲಿ ಧರಣಿ ಹಿಂಪಡೆದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾದ ಏನು?
ಮಾನವ ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ. ನಗರಕ್ಕೆ ಕಾಡು ಪ್ರಾಣಿಗಳು ಬರ್ತಿವೆ. ಇದಕ್ಕೆ ಯಾರು ಹೊಣೆ. ಅರಣ್ಯ ಅತಿಕ್ರಮಣ ಆದರೆ ಈ ಸಮಸ್ಯೆ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅತಿಕ್ರಮಣ ಸಮರ್ಥನೆ ಮಾಡಿದರೆ ಅರಣ್ಯ ನಾಶವಾಗುತ್ತದೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾದ ಏನು?
ಅರಣ್ಯ ರಕ್ಷಣೆ ಮಾಡುವುದರ ಪರವಾಗಿ ನಾವೂ ಇದ್ದೇವೆ. ಮಾನವ ಕಾಡು ಪ್ರಾಣಿ ಸಂಘರ್ಷ ಸಾಮಾನ್ಯವಾಗಿದೆ. ಅರಣ್ಯ ಒತ್ತುವರಿ ಜಮೀನು ರೈತರಿಗೆ ಕೊಡಬೇಕು ಎಂದು ಸಾಕಷ್ಟು ಹೋರಾಟ ನಡೆದಿದೆ. ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಆಗಿದೆ ಎಂದು ಆರೋಪ ಬಂದಿತ್ತು. ನಾವು ಕೂಡಲೇ ಹಕ್ಕು ಬಾಧ್ಯತಾ ಸಮಿತಿಗೆ ನೀಡಿದ್ದೇವೆ. ಅಧಿಕಾರಿಗಳನ್ನು ಕೇಳುವವರು ಹೇಳುವವರು ಯಾರು ಇಲ್ಲ. ಶಾಸಕರ ಮೇಲೆ ಎಫ್ ಐ ಆರ್ ಹಾಕ್ತಾರೆ ಎಂದರೆ ಏನು ಅರ್ಥ ಬರುತ್ತೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಹಾಗೂ ಕೇಸ್ ವಾಪಸ್ ಪಡೆಯಿರಿ.
ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿಗೆ ನೀಡಿದ ಸ್ಪೀಕರ್
ಶಾಸಕರ ಬೇಡಿಕೆ ಹಿನ್ನಲೆಯಲ್ಲಿ ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿಗೆ ಸ್ಪೀಕರ್ ಯು.ಟಿ ಖಾದರ್ ನೀಡಿದರು. ಹೆಚ್ಚಿನ ತನಿಖೆಗೆ ನಡೆಸಿ ವರದಿ ಕೊಡುವಂತೆ ಸೂಚಿಸಿದರು.