ಬೆಳಗಾವಿ : ಯಡಿಯೂರಪ್ಪ, ವಿಜಯೇಂದ್ರ, ಯತ್ನಾಳ್ ಯಾರೇ ಭ್ರಷ್ಟಾಚಾರ ಮಾಡಿದ್ರೂ ತಪ್ಪು ತಪ್ಪೇ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಸಂಬಂಧಿಕರ ಮೇಲೆ ಲೋಕಾ ದಾಳಿ ವಿಚಾರವಾಗಿ ಈ ರೀತಿ ಹೇಳಿದರು. ಯಾರೇ ಭ್ರಷ್ಟಾಚಾರ ಮಾಡಿದ್ರೂ ಭ್ರಷ್ಟಾಚಾರವೇ, ವಿಜಯೇಂದ್ರ ಹೆಸರು ನನ್ನ ಬಾಯಲ್ಲಿ ಯಾಕೆ ಹೇಳಿಸ್ತೀರಿ ಎಂದು ಮಾಧ್ಯಮದವರ ಮೇಲೆ ಕಿಡಿಕಾರಿದರು.
ಭ್ರಷ್ಟಾಚಾರವನ್ನು ಯಾವ ಪಕ್ಷದವರು ಮಾಡಿದರೂ ಕ್ರಮ ಆಗಬೇಕು ಎಂದು ಆಗ್ರಹಿಸಿದ ಅವರು, ಭ್ರಷ್ಟಾಚಾರ ಮಾಡಿದವರನ್ನೇ ನಾಯಕರನ್ನಾಗಿ ಮಾಡಿದರೆ ಪ್ರಾಮಾಣಿಕರು ಹೇಗೆ ಇರಲು ಸಾಧ್ಯ ಎಂದು ಪ್ರಶ್ನಿಸಿದರು.
ಉಮೇಶ್ ಕಂಡೆಕ್ಟರ್ ಯಾರು ಅಂತ ನಮಗೆ ಗೊತ್ತಿಲ್ವಾ? ಅವರ ಮನೆಯಲ್ಲಿ ಎರಡು ನೋಟ್ ಕೌಂಟಿಂಗ್ ಯಂತ್ರ ಸಿಕ್ಕಿದ್ದು ಗೊತ್ತಿಲ್ವಾ? ಅವನ ಬಳಿ ಸಾವಿರಾರು ಕೋಟಿ ಹೇಗೆ ಬಂತು ಎಂದು ಪ್ರಶ್ನಿಸಿದ ಅವರು, ಎರಡು ನೋಟು ಎಣಿಕೆ ಯಂತ್ರ ಏಕಿತ್ತು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅಥವಾ ವಿಜಯೇಂದ್ರ ಎಂದು ಕೇಳಬೇಡಿ, ಭ್ರಷ್ಟರು ಭ್ರಷ್ಟರೇ, ನಾನು ಭ್ರಷ್ಟಾಚಾರ ಮಾಡಿದರೆ ಭ್ರಷ್ಟನೇ, ಸನ್ಮಾನ್ಯ ಡಿಕೆ ಶಿವಕುಮಾರ್ ಭ್ರಷ್ಟ ಇದ್ದರೂ ಭ್ರಷ್ಟರೇ, ಯಾರು ಕರ್ನಾಟಕವನ್ನು ಲೂಟಿ ಹೊಡೆದಿದ್ದಾರೆ, ಕರ್ನಾಟಕವನ್ನು ಲೂಟಿ ಮಾಡಿ ಸಿಂಗಾಪುರ ಮಾರಿಶಸ್ ನಲ್ಲಿ ಹೂಡಿಕೆ ಮಾಡಿದ್ದಾರೆ ಅದರ ಬಗ್ಗೆ ತನಿಖೆ ಆಗಬೇಕು ಹಾಗೂ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.
ಅಲ್ಪಸಂಖ್ಯಾತರಿಗೆ ಅನುದಾನ ಬಿಡುಗಡೆ ಮಾಡುವ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನದವರ ಸರ್ಕಾರ ಬಂದಂತಾಗಿದೆ, ಇಂತಹ ಸರ್ಕಾರ, ಇದೇ ಉದ್ಧಟತನ ಮುಂದುವರಿಸಿದರೆ ಅತೀ ಹೆಚ್ಚು ಮತಗಳಿಂದ ಬಿಜೆಪಿ ಗೆಲ್ಲಲಿದೆ ಎಂದರು.
ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಮಾತನಾಡಿದ ಅವರು, ಇಷ್ಟೆಲ್ಲಾ ದಾಖಲೆ ಇರುವಾಗ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು, ಪೊಲೀಸ್ ಇಲಾಖೆ ಇಲ್ಲಿಯ ಮೇಡಂ ಕೈಗೊಂಬೆಯಾಗಿದ್ದಾರೆ, ಬೆಳಗಾವಿ ಸುಸಂಸ್ಕೃತವಾದ ಜಿಲ್ಲೆ ಗುಂಡಾಗಿರಿ ಯಾರು ಪ್ರಾರಂಭ ಮಾಡಿದ್ದಾರೆ ಅವರ ಅಂತ್ಯ ಕಾಡಲಿದೆ ಎಂದು ಭವಿಷ್ಯ ನುಡಿದರು.
ಪೊಲೀಸರು ಕಾಂಗ್ರೆಸ್ ನವರ ಕೈಗೊಂಬೆಯಾಗಿದ್ದಾರೆ, ಕಾಂಗ್ರೆಸ್ ಸರ್ಕಾರ ಬಂದ್ರೆ ಕರ್ನಾಟಕ ಪಾಕಿಸ್ತಾನ ಆಗುತ್ತೆ, ಇದೂವರೆಗೆ ತಪ್ಪಿತಸ್ಥರನ್ನ ಬಂಧಿಸಿಲ್ಲ, ದೆಹಲಿಯಲ್ಲೊಬ್ರು ಮೇಡಮ್, ಬೆಳಗಾವಿಯಲ್ಲೊಬ್ರು ಮೇಡಮ್ ಇದ್ದಾರೆ ಎಂದು ಆರೋಪಿಸಿದರು.
ಬಸನಗೌಡ ಯತ್ನಾಳ್ ವಿವಾದಾತ್ಮಕ ಹೇಳಿಕೆ
ವೀರಶೈವ ಮಹಾಸಭಾ ಕಾಂಗ್ರೆಸ್ ನವರದ್ದಾಗಿದೆ, ಅಲ್ಲಿರೋರು ಕಾಂಗ್ರೆಸ್ ನಲ್ಲಿರುವವರೇ, ಅದು ಸಮುದಾಯದ ಪರವಾಗಿ ಉಳಿದಿಲ್ಲ ಎಂದು ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದರು.
ನಾವು ಸಮುದಾಯಕ್ಕೆ ಮೀಸಲಾತಿ ಕೊಡಿಸಿದ್ದೆವು, ಹೋರಾಟವನ್ನ ಮಾಡಿ ಮೀಸಲಾತಿ ಕೊಡಿಸಿದ್ದೆವು, ಇವರು ಹೋರಾಟ ಮಾಡಿ ಕೊಡಿಸಲಿ ನೊಡೋಣ, ಅಲ್ಲಿ ಎಲ್ಲರೂ ಕಾಂಗ್ರೆಸ್ ನವರೇ ಸೇರಿದ್ದಾರೆ ಎಂದು ಆರೋಪಿಸಿದರು.




