ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದ್ದು, ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಮೂವರು ನಾಯಕರಿಗೂ ಆಫ್ರಿಕಾ ಪ್ರವಾಸ ದೊಡ್ಡ ಚಾಲೆಂಜ್ ಆಗಿದೆ.
ಸೌತ್ ಆಫ್ರಿಕಾ ವಿರುದ್ಧದ ಪ್ರವಾಸ ಕೈಗೊಂಡಿರುವ ಭಾರತ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದ್ದು, ಮೂರು ಮಾದರಿಯಲ್ಲೂ ಮೂವರು ನಾಯಕರು ಭಾರತ ತಂಡವನ್ನ ಮುನ್ನಡೆಸುತ್ತಿರುವುದು ಈ ಪ್ರವಾಸದ ವಿಶೇಷವಾಗಿದೆ. ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದರೆ, ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಹಾಗೂ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾವನ್ನ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.

ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಪ್ರವಾಸ ಮೂವರು ನಾಯಕರಿಗೂ ಸವಾಲಿನ ಸಂಗತಿಯಾಗಿದೆ. ಟೆಸ್ಟ್ ಸರಣಿಯಲ್ಲಿ ಸೌತ್ ಆಫ್ರಿಕಾ ನೆಲದಲ್ಲಿ ಈವರೆಗೂ ಸರಣಿ ಗೆಲ್ಲದ ಟೀಮ್ ಇಂಡಿಯಾ, ರೋಹಿತ್ ಶರ್ಮಾ ಸಾರಥ್ಯದಲ್ಲಿ ಈ ಸಾಧನೆ ಮಾಡುವ ನಿರೀಕ್ಷೆ ಹೊಂದಿದ್ದರೆ. ಮತ್ತೊಂದೆಡೆ ಏಕದಿನ ವಿಶ್ವಕಪ್ ಫೈನಲ್ ಬಳಿಕ ತನ್ನ ಮೊದಲ ಏಕದಿನ ಸರಣಿ ಆಡುತ್ತಿರುವ ಭಾರತ ಜಯದ ಹಾದಿಯನ್ನು ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದು, ಕೆಎಲ್ ರಾಹುಲ್ ಅವರ ನಾಯಕತ್ವಕ್ಕೆ ಜಯದ ಹಾದಿಯನ್ನ ಹುಡುಕುವುದು ಸವಾಲಾಗಿದೆ.
ಈ ನಡುವೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ತಂಡದ ನಾಯಕತ್ವದ ಹೊಣೆ ಹೊತ್ತು 4-1ರ ಅಂತರದಲ್ಲಿ ಸರಣಿ ಗೆದ್ದು, ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿರುವ ಸೂರ್ಯಕುಮಾರ್, ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಜಯದ ಹಾದಿಯಲ್ಲಿ ಸಾಗುವ ನಿರೀಕ್ಷೆ ಹೊಂದಿದ್ದಾರೆ. ಅಲ್ಲದೇ ಈ ಸರಣಿ ಗೆಲುವು ಮುಂದಿನ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಲಿದೆ. ಒಟ್ಟಾರೆ ಸೌತ್ ಆಫ್ರಿಕಾ ವಿರುದ್ಧದ ಸರಣಿ ಟೀಮ್ ಇಂಡಿಯಾಕ್ಕೆ ಹಾಗೂ ತಂಡವನ್ನ ಮುನ್ನಡೆಸುತ್ತಿರುವ ಮೂವರು ನಾಯಕರಿಗೂ ಸವಾಲಿನ ಸಂಗತಿಯಾಗಿದ್ದು, ಈ ಮೂರು ಚಾಲೆಂಜ್ ಗಳಲ್ಲಿ ಯಾರು ಯಶಸ್ಸು ಸಾಧಿಸುತ್ತಾರೆ ಕಾದು ನೋಡಬೇಕಿದೆ.




