PARTY DEMANDS I WILL CONTEST FROM BANGALURU NORTH: ಸಂಸತ್ತಿನಲ್ಲಿ ವಿಪಕ್ಷವನ್ನು ಸಂಪೂರ್ಣವಾಗಿ ಆಡಳಿತ ನಡೆಸುವ ಹುನ್ನಾರ: ಸಂಸದ ಡಿ ಕೆ ಸುರೇಶ್

ಬೆಂಗಳೂರು : ವಿಪಕ್ಷಗಳಿಗೆ ಅಧಿಕಾರ ಒಂದೇ ಮುಖ್ಯ ಎನ್ನುವುದನ್ನು ಅವರು ಪದೇ ಪದೇ ಸಾಭೀತುಪಡಿಸುತ್ತಿದ್ದಾರೆ, ಅದಕ್ಕಾಗಿ ರಾಜ್ಯ ಸರ್ಕಾರ ಬೀಳಲಿದೆ, ಬೀಳಲಿದೆ ಎಂದು ಹೇಳುತ್ತಿದ್ದಾರೆ ಎಂದು ಸಂಸದ ಡಿ ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳು ಸೃಜನಾತ್ಮಕ ಕೆಲಸ ಮಾಡಬೇಕು, ಅದನ್ನ ಬಿಟ್ಟು, ಅಧಿಕಾರ ಹೇಗೆ ಹಿಡಿಯಬೇಕು ಎಂಬ ಚಿಂತೆಯಲ್ಲಿವೆ, ವಾಮಮಾರ್ಗದ ಮುಖಾಂತರ, ಕುದುರೆ ವ್ಯಾಪಾರ ಹೇಗೆ ಮಾಡಬೇಕು ಅನ್ನೋ ಬಗ್ಗೆ ಚಿಂತನೆ ಮಾಡುತ್ತಿವೆ ಎಂದು ಕಿಡಿಕಾರಿದರು.
ಬೇರೇನು ವಿಪಕ್ಷಗಳು ಮಾಡುತ್ತಿಲ್ಲ, ಕೆಲವರಿಗೆ ಅಭ್ಯಾಸ ಆಗೋಗಿದೆ. ಅಂತವರು ಹೀಗೆಲ್ಲಾ ಮಾತಾನಾಡುತ್ತಿದ್ದಾರೆ, ಅವರ ಆಸೆ ಖಂಡಿತ ಈಡೇರಲ್ಲ. ಐದು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ. ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಸದ್ಯ ಬಿಜೆಪಿ, ಜೆಡಿಎಸ್‌ ನಾಯಕರು ಭ್ರಮೆಯಲ್ಲಿದ್ದಾರೆ ಎಂದರು.
ಸಂಸತ್ತಿನಲ್ಲಿ ಧರಣಿ ಮಾಡುವುದು ನಮ್ಮ ಹಕ್ಕು


ಸಂಸತ್ತಿನಲ್ಲಿ ಸಂಸದರ ಅಮಾನತ್ತು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ ಕೆ ಸುರೇಶ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ ದೇಗುಲ. ವಿಪಕ್ಷಗಳನ್ನು ಸಂಪೂರ್ಣವಾಗಿ ಹೊರಗಿಟ್ಟು ಆಡಳಿತ ನಡೆಸಲು ಬಿಜೆಪಿ ಹೊರಟಿದೆ ಎಂದು ಆರೋಪಿಸಿದರು.
ಪ್ರತೀ ಬಾರಿಯೂ ವಿಪಕ್ಷಗಳು ಸಂಸತ್ ಒಳಗೆ, ಹೊರಗೆ ಪ್ರತಿಭಟನೆ ಮಾಡಿಕೊಂಡು ಬಂದಿವೆ. ದೇಶದ, ರಾಜ್ಯದ ವಿಚಾರ ಇಟ್ಟುಕೊಂಡು ಪ್ರತಿಭಟನೆ ಮಾಡಲಾಗಿದೆ. ಧರಣಿಯನ್ನ ಮಾಡುವುದು ಸಂಸದರ ಹಕ್ಕು ಎಂದು ಪ್ರತಿಪಾದಿಸಿದರು.
ಆ ಹಕ್ಕನ್ನು ಬಿಜೆಪಿ ಹತ್ತಿಕ್ಕುವ ಕೆಲಸ ಮಾಡಿದೆ. ಸಂಸತ್ ಭವನ ಭದ್ರತೆ ಇಲ್ಲದಂತಾಗಿದೆ. ಇಡೀ ದೇಶವೇ ಚಿಂತನೆ ಮಾಡುವ ವಿಚಾರವಾಗಿದೆ ಎಂದರು. ಪ್ರತೀಬಾರಿ ಪ್ರಧಾನಿ ಭದ್ರತೆ ಬಗ್ಗೆ ಹೇಳುತ್ತಾರೆ, ಅವರ ಲೋಪ ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ..?
ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನಗೇನು ಅಭ್ಯಂತರ ಇಲ್ಲ, ಪಕ್ಷ ಎಲ್ಲಿಗೆ ಹೇಳಲಿದೆ ನನಗೆ ಗೊತ್ತಿಲ್ಲ. ಹಿಂದೆಯೂ ಕೂಡ ನಾನು ಹೇಳಿದ್ದೆ. ನನಗೆ ಅಂತ ಆಸಕ್ತಿ ಇಲ್ಲ ಅಂತ. ಪಕ್ಷ ಏಲ್ಲಾದ್ರೂ ನಿಲ್ಲಬೇಕು ಅಂತ ಒತ್ತಾಯ ಮಾಡಿದ್ರೆ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದರು.
ಎಲ್ಲಿ ನಿಲ್ಲಬೇಕು ಅನ್ನೋದು ನನ್ನ ತೀರ್ಮಾನ ಅಲ್ಲ. ಪಕ್ಷದ, ಕಾರ್ಯಕರ್ತರು, ಹೈಕಮಾಂಡ್ ತೀರ್ಮಾನ ಎಂದರು. ಮುಂಬರುವ ದಿನಗಳಲ್ಲಿ ಕೇವಲ ಬೆಂಗಳೂರು ಮಾತ್ರವಲ್ಲ. ದೇಶದಲ್ಲೇ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

More News