ಗುವಾಹಟಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ನ್ಯಾಯ ಯಾತ್ರೆ ಗುವಾಹಟಿ ನಗರಕ್ಕೆ ಪ್ರವೇಶಿಸದಂತೆ ಆಸ್ಸಾಂನಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ತಡೆದಿದೆ.
ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ರಸ್ತೆಗೆ ಅಡ್ಡಲಾಗಿ ಇರಿಸಿದ್ದ ಬ್ಯಾರಿಕೇಡ್ ಗಳನ್ನು ರಸ್ತೆ ಪಕ್ಕಕ್ಕೆ ಸರಿಸಿ, ಅಲ್ಲಿನ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಲು ಯಾತ್ರೆ ನಗರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
Assam CM Himanta Biswa Sharma's extreme measures to halt Shri @RahulGandhi's Yatra reveal his fear.
— Siddaramaiah (@siddaramaiah) January 23, 2024
Attacks on Yatris, threats, an FIR, and blocking temple visits show his desperation to please higher-ups. Over 50,000 Yatris, including Rahul Gandhi, were stopped at Guwahati's… pic.twitter.com/AhceqjKI1w
ಗುವಾಹಟಿ ಚೌಕದಲ್ಲಿ ಭಾರೀ ಪ್ರಮಾಣದ ಜನಸಮೂಹ ಜಮಾಯಿಸಿತ್ತು. ಅಲ್ಲದೆ, ಕಾಂಗ್ರೆಸ್ ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪೋಸ್ಟ್ ಮಾಡಿ, ಆಸ್ಸಾಂ ಸರ್ಕಾರದ ವಿರುದ್ಧ ಕಿಡಿಕಾರಿದೆ. ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿ ಯಾತ್ರೆಯನ್ನು ನಿಲ್ಲಿಸಲಾಗಿದೆ. ಭಾರತ ಜೋಡೋ ನ್ಯಾಯ ಯಾತ್ರೆಯ ದೊಡ್ಡ ಧ್ವನಿಯಿಂದ ಹೆದರಿದ ಆಸ್ಸಾಂ ಸರ್ಕಾರ ಇಂತಹ ಹೇಡಿತನದ ಮತ್ತು ನಾಚಿಕೆಗೇಡಿತನ ಕೃತ್ಯ ನಡೆಸಿದೆ. ಇದು ಜನರ ಧ್ವನಿ ಎಂಬುದು ಮರೆಯಬಾರದು, ಯಾವುದೇ ಬೆಲೆ ತೆತ್ತರೂ ಯಾತ್ರೆಯನ್ನು ಹತ್ತಿಕ್ಕಲ್ಲು ಸಾಧ್ಯವಿಲ್ಲ ಎಂದು ಹೇಳಿದೆ.
ನಮ್ಮ ದಾರಿಯಲ್ಲಿರುವ ಈ ಮುಳ್ಳುಗಳು ನಮ್ಮ ಧೈರ್ಯವನ್ನು ಹೆಚ್ಚಿಸುತ್ತಿವೆ, ಮತ್ತು ನಮ್ಮನ್ನು ಬಲಪಡಿಸುತ್ತಿವೆ. ನಾವು ಯಾರಿಗೂ ಹೆದರುವುದಿಲ್ಲ. ಭಾರತ್ ಜೋಡೋ ನ್ಯಾಯ್ ಯಾತ್ರೆ ಮುಂದುವರೆಯಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಅಲ್ಲಿನ ಯುವಕರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿ, ಬಿಜೆಪಿಯವರು ತಮ್ಮನ್ನು ಗುಲಾಮರನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಆರೆ ಯಾರೂ ನಿಮ್ಮನ್ನು ಗುಲಾಮರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಪಡಿಸಿದ್ದಾರೆ.




