Hiremagaluru Kannan: ಹಿರೇಮಗಳೂರು ಕಣ್ಣನ್ ಅವರಿಂದ ಹಣ ವಾಪಾಸ್ ಇಲ್ಲ: ಇದು ತಹಶೀಲ್ದಾರ್ ತಪ್ಪು: ಸಚಿವರ ಸ್ಪಷ್ಟನೆ: ಬಿಜೆಪಿ ಕಿಡಿ

ಬೆಂಗಳೂರು : ತಮಗೆ ಪಾವತಿಸಿರುವ ತಸ್ತೀಕ್ ಹಣ ದೇವಾಲಯದ ಆದಾಯಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆ ಹಣ ಹಿಂದಿರುಗಿಸುವಂತೆ ಕನ್ನಡದ ಪೂಜಾರಿ ಎಂದು ಪ್ರಸಿದ್ಧವಾಗಿರುವ ಹಿರೇಮಗಳೂರು ಕಣ್ಣನ್ ಅವರಿಗೆ ಮುಜರಾಯಿ ಇಲಾಖೆ ನೋಟಿಸ್ ನೀಡಿತ್ತು.
ಇದು ವಿವಾದವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದು, ಹಿರೇಮಗಳೂರು ಕಣ್ಣನ್ ಅವರು ನೋಟಿಸ್ ನಿಂದ ದೃತಿಗೆಡುವುದು ಬೇಡ, ಇದು ತಹಶೀಲ್ದಾರ್ ತಪ್ಪು. ಹೀಗಾಗಿ ಅವರೇ ಹಣ ಪಾವತಿಸಿ ಅಂತ ನೋಟಿಸ್ ನೀಡುತ್ತೇವೆ ಎಂದು ಹೇಳಿದ್ದಾರೆ.
ಬೇರೆ ಯಾವುದೇ ಮುಜರಾಯಿ ಇಲಾಖೆಯಲ್ಲಿ ಈ ಸಮಸ್ಯೆ ಆಗಿಲ್ಲ, ಹೀಗಾಗಿ ಸ್ಥಳೀಯ ತಹಶೀಲ್ದಾರ್ ಅವರಿಗೆ ಹಣ ಪಾವತಿಸುವಂತೆ ನೋಟಿಸ್ ನೀಡುತ್ತೇವೆ, ಹಾಗೆಯೇ ಸಮಸ್ಯೆಯನ್ನು ಕೂಡಲೇ ಬಗೆಹರಿಸುತ್ತೇನೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಹಿರೇಮಗಳೂರು ಕೋದಂಡ ರಾಮಚಂದ್ರ ದೇಗುಲಕ್ಕೆ 2013-14 ನೇ ಸಾಲಿನಿಂದ ಈ ವರೆಗೆ 5.10 ಲಕ್ಷ ಸಂಗ್ರಹವಾಗಿದೆ. ಅದೇ ಅವಧಿಯಲ್ಲಿ ತಮಗೆ ತಸ್ತೀಕ್ ಮೊತ್ತವಾಗಿ ಒಟ್ಟು 8.10 ಲಕ್ಷ ಪಾವತಿಸಲಾಗಿದೆ. ದೇವಾಲಯದ ವಾರ್ಷಿಕ ಆದಾಯಕ್ಕಿಂತ ವೆಚ್ಚ ಜಾಸ್ತಿಯಾಗಿದೆ.
ಸರ್ಕಾರದಿಂದ ಬಿಡುಗಡೆಯಾಗಿರುವ ಮೊತ್ತಕ್ಕಿಂತ ಹೆಚ್ಚುವರಿಯಾಗಿ ತಮ್ಮ ಖಾತೆಗೆ ಹಣ ಜಮಾ ಮಾಡಲಾಗಿದೆ. ಆದ್ದರಿಂದ ಬಾಕಿ 4.74 ಲಕ್ಷ ರೂಪಾಯಿ ಹಣ ಹಿಂದಿರುಗಿಸಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.

ಬಿಜೆಪಿ ಕಿಡಿ
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದು, ಇದು ಕಾಂಗ್ರೆಸ್ ಸರ್ಕಾರದ ಆಡಳಿತ ತುಘಲಕ್ ಹಾದಿಯಲ್ಲಿದೆ ಎಂದು ಆರೋಪಿಸಿದ್ದಾರೆ. ಅವರ ಟ್ವೀಟ್ ನ ಸಂಪೂರ್ಣ ವಿವರ ಇಲ್ಲಿದೆ.
ಕಾಂಗ್ರೆಸ್ ಸರ್ಕಾರದ ಆಡಳಿತ ತುಘಲಕ್ ಹಾದಿಯಲ್ಲಿ ನಡೆದಿದೆ, ಹಿಂದೂ ಧರ್ಮಿಯರ ಧಾರ್ಮಿಕ ಕ್ಷೇತ್ರದಲ್ಲಿಯೂ ಆದಾಯ ಗಳಿಕೆಯನ್ನು ಮಾನದಂಡವನ್ನಾಗಿಸಿಕೊಂಡು ಹಿರೇಮಗಳೂರು ಕಣ್ಣನ್ ಅವರಂತಹ ನಾಡಿನ ಶ್ರೇಷ್ಠ ಕನ್ನಡ ವಿದ್ವಾಂಸ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರಿಗೆ ನೋಟಿಸ್ ನೀಡಿರುವ ಕ್ರಮ ಅತ್ಯಂತ ಹಾಸ್ಯಾಸ್ಪದ ಹಾಗೂ ಖಂಡನೀಯ.
ಹಿಂದೂ ಆಚಾರ-ವಿಚಾರ ಹಾಗೂ ಧಾರ್ಮಿಕ ಕೇಂದ್ರಗಳನ್ನೇ ಗುರಿಯನ್ನಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ಆಗಾಗ ಸರಣೀ ರೂಪದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಧರ್ಮನಿಷ್ಠರ ಸಹನೆಯನ್ನು ಕೆಣಕುವಂತಿದೆ.
ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಅನ್ನು ಈ ಕೂಡಲೇ ಬೇಷರತ್ ಕ್ಷಮೆ ಯಾಚಿಸಿ ಸರ್ಕಾರ ವಾಪಸ್ ಪಡೆಯಬೇಕು, ಇಂಥಾ ಅಸಂಬದ್ಧ ನೋಟಿಸ್ ನೀಡಿದ ಅವಿವೇಕಿ ಅಧಿಕಾರಿಯನ್ನು ಕೂಡಲೇ ಅಮಾನತ್ತಿನಲ್ಲಿಡಲಿ ಎಂದು ಆಗ್ರಹಿಸಿದ್ದಾರೆ.

More News