ನವದೆಹಲಿ :ಫೆ.05 : ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕುರಿತು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿ ಕರ್ನಾಟಕದಲ್ಲಿ ಪ್ರತಿಭಟನೆ ಮಾಡಿದ್ದು, ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಹರಿಹಾಯುತ್ತಿದ್ದಾರೆ. ಇದೀಗ ಪ್ರಧಾನಿ ಮೋದಿ ಅವರು ಸಹ ಸೋಮವಾರ ಲೋಕಸಭೆಯ ಕೊನೆಯ ಭಾಷಣದಲ್ಲಿ ಡಿ.ಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಯನ್ನು ಪ್ರಸ್ತಾಪಿಸಿ, ಬಹಿರಂಗವಾಗಿ ದೇಶ ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಒಗ್ಗೂಡಿಸುವುದು ಇರಲಿ. ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇನ್ನು ಭಾರತ ದೇಶವನ್ನು ಎಷ್ಟು ತುಂಡುಗಳನ್ನಾಗಿ ಮಾಡುತ್ತಿರಾ? ಇಷ್ಟು ಒಡೆದಿರುವುದು ಸಾಕಾಗಿಲ್ವಾ. ದೇಶವನ್ನು ಇನ್ನೆಷ್ಟು ತುಂಡು ಮಾಡಬೇಕು ಅಂದುಕೊಂಡಿದ್ದೀರಿ. ಕಾಂಗ್ರೆಸ್ನವರು ಎಂದೂ ಕೂಡ ದೇಶವನ್ನು ಜೋಡಿಸಿಲ್ಲ. ಜವಾಹರಲಾಲ್ ನೆಹರು ತಪ್ಪಿನಿಂದ ಕಾಶ್ಮೀರ ಸಮಸ್ಯೆ ಸೃಷ್ಟಿಯಾಯಿತು. ನೆಹರು ಹೊರಟು ಹೋದ್ರು, ಆದ್ರೆ ದೇಶ ನೋವು ಅನುಭವಿಸುತ್ತಿದೆ. ಇಂದು ನಾವು ಜಮ್ಮು-ಕಾಶ್ಮೀರ ಅಭಿವೃದ್ಧಿ ಮಾಡಿದ್ದೇವೆ ಎಂದು ಟಾಂಗ್ ಕೊಟ್ಟರು.

ಇನ್ನು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಇತ್ತೀಚೆಗೆ ಬಜೆಟ್ ಕುರಿತು ಟೀಕಿಸುತ್ತಾ ಆಡಿದ ಪ್ರತ್ಯೇಕ ರಾಷ್ಟ್ರದ ಮಾತು ಕಾಂಗ್ರೆಸ್- ಬಿಜೆಪಿ ಮಧ್ಯೆ ಮತ್ತೊಂದು ಜಟಾಪಟಿಗೆ ಕಾರಣವಾಗಿದೆ. ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕುರಿತು ಡಿಕೆಸು ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡು ಕರ್ನಾಟಕ ಬಿಜೆಪಿ ನಾಯಕರು ಎಲ್ಲೆಡೆ ಖಂಡಿಸುತ್ತಿದ್ದಾರೆ. ಅಲ್ಲದೇ ಡಿಕೆ ಸುರೇಶ್ ಅವರ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾಗಿದ್ದರು.
ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವಾಗುತ್ತಿದೆ. ದಕ್ಷಿಣದ ರಾಜ್ಯಗಳಿಗೆ ತಾರತಮ್ಯ ಆಗುತ್ತಿದೆ ಎಂದು ಡಿಕೆ ಸುರೇಶ್ ಹೇಳಿದ್ದರು. ಅದನ್ನೇ ಇಟ್ಟುಕೊಂಡು ಇದೀಗ ರಾಜ್ಯ ಕಾಂಗ್ರೆಸ್ ನಾಯಕರು ಇದೇ ಫೆಬ್ರವರಿ 7ರಂದು ದೆಹಲಿಯ ಜಂತರ್ ಮಂಥರ್ ನಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.




