SERIAL KILLER UMESH REDDY: ವಿಕೃತಕಾಮಿ ಉಮೇಶ್ ರೆಡ್ಡಿಗೆ ಪರೋಲ್ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು : ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಉಮೇಶ್ ರೆಡ್ಡಿಗೆ ಪೆರೋಲ್ ನೀಡಲು ಹೈಕೋರ್ಟ್ ನಿರಾಕರಿಸಿದೆ. ಅನಾರೋಗ್ಯಕ್ಕೆ ತುತ್ತಾಗಿರುವ ತಾಯಿಯೊಂದಿಗೆ ಇರಲು 30 ದಿನಗಳ ಪರೋಲ್ ನೀಡುವಂತೆ ಕೋರಿ ಉಮೇಶ್ ರೆಡ್ಡಿ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿ, ಪೆರೋಲ್ ನೀಡಲು ನಿರಾಕರಿಸಿದೆ. ಅರ್ಜಿದಾರರಿಗೆ ಪೆರೋಲ್ ನೀಡಬೇಕಾದ್ದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅಸ್ಪಾಕ್ ವಿರುದ್ಧದ ರಾಜಾಸ್ತಾನ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ನ್ಯಾಯಾಧೀಶರು ಉಲ್ಲೇಖಿಸಿದರು. ಹಾಗೆಯೇ ನ್ಯಾಯಾಲಯಕ್ಕೆ ಪೆರೋಲ್ ಸೇರಿದಂತೆ ಯಾವುದೇ ರೀತಿಯ ಅರ್ಜಿ ಸಲ್ಲಿಸಬೇಕು ಎಂದಾದರೆ ಆತ ಕನಿಷ್ಠ 30 ವರ್ಷ ಶಿಕ್ಷೆ ಅನುಭವಿಸಿರಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಅರ್ಜಿದಾರರಿಗೆ ಪೆರೋಲ್ ನೀಡಿದ್ದಲ್ಲಿ ಮತ್ತೆ ಅಪರಾಧ ಪ್ರವೃತ್ತಿಯನ್ನು ಹೊಂದಿರಬಹುದು ಅಥವಾ ಕಾನೂನು ಸುವ್ಯವಸ್ಥೆಗೆ ಅಪಾಯವನ್ನುಂಟು ಮಾಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ಅರ್ಜಿದಾರರು ಅರ್ಜಿಯನ್ನು ವಜಾಗೊಳಿಸಿದೆ. ಬೆಂಗಳೂರಿನಲ್ಲಿ 1998 ಫೆಬ್ರುವರಿ 28ರಂದು ನಡೆದ ಮಹಿಳೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಉಮೇಶ್ ರೆಡ್ಡಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಸುಪ್ರೀಂಕೋರ್ಟ್ ಮಾರ್ಪಾಡು ಮಾಡಿ ಆದೇಶಿಸಿತ್ತು.

More News