ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದು ಸೇರಿದಂತೆ ವಿವಿಧ ಭರವಸೆಗಳನ್ನು ಈಡೇರಿಸಿ ಬಿಜೆಪಿ ನುಡಿದಂತೆ ನಡೆದಿದೆ. ದೂರದೃಷ್ಟಿಯಿರುವ ಬಿಜೆಪಿಯನ್ನು ಜನತೆ ಬೆಂಬಲಿಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಿಳಿಸಿದರು.
ಚಿಕ್ಕೋಡಿಯಲ್ಲಿ ಇಂದು ಬಿಜೆಪಿ ಬೂತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದ ಪರ ಇರುವವರನ್ನು ಭಾರತಮಾತೆ ಎಂದೂ ಕ್ಷಮಿಸುವುದಿಲ್ಲ ಎಂದರು. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವ ರಾಜ್ಯಸಭಾ ಸದಸ್ಯರಿರುವ ಕಾಂಗ್ರೆಸ್ ಪಕ್ಷದವರನ್ನು ರಾಜ್ಯದ ಜನತೆ ಬೆಂಬಲಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಸರಕಾರ ಇದ್ದಾಗ ಶಾಂತ ಪರಿಸ್ಥಿತಿ ನೆಲೆಸಿತ್ತು. ಈಗ ಬಾಂಬ್ ಸ್ಫೋಟಿಸುತ್ತಿದೆ ಎಂದು ಅವರು ಗಮನ ಸೆಳೆದರು.

ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಬಾಂಬ್ ಸ್ಫೋಟಗೊಂಡಿತ್ತು. ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಬಾಂಬ್ ಸ್ಪೋಟಗೊಂಡಿದೆ ಬಡವರು, ಮಹಿಳೆಯರು (ನಾರಿಶಕ್ತಿ), ರೈತರು, ಯುವಜನತೆಯ ಆಶಯಗಳನ್ನು ಈಡೇರಿಸಿದ ಪಕ್ಷವಾಗಿ ಬಿಜೆಪಿ ಬೆಳೆದಿದೆ. ಬಿಜೆಪಿ ಸಿದ್ಧಾಂತ ಆಧರಿಸಿದ ಪಕ್ಷ. ಮುಸ್ಲಿಮ್ ಮಹಿಳೆಯರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ನಾವು ಹೇಳಿದ್ದೆವು. ತ್ರಿವಳಿ ತಲಾಖ್ ಪದ್ಧತಿಯನ್ನು ನಾವು ರದ್ದು ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷ ತುಷ್ಟೀಕರಣದ ಕಾರಣಕ್ಕಾಗಿ ಈ ಕಡೆ ಗಮನ ಹರಿಸಿರಲಿಲ್ಲ ಎಂದು ವಿವರಿಸಿದರು.

ಸ್ವಾವಲಂಬಿ, ವಿಶ್ವಾಸಯುಕ್ತ ಜನರಿರುವ ದೇಶವನ್ನಾಗಿ ಭಾರತವನ್ನು ಮೋದಿಯವರು ಪರಿವರ್ತಿಸಿದ್ದಾರೆ. ಆತ್ಮನಿರ್ಭರ ದೇಶವಾಗಿ ಅದು ಬದಲಾಗುತ್ತಿದೆ. ಪ್ರಧಾನಿಯವರು ದೇಶವನ್ನು ಆತ್ಮವಿಶ್ವಾಸವುಳ್ಳ ರಾಷ್ಟ್ರವಾಗಿ ಪರಿವರ್ತಿಸಿದ್ದನ್ನು ನಾವು ಜನತೆಯ ಮುಂದಿಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಲೋಕಸಭಾ ಚುನಾವಣೆಗೆ ಕೇವಲ 50-60 ದಿನಗಳು ಮಾತ್ರ ಬಾಕಿ ಇದೆ. ಬಿಜೆಪಿ- ಜೆಡಿಎಸ್ ಒಂದಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲು ಶಪಥ ಮಾಡಿ ಹೊರಟಿದ್ದೇನೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲೂ ದೊಡ್ಡ ಅಂತರದಲ್ಲಿ ಬಿಜೆಪಿ ಗೆಲ್ಲಿಸಲು ಮನವಿ ಮಾಡಿದರು. 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಭರವಸೆಯನ್ನು ನಡ್ಡಾಜೀ ಅವರಿಗೆ ನೀಡುವುದಾಗಿ ವಿಶ್ವಾಸದಿಂದ ನುಡಿದರು.

ರೈತರ ಸಂಕಷ್ಟಕ್ಕೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ಆದರೆ, ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ಕೆ ಮುಖ್ಯಮಂತ್ರಿಗಳು 10 ಸಾವಿರ ಕೋಟಿ ಅನುದಾನವನ್ನು ಪ್ರಕಟಿಸಿದ್ದಾರೆ. ರೈತರಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರಕಾರದ ಬಳಿ ಹಣ ಇಲ್ಲ. ಆದರೆ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಅದು ಮುಂದಾಗಿದೆ ಎಂದು ಟೀಕಿಸಿದರು.
ಹಿಂದೂಗಳು ದಾನವಾಗಿ ಕೊಟ್ಟ 2 ಎಕರೆ ಜಾಗದಲ್ಲಿ ಆರಂಭಿಸಿದ್ದ ಪಶು ಆಸ್ಪತ್ರೆಯನ್ನು ಜಮೀರ್ ಅಹ್ಮದ್ ಅವರು ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ ಕೊಡುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ರಾಜಕೀಯಕ್ಕೆ ತಕ್ಕ ಉತ್ತರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಕೊಡಬೇಕಿದೆ ಎಂದು ಮನವಿ ಮಾಡಿದರು.

ರಾಜ್ಯಸಭಾ ಚುನಾವಣೆಯ ಬಳಿಕ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಬಿಜೆಪಿ ಹೋರಾಟದ ಬಳಿಕ ನಿನ್ನೆ ಮೂವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ದೇಶಪ್ರೇಮ ಇದ್ದರೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರಿಗೆ ಶಕ್ತಿ ನೀಡಿದ ರಾಜ್ಯಸಭಾ ಎಂ.ಪಿ. ನಾಸೀರ್ ಹುಸೇನ್ ವಿರುದ್ಧ ಕೂಡ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.




