ಬೆಂಗಳೂರು: ಎರಡು ದಿನಗಳ ಹಿಂದೆ ಕಲಬುರಗಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆ ಹಾಗೂ ಇಂದು ಶಿವಮೊಗ್ಗದಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಕೇವಲ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ವಿರುದ್ಧವೇ ವಾಗ್ದಾಳಿ ನಡೆಸಿದರು. ಅದರ ಹೊರತಾಗಿ ಅಭಿವೃದ್ದಿಯ ಮಂತ್ರ ಮಾತ್ರ ಅವರು ಜಪಿಸಲಿಲ್ಲ.
ಎಂದೂ ಕಾಣದ ಭೀಕರ ಬರಗಾಲ ರಾಜ್ಯ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ಸಹಾಯಕ್ಕೆ ಬಾರದ ಕೇಂದ್ರ ಸರ್ಕಾರ, ಚುನಾವಣಾ ಸಮಯದಲ್ಲಿ ಸಾರ್ವಜನಿಕ ಸಭೆಗಳು ಮಾತ್ರ ಜೋರಾಗಿ ನಡೆಯುತ್ತಿದೆ ಎಂದು ಪ್ರತಿಪಕ್ಷದವರೂ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಪುತ್ರನಿಗೆ ಸೀಟು ನೀಡಲಿಲ್ಲ, ಆದ್ದರಿಂದ ತಾನು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿರುವ ಬಿಜೆಪಿ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಅವರ ಅನುಪಸ್ಥಿತಿ ಕಾರ್ಯಕ್ರಮದಲ್ಲಿ ಎದ್ದುಕಾಣುತ್ತಿತ್ತು.
ದೇಶಾದ್ಯಂತ 400ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಎನ್.ಡಿ.ಎ. ಗೆಲುವಿನಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರು. ಪ್ರತಿ ಪೋಲಿಂಗ್ ಬೂತಿನಲ್ಲಿ ಕಮಲ ಅರಳುವಂತೆ ನೋಡಿಕೊಳ್ಳಿ ಎಂದರು.

ಶಿವಮೊಗ್ಗದಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರ, ತುಷ್ಟೀಕರಣದ ನೀತಿಯನ್ನು ತನ್ನಾಗಿಸಿದ ಇಂಡಿ ಒಕ್ಕೂಟವು ಬಿಜೆಪಿ ಜನಬೆಂಬಲ ಗಮನಿಸಿ ನಿದ್ದೆಗೆಡುವ ಸ್ಥಿತಿ ಬಂದಿದೆ. ಯಡಿಯೂರಪ್ಪ ಅವರ ತಪೋಭೂಮಿ ಇದು. ಕರ್ನಾಟಕದ 28ರಲ್ಲಿ 28 ಸೀಟುಗಳನ್ನೂ ಬಿಜೆಪಿ- ಎನ್‍ಡಿಎಗೆ ಗೆಲ್ಲಿಸಿಕೊಡಿ ಎಂದರು.
ಕಾಂಗ್ರೆಸ್ ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬಂತು. ಬಳಿಕ ಕೇಂದ್ರ, ಮೋದಿಯವರ ಮೇಲೆ ಆರೋಪ ಹೊರಿಸುತ್ತಿದೆ. ಕಾಂಗ್ರೆಸ್ ಪಕ್ಷ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಜನರನ್ನು ಲೂಟಿ ಮಾಡಿ ಕಿಸೆ ಭರ್ತಿ ಮಾಡುವ ಕೆಲಸ ಮಾಡುತ್ತದೆ ಎಂದು ಆರೋಪಿಸಿದರು. ಕಾಂಗ್ರೆಸ್ಸಿಗರು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ರಾಜ್ಯದ ಖಜಾನೆ ಖಾಲಿ ಮಾಡಿದೆ ಎಂದು ಆಕ್ಷೇಪಿಸಿದರು.
ಅನೇಕ ಸಿಎಂಗಳಿರುವ ಕರ್ನಾಟಕ ಸರಕಾರ…
ಕರ್ನಾಟಕದಲ್ಲಿ ಸಿಎಂ, ಭವಿಷ್ಯದ ಸಿಎಂ, ಸೂಪರ್ ಸಿಎಂ, ಶ್ಯಾಡೊ ಸಿಎಂ ಜೊತೆಗೆ ದೆಹಲಿಯ ಕಲೆಕ್ಷನ್ ಸಿಎಂ ಇದ್ದಾರೆ. ಇಲ್ಲಿನ ಜನರು ಕಾಂಗ್ರೆಸ್‍ನ ಸಾಲವನ್ನು ತೀರಿಸುವ ಕೆಲಸ ಮಾಡಬೇಕಾಗಿದೆ. ಕರ್ನಾಟಕದ ಜನರಲ್ಲಿ ಕಾಂಗ್ರೆಸ್ ಸರಕಾರದ ಬಗ್ಗೆ ಸಿಟ್ಟಿದೆ. ಈ ಸಿಟ್ಟಿನಿಂದ ಬಿಜೆಪಿ- ಎನ್‍ಡಿಎ ಸಂಸದರು ಎಲ್ಲ ಸೀಟುಗಳಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದು ನರೇಂದ್ರ ಮೋದಿಯವರು ತಿಳಿಸಿದರು.

ಅಭಿವೃದ್ಧಿ, ಸಮರ್ಥ ಭಾರತ ಬಿಜೆಪಿ ಆಶಯ. ಕಾಂಗ್ರೆಸ್ ಬಳಿ ವಿಕಾಸದ ಕಾರ್ಯಸೂಚಿ ಇಲ್ಲ. ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವುದನ್ನೇ ತನ್ನ ಕೆಲಸವಾಗಿ ಮಾಡಿಕೊಂಡಿದೆ. ಎಲ್ಲೇ ಹೋದರೂ ಸುಳ್ಳು ಹೇಳುವುದು, ಸಿಕ್ಕಿ ಬಿದ್ದಾಗ ಹೊಸ ಸುಳ್ಳು ಹೇಳುವುದು ಅವರ ಕಾಯಕ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷವು ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡಿದರೆ, ನಾವು ಬಡವರ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಎಂದು ವಿವರಿಸಿದರು.
ವಿಕಸಿತ ಭಾರತಕ್ಕಾಗಿ, ಅಭಿವೃದ್ಧಿ ಹೊಂದಿದ ಕರ್ನಾಟಕಕ್ಕಾಗಿ ಆತಂಕವಾದ ನಿಲ್ಲಿಸಲು, ರೈತರ ಸಮೃದ್ಧಿ, ಯುವಜನರಿಗೆ ಹೊಸ ಅವಕಾಶಕ್ಕಾಗಿ ‘ಈ ಬಾರಿ 400 ಮೀರಿ’ ಸ್ಥಾನ ಗೆಲ್ಲಿಸಿಕೊಡಿ ಎಂದು ವಿನಂತಿಸಿದರು. ನಾರಿ ಶಕ್ತಿಗೆ ನಾವು ಗರಿಷ್ಠ ಗೌರವ, ಅವಕಾಶ ಕೊಟ್ಟಿದ್ದೇವೆ ಎಂದ ಅವರು, ನಾರಿ ಶಕ್ತಿ ನನಗೆ ಮತದಾರರಾಗಿ ಕಾಣುವುದಿಲ್ಲ; ಅವರು ದೇಶದ ಸುರಕ್ಷಾ ಕವಚ ಎಂದು ಬಣ್ಣಿಸಿದರು. ಕರ್ನಾಟಕದ ಮೂಲೆಮೂಲೆಯಲ್ಲಿ ಬಿಜೆಪಿಗೆ ಅಪಾರ ಜನಬೆಂಬಲ ಸಿಗುತ್ತಿದೆ ಎಂದು ಅವರು ತಿಳಿಸಿದರು. ಕುವೆಂಪು ಅವರೂ ಕರ್ನಾಟಕವನ್ನು ಇದೇ ನಿಟ್ಟಿನಲ್ಲಿ ನೋಡಿದ್ದರು. ಇಂಡಿ ಒಕ್ಕೂಟವು ನಾರಿ ಶಕ್ತಿಯನ್ನು ಅವಮಾನ ಮಾಡುತ್ತಿದೆ ಎಂದು ಟೀಕಿಸಿದರು.
ಆಯುಷ್ಮಾನ್ ಭಾರತ್ ಯೋಜನೆ ಜಾರಿ, ಕರ್ನಾಟಕದ 40 ಲಕ್ಷಕ್ಕೂ ಹೆಚ್ಚು ಉಚಿತ ಗ್ಯಾಸ್ ಸಿಲಿಂಡರ್ ನೀಡಿಕೆ ಸೇರಿ ಲಕ್ಷಗಟ್ಟಲೆ ಜನರಿಗೆ ಪ್ರಯೋಜನ ಸಿಗುತ್ತಿದೆ. ಎಸ್‍ಸಿ, ಎಸ್‍ಟಿ ಜನರ ಸಶಕ್ತೀಕರಣದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದೇವೆ ಎಂದು ತಿಳಿಸಿದರು. ಎಲ್ಲ ವರ್ಗದ ಜನರಿಗಾಗಿ ಬಿಜೆಪಿ ಶ್ರಮಿಸುತ್ತಿದೆ ಎಂದು ಹೇಳಿದರು. ಭಾರತ ಎಂದರೆ ಆಧುನಿಕತೆ ಎಂಬ ದೃಷ್ಟಿಕೋನ ವಿಶ್ವದಾದ್ಯಂತ ಬಂದಿದೆ. ಇದೇ ವಿಕಾಸವಾದದ ಕಡೆ ಬಿಜೆಪಿ ಸರಕಾರ ಗಮನ ಕೊಟ್ಟಿದೆ ಎಂದು ವಿವರಿಸಿದರು.

ವಿಶ್ವ ನಾಯಕ ಮೋದಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಮೋದಿಜೀ ಅವರು ಭಾರತದ ಆಶಾಕಿರಣ. ಅವರು ವಿಶ್ವ ನಾಯಕರು ಎಂದರಲ್ಲದೆ, ಮೋದಿಜೀ ಅವರು ಕರ್ನಾಟಕದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ ಎಂದು ನುಡಿದರು.
ಮೋದಿಜೀ ಅವರ ಸರಕಾರ ಕೇವಲ ಚುನಾವಣೆಗಾಗಿ ಕೆಲಸ ಮಾಡುತ್ತಿಲ್ಲ. ಗಡಿ ಸುರಕ್ಷತೆ, ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿ, ಕಾಶ್ಮೀರದ ಸ್ವಾಯತ್ತತೆಗಾಗಿ 370 ವಿಧಿ ರದ್ದು, ಶ್ರೀರಾಮ ಮಂದಿರ ನಿರ್ಮಾಣ ಸೇರಿದಂತೆ ಭಾರತವನ್ನು ವಿಶ್ವದ 5ನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿ- ಜೆಡಿಎಸ್ ಸೇರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಲು ಶ್ರಮಿಸೋಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಫೋನ್ ಮಾಡಿ ಹೇಳಿದ್ದನ್ನು ಜನರ ಗಮನಕ್ಕೆ ತಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಹಿರಿಯ ಧುರೀಣ ಕೆ ಎಸ್ ಈಶ್ವರಪ್ಪ ಅನುಪಸ್ಥಿತಿ ಎದ್ದುಕಾಣುತ್ತಿತ್ತು.




