ಬೆಂಗಳೂರು : ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಲಿದೆಯೇ, ಹೌದು ಎನ್ನುತ್ತಿದ್ದಾರೆ ಕೆಆರ್ ಪಿಪಿ ಪಕ್ಷದ ಮುಖಂಡರು. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ಆಗಮಿಸಿದ ಶಾಸಕ ಗಾಲಿ ಜನಾರ್ದನ ರೆಡ್ಡಿ, ನಾಳೆ ಬಿಜೆಪಿಗೆ ಸೇರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು.
ಬೆಂಗಳೂರಿನಲ್ಲಿ ಇಂದು ಅವರ ಬೆಂಬಲಿಗರೊಂದಿಗೆ ಚರ್ಚೆ ನಡೆಸಿದ ನಂತರ ಬಿಜೆಪಿ ಸೇರ್ಪಡೆ ಕುರಿತು ಘೋಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಜನಾರ್ದನ್ ರೆಡ್ಡಿ ಬಿಜೆಪಿ ಸೇರುವ ನಿರ್ಣಯಕ್ಕೆ ಪದಾಧಿಕಾರಿಗಳು ಹಾಗೂ ಬೆಂಬಲಿಗರು ಬೆಂಬಲ ಸೂಚಿಸಿದರು.
ಸಭೆಯಲ್ಲಿ ಬಿಜೆಪಿ ಸೇರುವ ನಿರ್ಣಯವನ್ನು ಜನಾರ್ದನ್ ರೆಡ್ಡಿ ಪ್ರಕಟಿಸಿದರು. ನಾಳೆ ಜನಾರ್ದನ್ ರೆಡ್ಡಿ ಹಾಗೂ ಅವರ ಬೆಂಬಲಿಗರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದರಿಂದ ಬಿಜೆಪಿಯೊಂದಿಗೆ ಕೆಆರ್ ಪಿಪಿ ಅಧಿಕೃತವಾಗಿ ವೀಲನವಾಗಲಿದೆ.
ಕಳೆದ ಒಂದು ವಾರದ ಹಿಂದೆ ನವದೆಹಲಿಗೆ ತೆರಳಿದ್ದ ಜನಾರ್ಧನ್ ರೆಡ್ಡಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬಂದಿದ್ದರು. ಈ ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಅವರು ನಾಳೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಕಳೆದ ಎರೆಡು ತಿಂಗಳ ಹಿಂದೆ ನಡೆದ ರಾಜ್ಯ ಸಭೆ ಚುನಾವಣೆಯಲ್ಲಿ ಜನಾರ್ಧನ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಅದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾರು ನನ್ನನ್ನು ಸಂಪರ್ಕಿಸುತ್ತಾರೋ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.
ಕೆಆರ್ ಪಿಪಿ ಪಕ್ಷ ವಿಚಾರವಾಗಿ ಜನಾರ್ಧನ ರೆಡ್ಡಿ ಮತ್ತು ಬಿಜೆಪಿ ಮಾಜಿ ಶಾಸಕ ಶ್ರೀರಾಮುಲು ಅವರ ಸಂಬಂಧ ಹದಗೆಟ್ಟಿತ್ತು. ಇದೀಗ ಶ್ರೀರಾಮುಲು ಅವರ ಪ್ರಯತ್ನದಿಂದ ಜನಾರ್ಧನ ರೆಡ್ಡಿ ಬಿಜೆಪಿ ಸೇರುತ್ತಿದ್ದಾರೆ.




