Search

KRISHNA BYREGOWDA: ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿರುವ ಮೋದಿಯರು ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಉತ್ತರಿಸುವರೇ? : ಕೃಷ್ಣ ಬೈರೇಗೌಡ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಚಾರಕ್ಕಾಗಿ ತಪ್ಪದೇ ರಾಜ್ಯಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರು, ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಯೋಜನೆಗೆ ಕೇಂದ್ರವೇ ತಡೆಯಾಗಿರುವ ಹಾಗೂ ರಾಜ್ಯದ ಸಂಸತ್‌ ಸೀಟುಗಳನ್ನು ಕಸಿಯುವ ಮೂಲಕ ರಾಜ್ಯಕ್ಕೆ ಅನ್ಯಾಯ ಎಸಗಲು ಹೊರಟಿರುವ ಕೇಂದ್ರದ ನೀತಿ ಬಗ್ಗೆ ಉತ್ತರಿಸುವರಾ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆಯೇ. ಇಡೀ ಭಾರತದಲ್ಲೇ ಅತ್ಯಂತ ಕಡಿಮೆ ತೆರಿಗೆ ಪಾಲು ಪಡೆಯುತ್ತಿರುವ ರಾಜ್ಯವೇ ಕರ್ನಾಟಕ. ರಾಜ್ಯದಿಂದ ಮೈತ್ರಿ ಅಭ್ಯರ್ಥಿಯೂ ಸೇರಿ 27 ಜನ ಸಂಸತ್ ಸದಸ್ಯರು ಇದ್ದರು ಏನೂ ಪ್ರಯೋಜನವಾಗಲಿಲ್ಲ. ನಮ್ಮಿಂದ ತೆರಿಗೆ ಜೊತೆಗೆ ಸಂಸತ್ ಸೀಟುಗಳನ್ನು ಕಸಿಯಲಾಗುತ್ತಿದೆ” ಎಂದರು.

ನೆಂಟರ ಮನೆಗೆ ಹೋದಾಗ ಖಾಲಿ ಕೈಯಲ್ಲಿ ಹೋಗುವುದು ಭಾರತೀಯ ಸಂಸ್ಕೃತಿಯಲ್ಲ. ಆದರೆ ಬಿಜೆಪಿಯವರದ್ದು ಉಂಡು ಹೋದ ಕೊಂಡು ಹೋದ ಸಂಸ್ಕೃತಿ. ತೆರಿಗೆ ಜೊತೆಗೆ ನದಿ ನೀರು ಹಂಚಿಕೆಯಲ್ಲೂ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಕೃಷ್ಣ, ತುಂಗಭದ್ರಾ, ಮಹದಾಯಿ, ಕಾವೇರಿ ಸೇರಿದಂತೆ ಅನೇಕ ನದಿ ನೀರಿನ ವಿಚಾರದಲ್ಲಿ ಮೋಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ಖುಷ್ಕಿ ಭೂಮಿ ಇರುವುದು ಕರ್ನಾಟಕದಲ್ಲಿ. ಅತಿ ಹೆಚ್ಚು ಮಳೆ ಆಶ್ರಯ ಹೊಂದಿರುವ ಕರ್ನಾಟಕ ಅತಿ ಹೆಚ್ಚು ಬರಕ್ಕೆ ಈಡಾಗಿದೆ. ನಮ್ಮ ನದಿ ನೀರುಗಳನ್ನು ಉಪಯೋಗಿಸಲು ಕೇಂದ್ರ ಸರ್ಕಾರ ಅನುವು ಮಾಡಿಕೊಡದೆ ಅನ್ಯಾಯ ಎಸಗುತ್ತಿದೆ. ನಮ್ಮ ಪಾಲಿನ ನೀರನ್ನು ಕೊಡಿ ಎಂದು ಪ್ರಧಾನಿಗಳಲ್ಲಿ ಎಷ್ಟು ಬಾರಿ ಮನವಿ ಮಾಡಿದರೂ ಉಪಯೋಗವಿಲ್ಲ ಎಂದು ಬೇಸರ ಹೊರಹಾಕಿದರು.

2023- 24 ಕೇಂದ್ರ ಬಜೆಟ್ ಪುಸ್ತಕದ ಪ್ಯಾರಾ 39 ರಲ್ಲಿ ಬರ ಪೀಡಿತ ಮಧ್ಯಕರ್ನಾಟಕದ ಕೆರೆಗೆ ನೀರು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಕೊಡಬೇಕು ಎಂದು ಬಜೆಟ್ಅಲ್ಲಿ ಘೋಷಣೆ ಮಾಡಿ ಒಂದು ವರ್ಷ ಮೂರು ತಿಂಗಳು ಆದರೂ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದೇನೆ.

16.08.2023 ರಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗಳು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳಿಗೆ ಭದ್ರಾ ಮೇಲ್ದಂಡೆ ಯೊಜನೆಗೆ ಹಣ ಬಿಡುಗಡೆ ಮಾಡಿ ಎಂದು ಪತ್ರ ಬರೆದಿದ್ದರು. ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಜೂನ್ 20, 2023 ರಲ್ಲಿ ಪತ್ರ ಬರೆದು ಹಣ ಬಿಡುಗಡೆಗೆ ಮನವಿ ಮಾಡಿದ್ದರು‌. ದೆಹಲಿ ವಿಶೇಷ ಪ್ರತಿನಿಧಿ ಟಿ‌.ಬಿ.ಜಯಚಂದ್ರ ಅವರು ಸೆಪ್ಟೆಂಬರ್ 16, 2023 ರಲ್ಲಿ ಪತ್ರ ಬರೆದಿದ್ದರು. ಬಿಜೆಪಿ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅವರು ಜುಲೈ 3 ನೇ ತಾರೀಕು ಪತ್ರ ಬರೆದಿದ್ದರು.

ಡಿ‌.ಕೆ ಶಿವಕುಮಾರ್ ಅವರು ಖುದ್ದಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಹಣ ಬಿಡುಗಡೆ ಮಾಡಬೇಕು ಎಂದು ಕೈ ಮುಗಿದು ಮನವಿ ಮಾಡಿದ್ದರು. ಆದರೂ ಹಣ ಬಿಡುಗಡೆ ಮಾಡದೆ ಕೇಂದ್ರ ಅನ್ಯಾಯ ಮಾಡಿದೆ. ಇದು ಕರ್ನಾಟಕದ 5 ಜಿಲ್ಲೆಗಳಿಗೆ ಮಾಡಿದ ಮೋಸ. ಕರ್ನಾಟಕಕ್ಕೆ ಬರುವ ಮೋದಿಯವರೇ ಹಣ ಬಿಡುಗಡೆ ಮಾಡುತ್ತೇವೆ ಎಂದು ಘೋಷಣೆ ಮಾಡುತ್ತೀರಾ? ಅಥವಾ ಕರ್ನಾಟಕದ ತೆರಿಗೆ ಹಣ ತೆಗೆದು ಕೊಂಡು ಮೋಸ ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವಿರಾ? ರೈತರಿಗೆ ಮೂರು ನಾಮ ಹಾಕುತ್ತಿದ್ದೇವೆ ಎಂದು ಒಪ್ಪಿಕೊಳ್ಳುವಿರಾ? ಎಂದು ಆಕ್ರೋಶ ಹೊರಹಾಕಿದರು.

ಮಹದಾಯಿಯಲ್ಲೂ ಮೋಸ

ಮಹಾದಾಯಿ ನೀರಿಗಾಗಿ ರೈತರು ಸಾವಿರಾರು ದಿನಗಳ ಕಾಲ ಹೋರಾಟ ಮಾಡಿದ್ದಾರೆ. 13.4 ಟಿಎಂಸಿ ನೀರನ್ನು 2019 ರಲ್ಲಿ ಟ್ರಿಬ್ಯುನಲ್ ಕರ್ನಾಟಕಕ್ಕೆ ಎಂದು ಗೆಜೆಟ್ ನೋಟಿಫಿಕೇಷನ್ ಮಾಡಿದೆ. ಅಂದರೆ ನೀರಿನ ಹಂಚಿಕೆಯ ಸೂತ್ರವನ್ನು ಅಂತಿಮಗೊಳಿಸಿದೆ.

ಕುಡಿಯುವ ನೀರಿಗೆ 5.4 ಟಿಎಂಸಿ, ವಿದ್ಯುತ್ ಉತ್ಪಾದನೆಗೆ 8.02 ನೀರನ್ನು ಹಂಚಿಕೆ ಮಾಡಲಾಗಿದೆ. ಇಷ್ಟು ಆದರೂ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಅನುಮತಿ ಕೊಟ್ಟಿಲ್ಲ. ಕಳೆದ 4 ವರ್ಷಗಳಿಂದ ಟೆಂಡರ್ ಆದರೂ ಸಹ ಕಿತ್ತೂರು ಕರ್ನಾಟಕ ಭಾಗದ ರೈತರಿಗೆ ಅನ್ಯಾಯ ಮಾಡಿದೆ. 20 ಜೂನ್ 2023 ರಲ್ಲಿ ಮಹದಾಯಿ ಯೋಜನೆಗೆ ಡಿಸಿಎಂ ಅವರು ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ. ಪರಿಸರ ಇಲಾಖೆಯ ಅನುಮತಿ ಕೊಡದೆ ಇರುವ ಹಿಂದೆ ದುರುದ್ದೇಶ ಅಡಗಿದೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದರು, ಜೋಶಿ ಅವರು ಕೇಂದ್ರ ಸಚಿವರಾಗಿದ್ದರೂ ಕಳೆದ 5 ವರ್ಷಗಳಿಂದ ಏಕೆ ಕರ್ನಾಟಕಕ್ಕೆ ಅನ್ಯಾಯ ಎಸಗಲಾಗಿದೆ ಎಂದು ಪ್ರಶ್ನಿಸಿದರು.

ಮೇಕೆದಾಟುವಿಗೆ ಏಕಿಲ್ಲ ಒಪ್ಪಿಗೆ?

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ವಾಡಿಕೆಯ ಮಳೆಯಾದರೆ ಒಂದು ವರ್ಷಕ್ಕೆ ತಮಿಳುನಾಡಿಗೆ 177. 25 ಟಿಎಂಸಿ ನೀರನ್ನು ಬಿಡಬೇಕು. 2022- 23 ರಲ್ಲಿ 405.04 ಟಿಎಂಸಿ, 2019- 20 ರಲ್ಲಿ 205 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿತ್ತು. 2020-21 ರಲ್ಲಿ 211 ಟಿಎಂಸಿ, 2021-22 ರಲ್ಲಿ 281 ಟಿಎಂಸಿ ನೀರನ್ನು ಬಿಟ್ಟಿದ್ದೇವೆ. ಈವರೆಗೆ 1 ಸಾವಿರ ಟಿಎಂಸಿ ಗೂ ಹೆಚ್ಚು ನೀರನ್ನು ಬಿಡಲಾಗಿದ್ದು ಈ ಹೆಚ್ಚುವರಿ ನೀರನ್ನು ಮೇಕೆದಾಟು ಯೋಜನೆಯಿಂದ ಸಂಗ್ರಹಿಸಿ ಸಂಕಷ್ಟದ ಕಾಲದಲ್ಲಿ ಬಳಸಿಕೊಳ್ಳಬಹುದು.

ಮೇಕೆದಾಟು ಸಮತೋಲನ ಅಣೆಕಟ್ಟು ಮಾಡಿದರೆ ಎರಡು ರಾಜ್ಯಗಳಿಗೂ ಅನುಕೂಲ. 18 ಜನವರಿ 2019 ರಲ್ಲಿ ಅನುಮತಿ ನೀಡಬೇಕು ಎಂದು ಪತ್ರ ಬರೆದು 5 ವರ್ಷಗಳಾಗಿವೆ. ಜುಲೈ 2019 ರಲ್ಲಿ ಮೇಕೆದಾಟುವಿಗೆ ಅನುಮತಿ ಕೊಡಿ ಪತ್ರ ಬರೆಯಲಾಗಿತ್ತು. 15, 06.19 ರಲ್ಲಿ ಅಂದಿನ ಸಿಎಂ ಪತ್ರ ಬರೆದಿದ್ದರು. 03.07.2019 ರಲ್ಲಿ ಅಂದಿನ ನೀರಾವರಿ ಸಚಿವರು ಪತ್ರ ಬರೆದಿದ್ದರು, 2019 ನವೆಂಬರ್ 19 ರಲ್ಲಿ ವಿಜಯ್ ಬಾಸ್ಕರ್ ಅವರು, 2019 ಆಗಸ್ಟ್ 6 ರಂದು, ನವೆಂಬರ್ 11, 2019, 25, ಫೆಬ್ರವರಿ 2020, ಮೇ 08,2020, ಜುಲೈ 14, ಯಡಿಯೂರಪ್ಪ ಅವರು ಸೆಪ್ಟೆಂಬರ್18, 2020 ಸೇರಿದಂತೆ ಅನೇಕ ಬಾರಿ ಪತ್ರ ಬರೆಯಲಾಗಿದೆ.

ಮೇಕೆದಾಟು ಯೋಜನೆ ಮಾಡಬಾರದು ಎಂದು ತಮಿಳುನಾಡು ಸುಪ್ರೀಂ ಕೋರ್ಟ್ ಅಲ್ಲಿ ಅರ್ಜಿ ಹಾಕಿತ್ತು. ಅದಕ್ಕೆ ಎಲ್ಲಿಯವರೆಗೆ ಕರ್ನಾಟಕ ತಮಿಳುನಾಡಿನ ಪಾಲಿನ ನೀರನ್ನು ಬಿಡುತ್ತದೆಯೋ ಅಲ್ಲಿಯವರೆಗೆ ಹೆಚ್ಚುವರಿ ನೀರನ್ನು ಬಳಸಿಕೊಂಡು ಯಾವ ಯೋಜನೆ ಬೇಕಾದರೂ ಮಾಡಿಕೊಳ್ಳಬಹುದು. ಈ ಬಗ್ಗೆ ತಮಿಳುನಾಡು ಪ್ರಶ್ನೆ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ.

ಮೇಕೆದಾಟು ಯೋಜನೆಗೆ ಕಳೆದ 5 ವರ್ಷದಿಂದ ಅನುಮತಿ ನೀಡಿ ಎಂದು ಮನವಿ ಮಾಡಿದರೂ ನಮ್ಮ ಮೇಲೆ ಕೇಂದ್ರ ಸರ್ಕಾರ ಏಕೆ ಹಗೆತನ ಸಾಧನೆ. ಮಾನ್ಯ ಪ್ರಧಾನಿಗಳೇ ನೀವು ಏಕೆ ಕರ್ನಾಟಕ್ಕೆ ಮೋಸ ಮಾಡುತ್ತಾ ಇದ್ದೀರಾ? ಉತ್ತರಿಸಿ ಎಂದು ಒತ್ತಾಯಿಸಿದರು.

ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಲೋಕಸಭಾ ಸೀಟುಗಳು 129 ಇದ್ದು ಕ್ಷೇತ್ರ ಮರು ವಿಂಗಡಣೆ ಮಾಡಿದರೆ 103 ಕ್ಕೆ ಇಳಿಯಲಿದೆ. ದಕ್ಷಿಣ ಭಾಗದ ಎಲ್ಲಾ ರಾಜ್ಯಗಳ ಹಕ್ಕನ್ನು, ಪ್ರಾತಿನಿಧ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಇದರ ಬಗ್ಗೆ ಮೋದಿಯವರು ಉತ್ತರಿಸಬೇಕು.

ಇದರ ಬಗ್ಗೆ ಎಲ್ಲಾ ಪಕ್ಷಗಳು ವಿರೋಧ ವ್ಯಕ್ತಪಡಿಸಿದರು ಸಹ ಬಾಯಿ ಬಿಟ್ಟಿಲ್ಲ. ನಮ್ಮ ಪ್ರಾತಿನಿಧ್ಯ ವನ್ನು, ದನಿಯನ್ನು ಅಡಗಿಸುವ ಹುನ್ನಾರ ನಡೆಯುತ್ತಿದೆ. ನಮ್ಮ ಸೀಟು, ತೆರಿಗೆ, ನೀರು ಎಲ್ಲವನ್ನು ಕಿತ್ತುಕೊಳ್ಳಲಾಗುತ್ತಿದೆ. ತಮಿಳುನಾಡು ಇದರ ವಿರುದ್ದ ದನಿ ಎತ್ತಿದೆ ಎಂದು ಅವರು ತಿಳಿಸಿದರು.

ಪ್ರಧಾನ ಮಂತ್ರಿಗಳು ಈ ನಾಲ್ಕು ಪ್ರಶ್ನೆಗಳಿಗೆ ಉತ್ತರ ಕೊಡಬೇಕು

ಭದ್ರಾ ಮೇಲ್ದಂಡೆ ಯೊಜನೆಗೆ 5,300 ಕೋಟಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಘೋಷಣೆ ಮಾಡುವಿರಾ?

ಮಹದಾಯಿ ಯೋಜನೆಗೆ ಬಾಕಿ ಇರುವ ಪರಿಸರ ಇಲಾಖೆ ಅನುಮತಿ ಪತ್ರವನ್ನು ಕೊಡಿಸುವಿರಾ?

ಮೇಕೆದಾಟು ಯೋಜನೆಗೆ ಕಳೆದ 5 ವರ್ಷಗಳಿಂದ ಅನುಮತಿ ಕೊಡದೆ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಸರಿಪಡಿಸಿ ಅನುಮತಿ ನೀಡುವಿರಾ?

ದಕ್ಷಿಣ ಭಾರತದ ಎಲ್ಲಾ ಲೋಕಸಭಾ ಸೀಟುಗಳನ್ನು ಹೇಗೆ ಇವೆಯೊ ಅದೇ ರೀತಿ ಉಳಿಸುವಿರಾ.

ಈ ಸಂದರ್ಭದಲ್ಲಿ ಕೆೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಹ ಅಧ್ಯಕ್ಷ ವಿಜಯ ಮತ್ತಿಕಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ರಾಮಚಂದ್ರಪ್ಪ, ಕೆಪಿಸಿಸಿ ಕಾನೂನು ವಿಭಾಗದ ಉಪಾಧ್ಯಕ್ಷ ದಿವಾಕರ್ ಉಪಸ್ಥಿತರಿದ್ದರು.

More News

You cannot copy content of this page