ಬೆಂಗಳೂರು: ಗ್ಯಾರಂಟಿಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಯನ್ನೇ ತಿರುಚಿ ರಾಜಕೀಯಕರಣಗೊಳಿಸುತ್ತಿರುವ ಕಾಂಗ್ರೆಸ್ ಪಕ್ಷ ಹಾಗೂ ಆ ಪಕ್ಷದ ನಾಯಕರ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಜೆಡಿಎಎಸ್; ಸತ್ಯವನ್ನು ವಕ್ರೀಕರಿಸುವುದು, ತಿರುಚುವುದು ಕಾಂಗ್ರೆಸ್ ಪಕ್ಷದ ಪುರಾತನ-ಪರಂಪರಾಗತ ಚಾಳಿ. 75 ವರ್ಷಗಳಿಂದ ಇದನ್ನೇ ಮಾಡಿಕೊಂಡು ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ಆಳುತ್ತಿದೆ. ಈಸ್ಟ್ ಇಂಡಿಯಾ ಕಂಪನಿಯ ಆಧುನಿಕ ಅವತಾರವೇ ಕಾಂಗ್ರೆಸ್. ಜನರನ್ನು ರಣಹದ್ದಿನಂತೆ ಕಿತ್ತು ತಿನ್ನುತ್ತಿದೆ ಹಾಗೂ ಕರ್ನಾಟಕದಲ್ಲಿ ತನ್ನ ರಕ್ಕಸಭೋಜನ ಮುಂದುವರಿದೆ ಎಂದು ಕಿಡಿಕಾರಿದೆ.
ತುರುವೇಕೆರೆಯಲ್ಲಿ ಕುಮಾರಸ್ವಾಮಿ ಅವರು ಹೇಳಿದ್ದನ್ನು ಕಾಂಗ್ರೆಸ್ ʼಫೇಕ್ ಫ್ಯಾಕ್ಟರಿʼ ತಿರುಚಿ ಮೈ ಪರಚಿಕೊಳ್ಳುತ್ತಿದೆ. “ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ” ಎಂದು ಹಸಿಸುಳ್ಳು ಹಬ್ಬಿಸುತ್ತಿದೆ. ನೆನಪಿರಲಿ, ಇದೇ ಹಳ್ಳಿ ತಾಯಂದಿರ ಬದುಕಿಗೆ ನರಕವಾಗಿದ್ದ ಸಾರಾಯಿ, ಲಾಟರಿ ನಿಷೇಧ ಮಾಡಿ ಅವರ ಮಾಂಗಲ್ಯ ಉಳಿಸಿದ್ದು ಇದೇ ಕುಮಾರಸ್ವಾಮಿ ಅವರು. ನಿತ್ಯನರಕವಾಗಿದ್ದ ಅವರ ಬದುಕಿಗೆ ಸಾಂತ್ವನ ಹೇಳಿದ್ದೂ ಇವರೇ. ವಿಧವಾ ಪಿಂಚಣಿಯನ್ನು ₹200 ರಿಂದ ₹400ಕ್ಕೆ ಹೆಚ್ಚಿಸಿ ಅವರಿಗೆ ಶಕ್ತಿ ತುಂಬಿದ್ದು ಕುಮಾರಸ್ವಾಮಿ ಅಲ್ಲವೇ? ಎಂದು ಜೇಡಿಎಸ್ ಪ್ರಶ್ನಿಸಿದೆ.
ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ
2018-19ರಲ್ಲಿ ಕಾಂಗ್ರೆಸ್ ವಿರೋಧ ಲೆಕ್ಕಿಸದೆ ರೈತರ ₹25,000 ಕೋಟಿ ಸಾಲ ಮಾಡಿದ್ದು ಕುಮಾರಸ್ವಾಮಿ ಅವರು. ಸಾಲ ಮನ್ನಾ ನಮ್ಮ ಕಾರ್ಯಕ್ರಮವೇ ಅಲ್ಲ; ನಮ್ಮ ಭಾಗ್ಯಗಳಿಗೆ ನಯಾಪೈಸೆ ಕಮ್ಮಿ ಆಗಂಗಿಲ್ಲ ಎಂದು ಟವೆಲ್ ಕೊಡವಿದ್ದು ಯಾರು ಕಾಂಗ್ರೆಸ್ಸಿಗರೇ? ನಿಮಗೆ ನೆನಪಿಲ್ಲವೇ? ಇಂಥ ಕುಮಾರಸ್ವಾಮಿ ಅವರು ಮಹಿಳೆಯರನ್ನು ಅಪಮಾನಿಸುತ್ತಾರೆಯೇ? ಸುಳ್ಳು ಹೇಳಿದರೆ ಜನ ನಂಬುತ್ತಾರೆಯೇ? ಎಂದು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.
ಢೋಂಗಿ ಗ್ಯಾರಂಟಿ ಕಾಂಗ್ರೆಸ್ ಸರಕಾರ!
ಕಾಂಗ್ರೆಸ್ ಮಾಡಿದ್ದೇನು? ಲಾಟರಿ ಕಿಂಗ್ ಗಳಿಗೆ ರತ್ನಗಂಬಳಿ ಹಾಸಿ ಲೂಟಿ ಮಾಡಿದ್ದು, ಮನೆಮನೆಗೂ ಹಳ್ಳಿಹಳ್ಳಿಗೂ ಸಾರಾಯಿ ಸಮಾರಾಧನೆ ಮಾಡಿದ್ದು ಕಾಂಗ್ರೆಸ್ ಸರಕಾರ. ಅಷ್ಟೇ ಏಕೆ? ಒಂದು ಕೈಯ್ಯಲ್ಲಿ ₹2000 ಕೊಟ್ಟು ಇನ್ನೊಂದು ಕೈಯ್ಯಲ್ಲಿ ತಾಯಂದಿರ ಮನೆಗಳ ಪಕ್ಕದ ಕಿರಾಣಿ ಅಂಗಡಿಗಳಲ್ಲಿಯೇ ಮದ್ಯದ ಬಾಟಲಿ ಮಾರಾಟ ಮಾಡುತ್ತಿರುವುದು ಇದೇ ಢೋಂಗಿ ಗ್ಯಾರಂಟಿ ಕಾಂಗ್ರೆಸ್ ಸರಕಾರ! ಇಲ್ಲಾ ಎನ್ನಲು ಅವರಿಗೆ ಧೈರ್ಯ, ನೈತಿಕತೆ ಇದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸುಪ್ರಭಾತಕ್ಕೆ ಮೊದಲೇ ಮದ್ಯದ ಘಾಟು
ಸ್ವಚ್ಛ ಮನಸ್ಸಿನ ಹಳ್ಳಿಗಳಲ್ಲಿ ಸುಪ್ರಭಾತದ ವೇಳೆಗೆ ದೇವಾಲಯದ ಘಂಟೆನಾದ ಮೊಳಗುತ್ತಿತ್ತು. ಉಷೋದಯಕ್ಕೆ ಮೊದಲೇ ಹಳ್ಳಿಗೆ ಹಳ್ಳಿಯೇ ಮಂಗಳಕರವಾಗಿ ಕಂಗೊಳಿಸುತ್ತಿತ್ತು. ತಾಯಂದಿರು ಮನೆಗಳ ಮುಂದೆ ರಂಗೋಲಿ ಬಿಡಿಸುತ್ತಿದ್ದರೆ, ಪುರುಷರು ಹೊಲ-ತೋಟದ ಕೆಲಸಗಳಿಗೆ ಹೋಗುತ್ತಿದ್ದರು. ಗ್ಯಾರಂಟಿಗಳು ಬಂದ ಮೇಲೆ ಏನಾಗಿದೆ? ತಾಯಂದಿರು ರಂಗೋಲಿ ಬಿಡಿಸುವ ಮುನ್ನವೇ ಕಿರಾಣಿ ಅಂಗಡಿಗಳಲ್ಲಿ, ಹಾದಿಬೀದಿಗಳ ಬಾರ್ ಗಳಲ್ಲಿ ಮದ್ಯದ ಘಾಟು ಹೊಡೆಯುತ್ತಿದೆ. ತಾಯಂದಿರ ಸಬಲೀಕರಣ, ಆರ್ಥಿಕ ಸ್ವಾತಂತ್ರ್ಯ, ಸ್ವಾಭಿಮಾನ ಎಂದರೆ ಸೂರ್ಯೋದಕ್ಕೆ ಮೊದಲೇ ಮದ್ಯ ಮಾರಾಟ ಮಾಡುವುದೇ? ಎಂದು ಜೆಡಿಎಸ್ ಪಕ್ಷವು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ
ಕಾಂಗ್ರೆಸ್ ದಾರಿದ್ರ್ಯ ಎಲ್ಲಿಗೆ ಬಂದು ನಿಂತಿದೆ ನೋಡಿ.. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಮದ್ಯಪಾನಕ್ಕೆ ಭಾರೀ ಪ್ರೋತ್ಸಾಹ ಕೊಡುವುದು ʼಕಾಂಗ್ರೆಸ್ ಪಕ್ಷದ ಸಾಮಾನ್ಯ ಕನಿಷ್ಠ ಕಾರ್ಯಕ್ರಮʼ ಆಗಿದೆ. ಶ್ರೀಗಂಧ, ಸುಗಂಧದ ನಾಡಾಗಿರುವ ಕರ್ನಾಟಕವನ್ನು ಮದ್ಯದ ಬೀಡನ್ನಾಗಿಸುತ್ತಿದೆ. ಇದನ್ನು ಪ್ರಶ್ನಿಸಿದರೆ ತಾಯಂದಿರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದ ಹಾಗೆಯೇ? ಕುಮಾರಸ್ವಾಮಿ ಅವರು ಹೇಳಿದ್ದು.. ಗ್ಯಾರಂಟಿಗಳಿಂದ ತಾಯಂದಿರನ್ನು ದಿಕ್ಕು ತಪ್ಪಿಸುತ್ತಿದೆ ಎಂದು. ಉಚಿತ ಆರೋಗ್ಯ, ಉಚಿತ ಶಿಕ್ಷಣ ನೀಡುವ ಬದಲು ಅಗ್ಗದ ರಾಜಕೀಯ ಲಾಭ ಮಾಡಿಕೊಳ್ಳುತ್ತಿದೆ ಎಂದು. ಕಾಂಗ್ರೆಸ್ ತನ್ನ ಪಾಪಗಳನ್ನು ಮುಚ್ಚಿಟ್ಟುಕೊಳ್ಳಲು ಸತ್ಯಕ್ಕೆ ಸುಳ್ಳಿನ ಮುಖವಾಡ ಹಾಕುತ್ತಿದೆ. ನಿಜಕ್ಕಾದರೆ, ದಾರಿ ತಪ್ಪುತ್ತಿರುವುದು ರಾಜ್ಯದ ಆರ್ಥಿಕತೆ, ಕರ್ನಾಟಕದ ಹೆಗ್ಗಳಿಕೆ, ಕರ್ನಾಟಕ ಪ್ರತಿಷ್ಠೆ. ಹೆಚ್ಚುತ್ತಿರುವುದು ತಾಯಂದಿರ ಮೇಲಿನ ಸಾಲ. ಈ ವರ್ಷ ₹1 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡುವ ಗುರಿ ಇಟ್ಟುಕೊಂಡಿದೆ ಈ ಸರಕಾರ. ಆ ಸಾಲ ತೀರಿಸೋರು ಯಾರು? ಕಾಂಗ್ರೆಸ್ ತನ್ನ ಖಜಾನೆಯಿಂದ ತೀರಿಸುತ್ತದೆಯೇ? ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.